Advertisement

ಕಾಂಗ್ರೆಸ್‌ನಿಂದ ಎಲೆಕ್ಟೋರಲ್‌ ಬಾಂಡ್‌ ಅಸ್ತ್ರ ; ಸಂಸತ್‌ನಲ್ಲಿ ಕೇಂದ್ರದ ವಿರುದ್ಧ ವಾಗ್ಧಾಳಿ

09:32 AM Nov 23, 2019 | Team Udayavani |

ಹೊಸದಿಲ್ಲಿ: ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಗುರುವಾರ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್‌ ಹೊಸ ಅಸ್ತ್ರ ಪ್ರಯೋಗಿಸಿದೆ. ಮೋದಿ ಸರಕಾರ ಪರಿಚಯಿಸಿದ ಎಲೆಕ್ಟೋರಲ್‌ ಬಾಂಡ್‌ ಮೂಲಕ ಅಕ್ರಮ ಎಸಗಲಾಗುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಚುನಾವಣಾ ಬಾಂಡ್‌ ಮೂಲಕ ಸರಕಾರವು ಭ್ರಷ್ಟಾಚಾರವನ್ನು ಅಧಿಕೃತಗೊಳಿಸಿದೆ. ಇದೊಂದು ಹಣಕಾಸು ಅಕ್ರಮ ಸಾಗಾಟ ಹಗರಣವಾಗಿದ್ದು, ದೇಶವನ್ನು ಲೂಟಿ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

Advertisement

ಈ ಕುರಿತು ಕಾಂಗ್ರೆಸ್‌ ನಾಯಕರಾದ ಮನೀಷ್‌ ತಿವಾರಿ, ಅಧೀರ್‌ ರಂಜನ್‌ ಚೌಧರಿ ಮಾತನಾಡಿ, ‘ಆರ್‌ಬಿಐ ಹಾಗೂ ಚುನಾವಣಾ ಆಯೋಗವೇ ಕೆಲ ಆಕ್ಷೇಪಗಳನ್ನು ಸಲ್ಲಿಸಿದ ಹೊರತಾಗಿಯೂ ಕೇಂದ್ರ ಸರಕಾರ ಚುನಾವಣಾ ಬಾಂಡ್‌ ಪರಿಚಯಿಸಿತು. ಇದರಿಂದಾಗಿ ರಾಜಕೀಯ ಪಕ್ಷಗಳಿಗೆ ಬರುವ ದೇಣಿಗೆಯು ಬೇನಾಮಿ ಆಯಿತು. ದೇಣಿಗೆ ಕೊಟ್ಟವರು ಯಾರು, ಸ್ವೀಕರಿಸಿದವರು ಯಾರು ಎಂಬುದು ಜನರಿಗೆ ಗೊತ್ತಾಗುತ್ತಿಲ್ಲ. ಅನಾಮಧೇಯ ವ್ಯಕ್ತಿಗಳು ಬಾಂಡ್‌ ಪಡೆದು, ದೇಣಿಗೆ ನೀಡಲಾರಂಭಿಸಿದರು. ಒಟ್ಟಿನಲ್ಲಿ ಈ ಯೋಜನೆ ಮೂಲಕ ಭ್ರಷ್ಟಾಚಾರವನ್ನು ಮುಚ್ಚಿಹಾಕಲಾಗುತ್ತಿದೆ’ಎಂದು ಆರೋಪಿಸಿದರು.

ಶೂನ್ಯ ಅವಧಿಯಲ್ಲಿ ಈ ಕುರಿತು ಪ್ರಸ್ತಾಪಿಸಿದ ತಿವಾರಿ, ಇದರ ಹಿಂದೆ ಪ್ರಧಾನಿ ಕಾರ್ಯಾಲಯದ ಕೈವಾಡವಿದೆ ಎಂದು ಆರೋಪಿಸಿದರು. ಕೂಡಲೇ ಸ್ಪೀಕರ್‌ ಓಂ ಬಿರ್ಲಾ ಅವರು ತಿವಾರಿ ಅವರ ಮೈಕ್‌ ಆಫ್ ಮಾಡಿದರು. ಇದರಿಂದ ಕ್ರುದ್ಧಗೊಂಡ ಕಾಂಗ್ರೆಸ್‌ ಸದಸ್ಯರು, ಕಲಾಪ ಬಹಿಷ್ಕರಿಸಿ ಹೊರನಡೆದರು.

ಹೂಡಿಕೆ ವಾಪಸ್‌ಗೆ ಕಿಡಿ: ಇದರ ಜೊತೆಗೆ, ಬಿಪಿಸಿಎಲ್‌ ಸೇರಿದಂತೆ ಸರ್ಕಾರಿ ಸ್ವಾಮ್ಯದ ಕಂಪೆನಿಗಳ ಖಾಸಗೀಕರಣ ನಿರ್ಧಾರವನ್ನು ಕೂಡ ಕಾಂಗ್ರೆಸ್‌ ತೀವ್ರವಾಗಿ ವಿರೋಧಿಸಿದ್ದು, ಸರಕಾರವು ದೇಶವನ್ನು ಮಾರುತ್ತಿದೆ ಎಂದು ಕಿಡಿಕಾರಿದೆ.

