Advertisement
ನಿನ್ನೆ ರಾಹುಲ್‌ಗೆ ನಾಲ್ಕನೇ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡಿದಾಗಲೇ ಕಾಂಗ್ರೆಸ್ ನಾಯಕರು ಟೀಕೆಗಳ ಸುರಿಮಳೆಗೈದಿದ್ದರು. ಆದರೆ ಗಾಯದ ಮೇಲೆ ಉಪ್ಪು ಸವರಿದಂತೆ ಇಂದು ರಾಹುಲ್ ಆಸನ ಆರನೇ ಸಾಲಿಗೆ ಸ್ಥಳಾಂತರವಾಗಿತ್ತು. ಕಾಂಗ್ರೆಸ್ ನಾಯಕರಿಗೆ ಇದು ಉದ್ದೇಶಪೂರ್ವಕವಾಗಿ ಎಸಗಿದ ಅವಮಾನದಂತೆ ಕಾಣಿಸಿದೆ. ರಾಜ್ಯಸಭೆಯ ವಿಪಕ್ಷ ನಾಯಕ ಗುಲಾಂ ನಬಿ ಆಜಾದ್ ಜತೆ ಕುಳಿತು ರಾಹುಲ್ ಗಣರಾಜ್ಯೋತ್ಸವ ಕಾರ್ಯಕ್ರಮಗಳನ್ನು ವೀಕ್ಷಿಸಿದ್ದಾರೆ. ಪ್ರತಿ ವರ್ಷ ರಾಹುಲ್‌ಗೆ ಆಹ್ವಾನ ಹೋಗುತ್ತಿದ್ದರೂ ಅವರು ಗಣರಾಜ್ಯೋತ್ಸವಕ್ಕೆ ಬಂದಿರುವುದು ಬಹಳ ವರ್ಷಗಳ ಬಳಿಕ ಇದೇ ಮೊದಲು. ಕಳೆದ ಡಿಸೆಂಬರ್‌ನಲ್ಲಿ ಅಧ್ಯಕ್ಷ ಹುದ್ದೆಗೇರಿರುವ ರಾಹುಲ್‌ಗೆ ಮೊದಲ ಸಾಲಿನ ಆಸನ ನೀಡಬೇಕಾಗಿತ್ತು ಎನ್ನುವುದು ಕಾಂಗ್ರೆಸ್ ವಾದ. ಗಣರಾಜ್ಯೋತ್ಸವ ಆಸನ ವ್ಯವಸ್ಥೆ ಮಾಡಲು ಒಂದು ಶಿಷ್ಟಾಚಾರವಿದೆ. ಗೃಹ ಇಲಾಖೆ ಈ ಆದ್ಯತೆಯ ಶಿಷ್ಟಾಚಾರದ ಪ್ರಕಾರ ಆಸನಗಳನ್ನು ನೀಡುತ್ತದೆ. ರಾಹುಲ್ ಗಾಂಧಿ ಲೋಕಸಭೆಯಲ್ಲಿ ಅತಿ ದೊಡ್ಡ ವಿಪಕ್ಷದ ಅಧ್ಯಕ್ಷರಷ್ಟೆ. ಅವರ ಪಕ್ಷಕ್ಕೆ ಅಧಿಕೃತ ವಿಪಕ್ಷದ ಸ್ಥಾನಮಾನ ಇಲ್ಲ.ಲೋಕಸಭೆಯ ಮಟ್ಟಿಗೆ ಅವರು ಬರೀ ಸಂಸದರಷ್ಟೆ. ಈ ಪ್ರಕಾರ ಅವರಿಗೆ ನೀಡಿದ ಆಸನ ಸೂಕ್ತವಾಗಿದೆ ಎನ್ನುವುದು ಸರಕಾರದ ಸಮರ್ಥನೆ. ಆದರೆ ರಾಹುಲ್ ಗಾಂಧಿಯಲ್ಲಿ ತಮ್ಮ ಉದ್ಧಾರಕನನ್ನು ಕಾಣುತ್ತಿರುವ ಕಾಂಗ್ರೆಸ್ ಮಂದಿಗೆ ಸರಕಾರ ಈ ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದು ಸರಿಕಂಡಿಲ್ಲ. ಹೀಗಾಗಿ ಪಕ್ಷದ ವಕ್ತಾರ ರಣದೀಪ್ ಸುರ್ಜೆವಾಲಾರಿಂದ ಹಿಡಿದು ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ತನಕ ಎಲ್ಲರೂ ಇದು ಸರಕಾರದ ಕೀಳುಮಟ್ಟದ ರಾಜಕಾರಣ ಎಂದು ಟೀಕಾಪ್ರಹಾರಗಳನ್ನು ಮಾಡುತ್ತಿದ್ದಾರೆ. ಇಷ್ಟರತನಕ ಕಾಂಗ್ರೆಸ್ ಅಧಿಕಾರದಲ್ಲಿರಲಿ ಅಥವ ವಿಪಕ್ಷ ಸ್ಥಾನದಲ್ಲಿರಲಿ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಕ್ಷದ ಅಧ್ಯಕ್ಷರಿಗೆ ಮುಂದಿನ ಸಾಲಿನ ಆಸನವನ್ನು ನೀಡಲಾಗುತ್ತಿತ್ತು. ಈ ಸಂಪ್ರದಾಯ ಈ ವರ್ಷ ಬದಲಾಗಿರು ವುದನ್ನು ಪಕ್ಷಕ್ಕೆ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತಿದೆ. ಹಾಗೆಂದು ಗಣ ರಾಜ್ಯೋತ್ಸವ ವಿದಾವಕ್ಕೀಡಾಗುತ್ತಿರುವುದು ಇದೇ ಮೊದಲೇನಲ್ಲ. 2015 ರಲ್ಲಿ ಅರವಿಂದ ಕೇಜ್ರಿವಾಲ್‌ರನ್ನು ಗಣರಾಜ್ಯೋತ್ಸವಕ್ಕೆ ಆಹ್ವಾನಿಸಿಯೇ ಇರಲಿಲ್ಲ.
Advertisement
ಸಂಕುಚಿತ ಮನೋಭಾವ ಸರಿಯಲ್ಲ: ಆಸನ ವಿವಾದ
11:46 AM Jan 27, 2018 | |
Advertisement
Udayavani is now on Telegram. Click here to join our channel and stay updated with the latest news.