Advertisement

ವಿಕಲಚೇತನರ ಬೆನ್ನೆಲುಬಾಗಿರಲಿದೆ ಕಾಂಗ್ರೆಸ್‌: ಮಂಜಪ್ಪ

06:14 AM Feb 11, 2019 | |

ದಾವಣಗೆರೆ: ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೆಲ್ಲಾ ವಿಕಲಚೇತನರಿಗೆ ಸಾಕಷ್ಟು ಸೌಲಭ್ಯಗಳನ್ನು ಒದಗಿಸುತ್ತಾ ಬಂದಿದ್ದು, ಮುಂದೆಯೂ ತಮಗೆ ಬೆನ್ನೆಲುಬಾಗಿರುತ್ತದೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್.ಬಿ. ಮಂಜಪ್ಪ ಹೇಳಿದರು. ನಗರದ ಮೋತಿವೀರಪ್ಪ ಪಪೂ ಕಾಲೇಜು ಆವರಣದಲ್ಲಿ ಭಾನುವಾರ ಜಿಲ್ಲಾ ಕಾಂಗ್ರೆಸ್‌ ವಿಕಲಚೇತನ ಘಟಕದ ಪ್ರಥಮ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

Advertisement

ಸರ್ಕಾರದಿಂದ ವಿಕಲಚೇತನರಿಗೆ ಅವಶ್ಯಕವಾದ ಸವಲತ್ತುಗಳನ್ನು ಕಾಂಗ್ರೆಸ್‌ ಅಧಿಕಾರದಲ್ಲಿ ಇದ್ದಾಗ ದೊರಕಿಸಿಕೊಡುತ್ತಾ ಬಂದಿದೆ. ಮುಂದೆಯೂ ಹೀಗೆ ತಮ್ಮ ಜೊತೆಗಿರುತ್ತದೆ. ವಿಕಲಚೇತನರು ಎದೆಗುಂದಬೇಕಿಲ್ಲ. ದ್ವಿಚಕ್ರವಾಹನ, ಮಾಸಿಕ ಭತ್ಯೆ ಸೇರಿದಂತೆ ದೊರೆಯಬೇಕಾದ ಸವಲತ್ತುಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಮತ್ತೂಮ್ಮೆ ರಾಜ್ಯ ಮುಖಂಡರ ಗಮನಕ್ಕೆ ತರುವುದಾಗಿ ಹೇಳಿದರು.

ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಸಚಿವರಾಗಿದ್ದ ಸಂದರ್ಭದಲ್ಲಿ ಅಂಗವಿಕಲರಿಗಾಗಿ ಸಾಕಷ್ಟು ಅನುಕೂಲ ಕಲ್ಪಿಸಿದ್ದಾರೆ. ಶೋಷಿತ ವರ್ಗದ ದನಿಯಾಗಲು, ನ್ಯಾಯಕೊಡಿಸಲು ಕಾಂಗ್ರೆಸ್‌ ಅನೇಕ ಸಂಘಟನೆಗಳನ್ನು ರೂಪಿಸಿದ್ದು, ಎಲ್ಲರೂ ಸಂಘಟನೆಯಲ್ಲಿ ಸಕ್ರೀಯರಾಗಿ ಪಾಲ್ಗೊಳ್ಳುವ ಮೂಲಕ ಕಾಂಗ್ರೆಸ್‌ ಬಲಪಡಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ದಿನೇಶ್‌ ಕೆ. ಶೆಟ್ಟಿ ಮಾತನಾಡಿ, ವಿಕಲಚೇತನರು ತಮ್ಮ ವಿವಿಧ ಬೇಡಿಕೆ ಈಡೇರಿಕೆಗೆ ಮನವಿ ಸಲ್ಲಿಸಿದ್ದು, ಈ ಕುರಿತು ಪಕ್ಷದ ರಾಜ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಗೃಹಸಚಿವ ಪರಮೇಶ್ವರ್‌, ಈಶ್ವರ ಖಂಡ್ರೆ ಮತ್ತಿತರ ಮುಖಂಡರ ಗಮನಕ್ಕೆ ತಂದು ತ್ವರಿತವಾಗಿ ಪರಿಹಾರ ಕೈಗೊಳ್ಳಲು ಮನವಿ ಮಾಡುತ್ತೇವೆ ಎಂದು ಹೇಳಿದರು.

ವಿಕಲಚೇತನರು ತಮಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ಕರೆ ಮಾಡಿ ಹೇಳಿಕೊಳ್ಳಬಹುದು. ಇದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ವಾಟ್ಸ್‌ ಆ್ಯಪ್‌ ಗ್ರೂಪ್‌ ಸಹ ರಚಿಸಿದ್ದು, ಯಾವುದೇ ತಹಶೀಲ್ದಾರ್‌, ಜಿಲ್ಲಾಧಿಕಾರಿ, ಪಾಲಿಕೆ ಮತ್ತಿತರ ಕಚೇರಿಗಳಲ್ಲಿನ ಯಾವುದೇ ಕೆಲಸವಿದ್ದರೂ ನಮ್ಮೊಡನೆ ಚರ್ಚಿಸಬಹುದು ಎಂದರು. ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ವಿಕಲಚೇತನ ಘಟಕದ ರಾಜ್ಯಾಧ್ಯಕ್ಷ ಎಸ್‌. ಬಸವಣ್ಣ ಅಧ್ಯಕ್ಷತೆ ವಹಿಸಿದ್ದರು. ದೂಡಾ ಮಾಜಿ ಅಧ್ಯಕ್ಷ ಅಯೂಬ್‌ ಪೈಲ್ವಾನ್‌, ಗೀತಾ ಕದರಮಂಡಲಗಿ, ಚಂದ್ರಮ್ಮ, ಮಹಾಂತೇಶ್‌, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವಿಕಲಚೇತನ ಘಟಕ ಅಧ್ಯಕ್ಷ ಸೈಯದ್‌ ತೌಸಿಫ್‌, ವೀರಯ್ಯಸ್ವಾಮಿ, ಮಾಜಿ ಮೇಯರ್‌ ಅನಿತಾಬಾಯಿ ಇತರರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next