Advertisement
ಮೂಲತಃ ತುಮಕೂರು ಜಿಲ್ಲೆಯ ಮಧುಗಿರಿ ಹಾಗೂ ಕೊರಟಗೆರೆಯಿಂದ ಇಲ್ಲಿಯ ತನಕ ರಾಜಕಾರಣ ಮಾಡುತ್ತಾ ಬಂದಿದ್ದ ಪರಮೇಶ್ವರ್ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅನಿರೀಕ್ಷಿತ ಸೋಲು ಕಂಡು ರಾಜಕೀಯವಾಗಿ ಹಿನ್ನೆಡೆ ಅನುಭವಿಸಿದ ನಂತರ ಸುರಕ್ಷಿತ ಕ್ಷೇತ್ರದ ಹುಡುಕಾಟದಲ್ಲಿ ತೊಡಗಿದ್ದಾರೆ.
Related Articles
Advertisement
ಮೂರು ಕ್ಷೇತ್ರಗಳಲ್ಲಿ ಮತದಾರರ ಒಲವು, ಅವರ ಮನಸ್ಥಿತಿ, ತಮ್ಮ ಸ್ಪರ್ಧೆಯಿಂದ ಉದ್ಭವಿಸುವ ಪರಿಣಾಮಗಳನ್ನು ಈಗಿನಿಂದಲೇ ಊಹಿಸಿ ಅಗತ್ಯ ಭೂಮಿಕೆಯನ್ನು ಪರಮೇಶ್ವರ್ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ.
ಈ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳೇ ಹೆಚ್ಚಿದ್ದು ಸೂಕ್ತ ಕಾಂಗ್ರೆಸ್ ಅಭ್ಯರ್ಥಿಯ ಕೊರತೆಯಿಂದಾಗಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಮಹದೇವಪುರ, ಸಿ.ವಿ.ರಾಮನ್‌ನಗರ, ಪುಲಿಕೇಶಿನಗರ ಕ್ರಮವಾಗಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಪಾಲಾಗಿವೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿಯೇ ಮಹದೇವಪುರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಕಾಂಗ್ರೆಸ್ ನಾಯರು ಸಲಹೆ ನೀಡಿದ್ದರು. ಆದರೆ, ಪರಮೇಶ್ವರ್, ಇದನ್ನು ಗಂಭೀರವಾಗಿ ತೆಗೆದುಕೊಳ್ಳದೆ ಸ್ವಕ್ಷೇತ್ರದಿಂದಲೇ ಸ್ಪರ್ಧಿಸಿ ರಾಜಕೀಯ ಶಿಶುವಾಗಿದ್ದ ಜೆಡಿಎಸ್‌ನ ಸುಧಾಕರ್‌ಲಾಲ್ ವಿರುದ್ಧ 18155 ಮತಗಳ ಅಂತರದಿಂದ ಸೋಲು ಅನುಭವಿಸಿ ಪರಮೇಶ್ವರ್ ರಾಜಕೀಯ ಹಿನ್ನೆಡೆಯನ್ನು ಅನುಭವಿಸಿದ್ದರು.
ಕೊರಟಗೆರೆ ಕ್ಷೇತ್ರವನ್ನು ಕಳೆದುಕೊಂಡ ನಂತರ ಪರಮೇಶ್ವರ್ ತುಮಕೂರಿನಲ್ಲಿ ತಮ್ಮ ರಾಜಕೀಯ ಪ್ರಾಬಲ್ಯವನ್ನು ಮರುಸ್ಥಾಪಿಸಲು ಪ್ರಯತ್ನಿಸಿದರಾದರೂ ಟಿ.ಬಿ.ಜಯಚಂದ್ರ ಅವರ ಅಸಹಕಾರ ಮತ್ತು ಜೆಡಿಎಸ್‌ನ ಪ್ರಾಬಲ್ಯದಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಬೇರೂರಲು ಸಾಧ್ಯವಾಗುತ್ತಿಲ್ಲ.
ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ತಮ್ಮನ್ನು ನೇಮಿಸುವಂತೆ ಪರಮೇಶ್ವರ್, ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದರೂ ಈಗಾಗಲೇ ಉಸ್ತುವಾರಿ ಸಚಿವರಾಗಿರುವ ಟಿ.ಬಿ.ಜಯಚಂದ್ರ ಅವರಿಗೆ “ಡಿಸ್ಟರ್ಬ್’ ಮಾಡುವುದು ಬೇಡ ಎಂಬ ಕಾರಣಕ್ಕೆ ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ಪರಮೇಶ್ವರ್ ಅವರಿಗೆ ನೀಡಲಾಯಿತು.
ಒಲ್ಲದ ಮನಸ್ಸಿನಿಂದ ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ಜವಾಬ್ದಾರಿಯನ್ನು ಪರಮೇಶ್ವರ್ ಒಪ್ಪಿಕೊಂಡಿದ್ದರಾದರೂ ತುಮಕೂರು ಜಿಲ್ಲೆಯ ಉಸ್ತುವಾರಿ ಪಡೆಯಲು ಇಂದಿಗೂ ಪ್ರಯತ್ನ ಮುಂದುವರಿಸಿದ್ದಾರೆ. ಈ ನಡುವೆ, ತುಮಕೂರು ಜಿಲ್ಲೆಯ ರಾಜಕಾರಣವನ್ನು ಬೆಂಗಳೂರಿಗೆ ಸ್ಥಳಾಂತರವಾಗಿ ರಾಜಕೀಯ ಭವಿಷ್ಯ ಕಂಡುಕೊಳ್ಳುವ ಕನಸು ಕಾಣುತ್ತಿದ್ದಾರೆ.
*ಕೊರಟಗೆರೆಯಲ್ಲಿ ಕುಂಚಟಿಗ ಒಕ್ಕಲಿಗರು ಮತ್ತು ಲಿಂಗಾಯಿತರ ಪ್ರಾಬಲ್ಯ ಹೆಚ್ಚಾಗಿರುವುದು ಪರಮೇಶ್ವರ್ ತಲೆನೋವಿಗೆ ಕಾರಣ. ಆದರೂ ಕೊರಟಗೆರೆ ಮುಖಂಡರು ಪರಮೇಶ್ವರ್ ಬೆಂಗಳೂರಿಗೆ ಸ್ಥಳಾಂತರಗೊಳ್ಳುವುದಕ್ಕೆ ವಿರೋಧ ವ್ಯಕ್ತಪಡಿಸಿ ಈ ಬಾರಿ ಕೊರಟಗೆರೆಯಿಂದಲೇ ಗೆಲ್ಲಿಸುತ್ತೇವೆ ಎಂದು ಒತ್ತಡ ಹಾಕತೊಡಗಿದ್ದಾರೆ. ಒಂದೊಮ್ಮೆ ಪರಮೇಶ್ವರ್ ಕೊರಟಗೆರೆಯಿಂದ ಸ್ಪರ್ಧಿಸದಿದ್ದರೆ ಅವರಿಗೆ ಆಪ್ತರಾದ ಅಭ್ಯರ್ಥಿ ನಿಲ್ಲಿಸಿ ಆ ಕ್ಷೇತ್ರವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಚಿಂತನೆ ನಡೆಸಿದ್ದಾರೆ.
– ಎಸ್.ಲಕ್ಷ್ಮಿನಾರಾಯಣ