ಬೆಂಗಳೂರು: ಕಾಂಗ್ರೆಸ್ ಶಾಸಕ ಎಸ್.ಟಿ. ಸೋಮಶೇಖರ್ ಹೇಳಿಕೆಗೆ ಖಾರವಾಗಿ ತಿರುಗೇಟು ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಪದ ತ್ಯಾಗ ಮಾಡುವುದಾಗಿ ಹೇಳಿದ್ದು ಕಾಂಗ್ರೆಸ್ ವಲಯದಲ್ಲಿ ತಲ್ಲಣ ಉಂಟು ಮಾಡಿತಲ್ಲದೆ ತಕ್ಷಣ ಎಚ್ಚೆತ್ತ ಹೈಕಮಾಂಡ್ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಯಿತು.
ಕುಮಾರಸ್ವಾಮಿ ಹೇಳಿಕೆ ಹೊರಬೀಳುತ್ತಿದ್ದಂತೆ ಎಸ್.ಟಿ. ಸೋಮಶೇಖರ್ ಅವರಿಗೆ ನೋಟಿಸ್ ನೀಡುವಂತೆ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಹೈಕಮಾಂಡ್ ಸೂಚಿಸಿತು. ಅಷ್ಟೇ ಅಲ್ಲದೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮೇಲೆ ಕಾಂಗ್ರೆಸ್ ಹೈಕಮಾಂಡ್‌ಗೆ ಸಂಪೂರ್ಣ ನಂಬಿಕೆಯಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಟ್ವೀಟ್ ಮಾಡುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ನಡೆಸಿದರು.
ಜತೆಗೆ ದಿನೇಶ್ ಗುಂಡೂರಾವ್ ಕೂಡ ಎಸ್.ಟಿ. ಸೋಮಶೇಖರ್ ಅವರಿಗೆ ಖಡಕ್ ಎಚ್ಚರಿಕೆ ನೀಡಿ, ಸರ್ಕಾರದ ವಿರುದ್ಧ ಮಾತನಾಡಿರುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಈ ರೀತಿಯ ನಡವಳಿಕೆ ಪಕ್ಷ ಸಹಿಸುವುದಿಲ್ಲ ಎಂಬ ಎಚ್ಚರಿಕೆ ನೀಡಿದರು. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಆರಂಭದಲ್ಲಿ ಸೋಮಶೇಖರ್ ಹೇಳಿಕೆಯನ್ನು ಸಮರ್ಥಿಸಿಕೊಂಡು, ಸಿದ್ದರಾಮಯ್ಯ ಐದು ವರ್ಷ ಉತ್ತಮ ಆಡಳಿತ ನೀಡಿದ್ದಾರೆ. ನಮ್ಮ ಪಕ್ಷದ ಹಿರಿಯ ನಾಯಕರು, ನಮ್ಮ ಶಾಸಕರು ಅವರ ಬಗ್ಗೆ ಒಳ್ಳೆಯ ಮಾತು ಆಡಿದರೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದು ಹೇಳಿದರು.
ಸೋಮಶೇಖರ್ ಹೇಳಿಕೆಗೆ ಜೆಡಿಎಸ್‌ನಿಂದ ಖಾರವಾದ ಪ್ರತಿಕ್ರಿಯೆಗಳು ಹೆಚ್ಚಾದ ಮೇಲೆ ತಕ್ಷಣ ದಿನೇಶ್ ಗುಂಡೂರಾವ್, ಎಸ್.ಟಿ. ಸೋಮಶೇಖರ್ ಅವರನ್ನು ಪಕ್ಷದ ಕಚೇರಿಗೆ ಕರೆಸಿ ವಿವರಣೆ ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ಸೋಮಶೇಖರ್, ಕನಕ ಜಯಂತಿ ಕಾರ್ಯಕ್ರಮದಲ್ಲಿ ರಸ್ತೆ ಡಾಂಬರೀಕರಣ ಮಾಡಲು ಕುರುಬ ಸಂಘಟನೆಯವರು ಒತ್ತಾಯ ಮಾಡಿದ್ದರು. ಈ ಬಗ್ಗೆ ಕ್ರಿಯಾಯೋಜನೆ ತಯಾರಿಸಿ ಮಾಡಿಕೊಡುವುದಾಗಿ ಹೇಳಿದ್ದೆ. ಸಮ್ಮಿಶ್ರ ಸರ್ಕಾರದಲ್ಲಿ ಅನೇಕ ಕಾರ್ಯಕ್ರಮಗಳು ಆಗಿವೆ ಎಂದು ಸಮಜಾಯಿಸಿ ನೀಡಿದರು.