ಕಾಂಗ್ರೆಸ್‌ ಸಂಸದನ ವಿರುದ್ಧ ಸ್ಪೀಕರ್‌ ಕೆಂಡ: ಕಲಾಪದ ವೇಳೆ ಪಂಜಾಬ್‌ನ ಕಾಂಗ್ರೆಸ್‌ ಸಂಸದ ರವ್ನೀತ್‌ ಸಿಂಗ್‌ ಬಿಟ್ಟು ವಿರುದ್ಧ ಸ್ಪೀಕಲ್‌ ಓಂ ಬಿರ್ಲಾ ಕೆಂಡಾಮಂಡಲರಾದ ಘಟನೆ ನಡೆಯಿತು. ಗಾಂಧಿ ಕುಟುಂಬಕ್ಕೆ ಎಸ್‌ಪಿಜಿ ಭದ್ರತೆ ವಾಪಸ್‌ ಪಡೆದ ಕುರಿತು ಸಿಂಗ್‌ ಪ್ರಸ್ತಾಪಿಸಿದಾಗ, ಅವರನ್ನು ಅರ್ಧಕ್ಕೆ ತಡೆದ ಸ್ಪೀಕರ್‌, ಶೂನ್ಯ ಅವಧಿಯಲ್ಲಿ ದೀರ್ಘ‌ಕಾಲ ಮಾತನಾಡುವಂತಿಲ್ಲ ಎಂದು ಸೂಚಿಸಿದರು. ಇದರಿಂದ ಕೋಪಗೊಂಡ ಸಿಂಗ್‌, ‘ನೀವೂ ಅವರ (ಬಿಜೆಪಿ) ಜೊತೆ ಶಾಮೀಲಾಗಿದ್ದೀರಿ’ ಎಂದು ಆರೋಪಿಸಿದರು. ಆಗ ಕ್ರುದ್ಧರಾದ ಸ್ಪೀಕರ್‌ ಬಿರ್ಲಾ, ‘ಸ್ಪೀಕರ್‌ ಹುದ್ದೆ ಬಗ್ಗೆ ಹೀಗೆಲ್ಲ ಹಗುರವಾಗಿ ಮಾತನಾಡಬೇಡಿ’ ಎಂದು ಎಚ್ಚರಿಸಿದರು.

Advertisement

ರಾಜ್ಯದಲ್ಲಿ 862 ವಕ್ಫ್ ಆಸ್ತಿ ಒತ್ತುವರಿ
ದೇಶಾದ್ಯಂತ ವಕ್ಫ್ ಬೋರ್ಡ್‌ನ ಸುಮಾರು 17 ಸಾವಿರ ಆಸ್ತಿಗಳನ್ನು ಒತ್ತುವರಿ ಮಾಡಲಾಗಿದೆ. ಈ ಪೈಕಿ ಅತಿ ಹೆಚ್ಚು ಆಸ್ತಿ ಕಬಳಿಕೆ ಆಗಿರುವುದು ಪಂಜಾಬ್‌ನಲ್ಲಿ (5,610) ಎಂದು ಸಚಿವ ಮುಖ್ತಾರ್‌ ಅಬ್ಟಾಸ್‌ ನಖ್ವೀ ಲೋಕಸಭೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕದಲ್ಲಿ 862, ಮಧ್ಯಪ್ರದೇಶದಲ್ಲಿ 3240, ಪ.ಬಂಗಾಲದಲ್ಲಿ 3082, ತ.ನಾಡಿನಲ್ಲಿ 1335 ವಕ್ಫ್ ಆಸ್ತಿ ಒತ್ತುವರಿ ನಡೆದಿದೆ ಎಂದೂ ಅವರು ಹೇಳಿದ್ದಾರೆ. ಈ ರೀತಿಯ ಕಬಳಿಕೆಗೆ ನಿಯಂತ್ರಣ ಹೇರಿ, ವಕ್ಫ್ ಆಸ್ತಿ ರಕ್ಷಿಸುವ ಸಲುವಾಗಿ ಆನ್‌ಲೈನ್‌ ಪೋರ್ಟಲ್‌ (ವಕ್ಫ್ ಅಸೆಟ್ಸ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ ಆಫ್ ಇಂಡಿಯಾ) ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.

ಚುನಾವಣಾ ಬಾಂಡ್‌ಗಳನ್ನು ವಿರೋಧಿಸುತ್ತಿರುವ ಎಲ್ಲರೂ ಕಪ್ಪು ಹಣದ ಮೂಲಕ ಚುನಾವಣೆ ಎದುರಿಸಿದವರು. ಭ್ರಷ್ಟರಿಗೆ ಸ್ವತ್ಛ, ತೆರಿಗೆ ಪಾವತಿಸಿದ ಪಾರದರ್ಶಕ ಹಣ ಬೇಕಾಗಿಲ್ಲ.
– ಪಿಯೂಷ್‌ ಗೋಯಲ್‌, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next