ಬೆಂಗಳೂರು: ವಿಶ್ವ ವೇದಿಕೆಯಲ್ಲಿ ನಿಂತು ಪ್ರಜಾಪ್ರಭುತ್ವದ ಬಗ್ಗೆ ಪುಂಖಾನುಪುಂಖವಾಗಿ ಭಾಷಣ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರೇ, ಪ್ರಜಾಪ್ರಭುತ್ವ ವಿರೋಧಿಯಾಗಿ ಮತದಾರರ ಮಾಹಿತಿ ಕಳವಿನ ಚಿಲುಮೆ ಹಗರಣವನ್ನು ಮುಚ್ಚಿ ಹಾಕಲಾಗುತ್ತಿದೆ. ಬಿಜೆಪಿ ಫಾರ್ ಕರ್ನಾಟಕ ಸಚಿವರು ಭಾಗಿಯಾಗಿರುವ ಪ್ರಕರಣಗಳನ್ನು ಕೇಂದ್ರ ತನಿಖಾ ಸಂಸ್ಥೆಗಳಿಗೆ ವಹಿಸುವಿರಾ ಎಂದು ಕಾಂಗ್ರೆಸ್ ಟ್ವಿಟರ್‌ನಲ್ಲಿ ಪ್ರಶ್ನಿಸಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಪ್ರಧಾನಿ ಮೋದಿ ಅವರೇ, ಹಿಂದೆ ತಮ್ಮ ಭೇಟಿಗಾಗಿ ತೇಪೆ ಹಾಕಿದ್ದ ರಸ್ತೆಗಳು ತಾವು ವಾಪಸ್ ದೆಹಲಿ ತಲುಪುವುದರ ಒಳಗಾಗಿ ಕಿತ್ತು ಹೋಗಿದ್ದು 40 ಪರ್ಸೆಂಟ್ ಲೂಟಿಗೆ ಸಾಕ್ಷಿ ಹೇಳಿದ್ದವು.ತಮ್ಮ ಕಚೇರಿ ವಿವರಣೆ ಕೇಳಿದ್ದು ಬಿಟ್ಟರೆ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ, ಯಾವ ತನಿಖೆಯೂ ಆಗಲಿಲ್ಲ. ರಾಜ್ಯದ ರಸ್ತೆ ಗುಂಡಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೌನವೇಕೆ ಎಂದು ವಾಗ್ಧಾಳಿ ನಡೆಸಿದೆ.
ಗೃಹ ಸಚಿವರ ವರ್ಗಾವಣೆ ಆದೇಶ ಪತ್ರವೊಂದಕ್ಕೆ ಸ್ಯಾಂಟ್ರೋ ರವಿ ಸಂಭ್ರಮಿಸಿದ್ದಾನೆ. ಆತನ ವರ್ಗಾವಣೆ ದಂಧೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಸಂಪೂರ್ಣ ಸಹಭಾಗಿತ್ವ, ಸಹಕಾರವಿರುವುದು ಸ್ಪಷ್ಟ. ಬಿಜೆಪಿ ಫಾರ್ ಕರ್ನಾಟಕ ಸರ್ಕಾರದ ಭ್ರಷ್ಟಾಚಾರಕ್ಕೆ ಖುಲ್ಲಂ ಖುಲ್ಲಾ ಸಾಕ್ಷ್ಯವಿದ್ದರೂ ‘ನಾ ಖಾನೆದುಂಗಾ’ ಎನ್ನುವ ಮೋದಿ ಮೌನ ಏಕೆ ಎಂದು ಟೀಕಾಪ್ರಹಾರ ನಡೆಸಿದೆ.
ಸ್ಯಾಂಟ್ರೋ ರವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುತ್ರ “ಸ್ವೀಟ್ ಬ್ರದರ್’. ಮುಖ್ಯಮಂತ್ರಿಗಳು “ಅಪ್ಪಾಜಿ’. ಇಷ್ಟೊಳ್ಳೆ ನೆಂಟಸ್ತಿಕೆ ಇದ್ದರೂ ಸ್ಯಾಂಟ್ರೋ ರವಿ ನನಗೆ ತಿಳಿದೇ ಇಲ್ಲ ಎನ್ನುವ ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ಮಾತನ್ನು ದೇವರು ಮೆಚ್ಚುತ್ತಾನಾ? ಪ್ರಧಾನಿ ನರೇಂದ್ರ ಮೋದಿ ಅವರೇ, ಚೀಫ್ ಬ್ರೋಕರ್ ನೇಮಿಸಿ ವಿಧಾನಸೌಧವನ್ನು ವ್ಯಾಪಾರ ಸೌಧ ಮಾಡಿರುವ ಬಗ್ಗೆ ಮೌನವೇಕೆ ಎಂದು ಪ್ರಶ್ನಿಸಿದೆ.