ನಾನು ಮುಖ್ಯಮಂತ್ರಿ ಬಗ್ಗೆ ಯಾವುದೇ ರೀತಿಯ ಹೇಳಿಕೆ ನೀಡಿಲ್ಲ. ಅವರ ಬಗ್ಗೆ ನನಗೆ ಅಪಾರ ಗೌರವ ಇದೆ. ಮೈತ್ರಿ ಸರ್ಕಾರದ ಚೌಕಟ್ಟಿನಲ್ಲಿ ನಾನು ನಡೆದುಕೊಂಡಿದ್ದೇನೆ. ಮೈತ್ರಿ ಧರ್ಮ ಮೀರಿ ನಾನು ನಡೆದುಕೊಂಡಿಲ್ಲ. ನಾನು ಯಾರಿಗೂ ನೋವಾಗುವ ರೀತಿಯಲ್ಲಿ ಹೇಳಿಕೆ ನೀಡಿಲ್ಲ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ, ಅವರ ಕ್ಷಮೆ ಕೋರುವುದಾಗಿ ಸ್ಪಷ್ಟಪಡಿಸಿದರು. ಇದಕ್ಕೆ ಸಮಾಧಾನ ವ್ಯಕ್ತಪಡಿಸಿದ ದಿನೇಶ್ ಗುಂಡೂರಾವ್, ಸಮ್ಮಿಶ್ರ ಸರ್ಕಾರದ ವ್ಯವಸ್ಥೆಯಲ್ಲಿ ಯಾರೇ ಆದರೂ ಗೊಂದಲದ ಹೇಳಿಕೆಗಳನ್ನು ನೀಡಬಾರದು. ಎಲ್ಲರೂ ಮೈತ್ರಿ ಧರ್ಮದ ಲಕ್ಷ್ಮಣ ರೇಖೆ ಮೀರಬಾರದು. ಆ ರೀತಿ ಯಾರೇ ನಡೆದುಕೊಂಡರೂ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಆದರೆ, ಸೋಮಶೇಖರ್ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿರುವುದರಿಂದ ಅವರ ವಿರುದ್ದ ಕ್ರಮ ಜರುಗಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಕಾಂಗ್ರೆಸ್ ಶಾಸಕರ ಹೇಳಿಕೆಯಿಂದ ಅವರ ಮನಸ್ಸಿಗೆ ನೋವಾಗಿರಬಹುದು.ಅವರು ರಾಜೀನಾಮೆ ಕೊಡುವ ಅಗತ್ಯವಿಲ್ಲ. ಸಿದ್ದರಾಮಯ್ಯ ಯಾವತ್ತೂ ತಾವು ಮುಖ್ಯಮಂತ್ರಿ ಎಂದು ಹೇಳಿಲ್ಲ. ಅವರು ಐದು ವರ್ಷ ಮುಖ್ಯಮಂತ್ರಿಯಾಗಿ ಉತ್ತಮ ಕೆಲಸ ಮಾಡಿರುವುದರಿಂದ ಕೆಲವರು ಆ ರೀತಿಯ ಭಾವನೆ ವ್ಯಕ್ತಪಡಿಸಿರಬಹುದು.
– ಡಾ.ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿ
ಕುಮಾರಸ್ವಾಮಿ ಅವರ ಮೇಲೆ ಕಾಂಗ್ರೆಸ್ ಹೈಕಮಾಂಡ್ ಸಂಪೂರ್ಣ ಭರವಸೆ ಇಟ್ಟಿದೆ. ಸಮ್ಮಿಶ್ರ ಸರ್ಕಾರ ಕರ್ನಾಟಕದ ಜನತೆಯ ಆಶಯದಂತೆ ಜನಪ್ರಿಯ ಹಾಗೂ ಕಲ್ಯಾಣ ಕಾರ್ಯಕ್ರಮಗಳನ್ನು ನೀಡುತ್ತ ಉತ್ತಮ ಆಡಳಿತ ನೀಡುತ್ತಿದೆ.
– ಕೆ.ಸಿ.ವೇಣುಗೋಪಾಲ್,ರಾಜ್ಯ ಕಾಂಗ್ರೆಸ್ ಉಸ್ತುವಾರಿ