ವಾಡಿ: ರಾಜ್ಯದ ನೊಂದ ಜನರ ದನಿಯಾಗಿ ಘರ್ಜಿಸುತ್ತಿರುವ ಹಾಗೂ ಚಿತ್ತಾಪುರ ಕ್ಷೇತ್ರವನ್ನು ಪ್ರಗತಿಯ ದಿಕ್ಕಿನೆಡೆ ಸಾಗಿಸುತ್ತಿರುವ ಶಾಸಕ ಪ್ರಿಯಾಂಕ್ ಖರ್ಗೆ ಅವರ ಗೆಲುವು ತಡೆಯಲು ಬಿಜೆಪಿಗರಿಗೆ ಸಾಧ್ಯವಿಲ್ಲ ಎಂದು ಅಖೀಲ ಭಾರತ ಬಂಜಾರಾ ಸೇವಾ ಸಂಘದ ಅಧ್ಯಕ್ಷ, ಯುವ ಕಾಂಗ್ರೆಸ್ ಮುಖಂಡ ಶಂಕರ ಜಾಧವ ಹೇಳಿದರು.
ಪಟ್ಟಣದ ಸೇವಾಲಾಲ ನಗರ ತಾಂಡಾಕ್ಕೆ ಭೇಟಿ ನೀಡಿದ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಹ್ಮದ್ ನಲಪಾಡ್, ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ, ಕೋಲಿ ಸಮಾಜದ ಹಿರಿಯ ಮುಖಂಡ ತಿಪ್ಪಣ್ಣಪ್ಪ ಕಮಕನೂರ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಅವರನ್ನು ಬಂಜಾರಾ ಸಮಾಜದಿಂದ ಸನ್ಮಾನಿಸಿ ಅವರು ಮಾತನಾಡಿದರು.
ಶಾಸಕ ಪ್ರಿಯಾಂಕ್ ಖರ್ಗೆ ಅವರು ಚಿತ್ತಾಪುರಕ್ಕೆ ಕಾಲಿಟ್ಟ ಗಳಿಗೆಯಿಂದ ಇಲ್ಲಿನ ಶೈಕ್ಷಣಿಕ ಕ್ಷೇತ್ರ ಗಮನಾರ್ಹ ರೀತಿಯಲ್ಲಿ ಸುಧಾರಣೆ ಕಂಡಿದೆ. ಅನೇಕ ಬಡ ಮಕ್ಕಳು ವಿದೇಶಗಳಲ್ಲಿ ಓದಲು ಧನಸಹಾಯ ಪಡೆದುಕೊಂಡಿದ್ದಾರೆ. ಬಂಜಾರಾ ಸಮುದಾಯದ ತಾಂಡಾಗಳಿಗೆ ಅನುದಾನ ಹರಿದು ಬಂದಿದ್ದು, ಅಭಿವೃದ್ಧಿ ಕಾಣುವಂತಾಗಿದೆ. ರಸ್ತೆಗಳು ಅಭಿವೃದ್ಧಿ ಕಂಡಿವೆ. ಸಾವಿರಾರು ಕೋಟಿ ಅನುದಾನ ತಂದಿರುವ ಓರ್ವ ಜನಪರ ಶಾಸಕ ಪ್ರಿಯಾಂಕ್ ಖರ್ಗೆ ಎಂಬುದು ಪ್ರತಿಯೊಬ್ಬರು ಮಾತಾಡುತ್ತಿದ್ದಾರೆ. ಬಿಜೆಪಿ ಮುಖಂಡರಿಗೆ ಸಹಿಸಲಾಗುತ್ತಿಲ್ಲ. ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ ಎಂದರು.
ಬಂಜಾರಾ ಸಮುದಾಯದ ಜನರನ್ನು ಕಾಂಗ್ರೆಸ್ ವಿರುದ್ಧ ಎತ್ತಿಕಟ್ಟುವ ಕೆಲಸ ಬಿಜೆಪಿ ಕೆಲ ಮುಖಂಡರು ಮಾಡುತ್ತಿದ್ದಾರೆ. ಶಾಸಕ ಪ್ರಿಯಾಂಕ್ ಖರ್ಗೆಯಿಂದ ಬಂಜಾರಾ ಸಮುದಾಯಕ್ಕೆ ಅನ್ಯಾಯವಾಗಿಲ್ಲ. ದ್ವೇಶ ರಾಜಕಾರಣ ಮಾಡದೆ ಎಲ್ಲ ತಳಸಮುದಾಯಗಳನ್ನು ಪ್ರೀತಿಸುತ್ತಿದ್ದಾರೆ. ಯಾರ ಅಪಪ್ರಚಾರಕ್ಕೂ ಬಲಿಯಾಗದೇ ಜನಪರ ಚಿಂತಕ ಪ್ರಿಯಾಂಕ್ ಖರ್ಗೆ ಗೆಲುವಿಗೆ ಶ್ರಮಿಸಲಿದ್ದಾರೆ ಎಂದರು.
ಮುಖಂಡರಾದ ರವಿ ಆರ್.ಬಿ. ಚವ್ಹಾಣ, ಚಂದು ಪವಾರ, ಹರೀಶ್ಚಂದ್ರ, ನಾಮದೇವ ರಾಠೊಡ, ಗೋಪಾಲ ಜಾಧವ, ಬಾಬು ನಾಯಕ, ಬಾಳು ಚವ್ಹಾಣ, ರವಿ ರಾಠೊಡ, ಅಶೋಕ ಪವಾರ, ಹಣಮಂತ ಚವ್ಹಾಣ, ಸಂಜಯ ರಾಠೊಡ, ಲಖನ್ ರಾಠೊಡ, ಶಂಕರ ಚವ್ಹಾಣ, ರಾಜು ರಾಠೊಡ, ಧನರಾಜ ರಾಠೊಡ, ವಿಕಾಸ ಚವ್ಹಾಣ, ಕುಮಾರ ಚವ್ಹಾಣ ಇದ್ದರು.