ಹೊಸದಿಲ್ಲಿ : ಕಾಂಗ್ರೆಸ್ ಪಕ್ಷ ಯಾವತ್ತೂ ಭಯೋತ್ಪಾದನೆ ವಿರುದ್ಧ ಮೃದು ಧೋರಣೆ ಹೊಂದಿತ್ತು ಎಂದು ಆರೋಪಿಸುವ ಮೂಲಕ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ದೇಶದ ಭದ್ರತೆಯ ವಿಷಯದಲ್ಲಿ ಕಾಂಗ್ರೆಸ್ ವಿರುದ್ಧ ಕಟುವಾದ ಟೀಕೆ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷ ಯಾವತ್ತೂ ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ನಕ್ಸಲ್‌ವಾದದ ಬಗ್ಗೆ ತುಂಬ ಸಂಕೋಚದ ಪ್ರವೃತ್ತಿ ಹೊಂದಿತ್ತು; ದೇಶದ ಭದ್ರತೆಗೆ ಬೆದರಿಕೆ ಒಡ್ಡುವ ಈ ಪಿಡುಗುಗಳ ಬಗ್ಗೆ ಅದೆಂದೂ ನಿರ್ಣಾಯಕ ದಿಟ್ಟ ಕ್ರಮ ತೆಗೆದುಕೊಂಡಿರಲಿಲ್ಲ ಎಂದು ಅಮಿತ್ ಶಾ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಕ್ಸಮರ ನಡೆಸಿದರು.
ಕಾಂಗ್ರೆಸ್‌ಪಕ್ಷಕ್ಕೆ ವ್ಯತಿರಿಕ್ತವಾಗಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ರಾಷ್ಟ್ರೀಯ ಏಕತೆ, ಭದ್ರತೆ ಮತ್ತು ಭಾವೈಕ್ಯದ ಹಿತಾಸಕ್ತಿಯಲ್ಲಿ ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ನಕ್ಸಲ್‌ವಾದದ ವಿರುದ್ಧ ದೃಢವಾದ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದರು.
ಅಮಿತ್ ಶಾ ಅವರು ತಮ್ಮ ಸುದೀರ್ಘ ಬ್ಲಾಗ್ ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕಂದಹಾರ ಹೈಜಾಕಿಂಗ್ ಕೇಸನ್ನು ರಾಜಕೀಯಗೊಳಿಸುತ್ತಿರುವುದನ್ನು ಕಟುವಾಗಿ ಖಂಡಿಸಿದ್ದಾರೆ.
ಜೈಶ್ ಎ ಮೊಹಮ್ಮದ್ ಸ್ಥಾಪಕ ಉಗ್ರ ಮಸೂದ್ ಅಜರ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪಾಕಿಸ್ಥಾನದ ಮೇಲೆ ಅಂತಾರಾಷ್ಟ್ರೀಯ ಸಮುದಾಯ ತೀವ್ರವಾದ ಒತ್ತಡ ಹೇರುತ್ತಿರುವ ನಡುವೆ ರಾಹುಲ್ ಕಂದಹಾರ್ ವಿಷಯವನ್ನು ರಾಜಕೀಯಗೊಳಿಸುತ್ತಿರುವುದು ದುರದೃಷ್ಟಕರ ಎಂದು ಶಾ ಹೇಳಿದ್ದಾರೆ.