Advertisement

Karnataka: ಕಾಂಗ್ರೆಸ್‌ ತ್ರಿಮೂರ್ತಿಗಳ ಮ್ಯಾರಥಾನ್‌ ಸಭೆ

12:03 AM Nov 22, 2023 | Team Udayavani |

ಬೆಂಗಳೂರು: ನಿಗಮ- ಮಂಡಳಿಗಳ ಅಧ್ಯಕ್ಷರ ನೇಮಕಕ್ಕೆ ಕೊನೆಗೂ ಮುಹೂರ್ತ ಕೂಡಿಬಂದಂತಿದೆ. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ನೇತೃತ್ವದಲ್ಲಿ ಮಂಗಳವಾರ ತಡರಾತ್ರಿವರೆಗೂ ನಡೆದ ಸರಣಿ ಸಭೆಗಳಲ್ಲಿ ಈ ಸಂಬಂಧ ತೀರ್ಮಾನ ಕೈಗೊಳ್ಳಲಾಗಿದ್ದು, ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೂ ಮೊದಲೇ ಆಕಾಂಕ್ಷಿಗಳಿಗೆ “ಸಿಹಿ’ ಸುದ್ದಿ ಸಿಗಲಿದೆ.

Advertisement

ಖಾಸಗಿ ಹೊಟೇಲ್‌ನಲ್ಲಿ ಸುರ್ಜೇವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನೊಳಗೊಂಡ ಸಭೆಯಲ್ಲಿ ನಿಗಮ- ಮಂಡಳಿಗಳ ಅಧ್ಯಕ್ಷ ನೇಮಕಾತಿ ವಿಚಾರವೇ ಚರ್ಚೆಯ ಕೇಂದ್ರಬಿಂದುವಾಗಿತ್ತು. ಇದಾದ ನಂತರ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ, ಗೃಹ ಸಚಿವ ಡಾ| ಜಿ. ಪರಮೇಶ್ವರ್‌, ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಸೇರಿ ಹಲವು ಶಾಸಕರನ್ನು ಪ್ರತ್ಯೇಕವಾಗಿ ಕರೆದು ಚರ್ಚೆ ನಡೆಸಿದರು. ಜತೆಗೆ ಸುರ್ಜೆವಾಲ ಅವರು ಒಂದು ಡಜನ್‌ಗೂ ಹೆಚ್ಚು ಶಾಸಕರಿಗೆ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ನ. 28-ನಿರ್ಣಾಯಕ
ಎರಡು ಹಂತಗಳಲ್ಲಿ ಪಟ್ಟಿ ಪ್ರಕಟಗೊಳಿಸಲು ನಿರ್ಧರಿಸಲಾಯಿತು. ಈ ಪೈಕಿ ಅಧಿವೇಶನಕ್ಕೂ ಮುನ್ನವೇ ಮೊದಲ ಪಟ್ಟಿ ಬಿಡುಗಡೆಗೆ ತೀರ್ಮಾನಿಸಲಾಗಿದೆ. ಇದರಲ್ಲಿ ಶಾಸಕರಿಗೆ ಅದರಲ್ಲೂ ಮುಖ್ಯವಾಗಿ ಸಚಿವ ಸ್ಥಾನ ವಂಚಿತರಿಗೆ ಆದ್ಯತೆ ನೀಡಬೇಕು. ಅನಂತರದ ಆದ್ಯತೆ ಪಕ್ಷದ ಪ್ರಾಮಾಣಿಕ ಮತ್ತು ಹಿರಿಯ ಕಾರ್ಯಕರ್ತರಿಗೆ. ಈ ನಿಟ್ಟಿನಲ್ಲಿ ಕಾರ್ಯಕರ್ತರಿಗೆ “ಬಂಪರ್‌ ಗಿಫ್ಟ್’ ಕಾದಿದೆ. ಇದೆಲ್ಲದಕ್ಕೂ ನ. 28 ನಿರ್ಣಾಯಕ ಆಗಲಿದೆ. ಯಾಕೆಂದರೆ, ಇದೇ ವಿಚಾರವಾಗಿ ಅಂದು ಮತ್ತೂಂದು ಸುತ್ತಿನ ಸಭೆ ನಡೆಯಲಿದೆ. ಅಲ್ಲಿ ಪಟ್ಟಿ ಅಂತಿಮಗೊಳ್ಳುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ರಾಯರಡ್ಡಿಗೆ ವಿಶೇಷ ಆಹ್ವಾನ
ಮಾಜಿ ಸಚಿವ ಹಾಗೂ ಶಾಸಕ ಬಸವರಾಜ ರಾಯರಡ್ಡಿ ಅವರನ್ನು ರಣದೀಪ್‌ಸಿಂಗ್‌ ಸುರ್ಜೇವಾಲ ಪ್ರತ್ಯೇಕವಾಗಿ ಕರೆಸಿ ಮಾತುಕತೆ ನಡೆಸಿದರು. ಈ ಹಿಂದೆ ಬಸವರಾಜ ರಾಯರಡ್ಡಿ ಸೇರಿದಂತೆ ಕೆಲ ಶಾಸಕರು, ಸಚಿವರು, ಶಾಸಕರ ಮಾತು ಕೇಳುತ್ತಿಲ್ಲ. ಶಾಸಕಾಂಗ ಪಕ್ಷದ ಸಭೆ ಕರೆಯಬೇಕು ಎಂದು ಮುಖ್ಯಮಂತ್ರಿಗೆ ನೇರವಾಗಿ ಪತ್ರ ಬರೆದಿದ್ದರು. ಈ ಮೂಲಕ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ, ರಾಯರಡ್ಡಿ ಅವರನ್ನು ಪ್ರತ್ಯೇಕವಾಗಿ ಕರೆದು ಮಾತುಕತೆ ನಡೆಸುವ ಮೂಲಕ ಸಮಾಧಾನಪಡಿಸುವ ಕೆಲಸ ಮಾಡಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next