ಇಳಕಲ್ಲ: ರಾಜ್ಯದ ಬಿಜೆಪಿ ದುರಾಡಳಿತಕ್ಕೆ ಜನರು ಬೇಸತ್ತಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಹಿಡಿಯುವುದು ನಿಶ್ಚಿತ. ಕಾಂಗ್ರೆಸ್ ಪಕ್ಷ ಬಡವರ ಪಕ್ಷ. ಕಾಂಗ್ರೆಸ್ ಸದಸ್ಯತ್ವ ಹೊಂದಿ ದೇಶದ ಅಭಿವೃದ್ಧಿಗೆ ಬುನಾದಿ ಹಾಕಬೇಕು. ಸಿದ್ದರಾಮಯ್ಯನವರ ಅವಧಿಯಲ್ಲಾದ ಅಭಿವೃದ್ಧಿ ಕಾರ್ಯಗಳನ್ನು ಜನತೆಗೆ ತಿಳಿಸಿ ಜಾಗೃತಿ ಮೂಡಿಸಬೇಕು ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಇಲ್ಲಿಯ ಗೊಂಗಡಶೆಟ್ಟಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಹುನಗುಂದ ಮತಕ್ಷೇತ್ರದ ಡಿಜಿಟಲ್ ಸದಸ್ಯತ್ವದ ಮುಖ್ಯ ನೋಂದಣಿಕಾರರ ತರಬೇತಿ ಶಿಬಿರ, ಪ್ರಜಾ ಪಂಚಾಯಿತಿ ಪ್ರತಿನಿಧಿಗಳ ಮತ್ತು ಬೂತ್‌ಮಟ್ಟದ ಪ್ರತಿನಿಧಿಗಳ ಸದಸ್ಯತ್ವ ನೋಂದಣಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನ ಗಳಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯುವುದಾಗಿ ಹೇಳಿದರು. ಡಿಜಿಟಲ್ ಸದಸ್ಯತ್ವ ಹೆಚ್ಚಿಸುವ ಮೂಲಕ ಎಲ್ಲರೂ ಸೇರಿ ಪಕ್ಷವನ್ನು ಬಲಪಡಿಸೋಣ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿ, ಹಿಂದಿನ ಅವ ಧಿಯಲ್ಲಿ ಕ್ರಿಯಾಶೀಲರಾಗಿ ಸದಸ್ಯತ್ವ ಅಭಿಯಾನದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಪಾಲ್ಗೊಂಡ ಪರಿಣಾಮ ನಮ್ಮ ಮತಕ್ಷೇತ್ರ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿತ್ತು. ಆದರೆ, ಈ ಬಾರಿ ಕೇವಲ 1500 ಜನರನ್ನು ಮಾತ್ರ ಸದಸ್ಯರನ್ನು ನೋಂದಾಯಿಸಿರುವುದು ಬೇಸರದ ಸಂಗತಿ. ಕಾರ್ಯಕರ್ತರು ನಿರುತ್ಸಾಹಿಗಳಾಗಬಾರದು ಎಂದರು.
ಮುಂದಿನ ಚುನಾವಣೆಯಲ್ಲಿ ವಿಜಯಾನಂದ ಕಾಶಪ್ಪನವರನ್ನು ಅತ್ಯಧಿಕ ಮತಗಳಿಂದ ಆಯ್ಕೆ ಮಾಡುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ ಎಂದರು.
ಹುನಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ ದೊಡ್ಡಮನಿ ಮಾತನಾಡಿ, ಡಿಜಿಟಲ್ ಸದಸ್ಯತ್ವ ಅಭಿಯಾನದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಪಾತ್ರ ಅವಶ್ಯವಾಗಿದ್ದು, ಪ್ರತಿಯೊಬ್ಬ ಗ್ರಾಮ ಪಂಚಾಯಿತಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಮಾಡುವ ಮೂಲಕ ಕಾಂಗ್ರೆಸ್ ಪಕ್ಷ ಬಲಪಡಿಬೇಕು ಎಂದು ಹೇಳಿದರು.
ವೇದಿಕೆ ಮೇಲೆ ಕೆಪಿಸಿಸಿ ಜಿಲ್ಲಾ ಉಸ್ತುವಾರಿ ಪಾರಸಮಲ್ ಜೈನ್, ಹುನಗುಂದ ಮತಕ್ಷೇತ್ರದ ಉಸ್ತುವಾರಿ ನಿಜಾದ್ ಅಹಮ್ಮದ್, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸರಸ್ವರಿ ಈಟಿ, ಕಾಂಗ್ರೆಸ್ ಮುಖಂಡರಾದ ಶಾಂತಕುಮಾರ ಸುರಪುರ, ಶರಣಪ್ಪ ಆಮದಿಹಾಳ, ಆನಂದ ಬಾವೂರ, ಮುತ್ತಣ್ಣ ಕಲ್ಗುಡಿ ಹಾಗೂ ಇತರರು ಉಪಸ್ಥಿತರಿದ್ದರು.