Advertisement

2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ: ಡಿ.ಕೆ. ಶಿವಕುಮಾರ್‌

12:27 AM Jan 05, 2022 | Team Udayavani |

ಮಂಗಳೂರು: ಬಿಜೆಪಿಯನ್ನು ಕಿತ್ತೂಗೆಯಬೇಕು ಎಂಬುದಾಗಿ ರಾಜ್ಯದ ಜನತೆ ತೀರ್ಮಾನಿಸಿದ್ದು, ರಾಜ್ಯದಲ್ಲಿ ಇತ್ತೀಚೆಗೆ ನಡೆದಿರುವ ಕೆಲವು ಚುನಾವಣೆಗಳ ಫಲಿತಾಂಶಗಳಲ್ಲಿ ಇದು ಪ್ರತಿಫಲಿಸಿದೆ. ಹೀಗಾಗಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಬಹುಮತ ಪಡೆಯಲಿದೆ. ಈ ಮೂಲಕ 2023 ಸಂಪೂರ್ಣ ಕಾಂಗ್ರೆಸ್‌ ವರ್ಷವಾಗಲಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಭವಿಷ್ಯ ನುಡಿದಿದ್ದಾರೆ.

Advertisement

ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಮಂಗಳೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ “ಉದಯವಾಣಿ’ಗೆ ವಿಶೇಷ ಸಂದರ್ಶನ ನೀಡಿದ ಅವರು, ರಾಜ್ಯದಲ್ಲಿನ ರಾಜಕೀಯ ವಿದ್ಯಮಾನಗಳು ಹಾಗೂ ಮುಂದಿನ ರಾಜ್ಯ ವಿಧಾನಸಭಾ ಚುನಾ ವಣೆಗೆ ಕಾಂಗ್ರೆಸ್‌ನ ಕಾರ್ಯತಂತ್ರದ ಬಗ್ಗೆ ಮಾತನಾಡಿದರು.

ಇತ್ತೀಚಿನ ಚುನಾವಣ ಫಲಿತಾಂಶಗಳು ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯೇ?
ರಾಜ್ಯದಲ್ಲಿ ಇತ್ತೀಚೆಗೆ ನಡೆದ ಉಪ ಚುನಾವಣೆಯಾಗಲಿ, ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಾಗಲಿ ಯಾವುದೇ ಚುನಾವಣೆಯನ್ನು ತೆಗೆದುಕೊಂಡರೂ ಫಲಿತಾಂಶ ಕಾಂಗ್ರೆಸ್‌ಗೆ ಪೂರಕವಾಗಿ ಬಂದಿದೆ. ಎಲ್ಲ ಕಡೆ ಕಾಂಗ್ರೆಸ್‌ನ ಮತಗಳಿಕೆ ಪ್ರಮಾಣ ಜಾಸ್ತಿಯಾಗಿದೆ. ಇದು ಜನರ ನಿರೀಕ್ಷೆಯನ್ನು ಪ್ರತಿಫಲಿಸಿದೆ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕು ಎಂಬುದು ಕೇವಲ ಕಾಂಗ್ರೆಸ್‌ನ ಬಯಕೆಯಲ್ಲ. ಜನರ ನಿರೀಕ್ಷೆಯೂ ಆಗಿದೆ.

ರಾಮನಗರದ ಘಟನೆ ಕಾಂಗ್ರೆಸ್‌ನ ಗೂಂಡಾಗಿರಿ ವರ್ತನೆಗೆ ನಿದರ್ಶನ ಎಂಬುದಾಗಿ ಬಿಜೆಪಿ ಆರೋಪಿಸಿದೆಯಲ್ಲ?
ರಾಮನಗರದಲ್ಲಿ ಸೋಮವಾರ ನಡೆದಿರುವ ಘಟನೆಯಲ್ಲಿ ಬಿಜೆಪಿ ತನ್ನ ವಿಶ್ವರೂಪವನ್ನು ತೋರಿಸಿದೆ. ಓರ್ವ ಸಚಿವರಿಗೆ ಮುಖ್ಯಮಂತ್ರಿಯವರನ್ನು ಕರೆಸಿಕೊಂಡು ಜನರ ಮುಂದೆ ಯಾವ ರೀತಿ ಮಾತನಾಡಬೇಕು ಎಂಬ ಬಗ್ಗೆ ಅರಿವಿರಬೇಕು. ಸಚಿವರ ಈ ರೀತಿಯ ವರ್ತನೆಯನ್ನು ಮುಖ್ಯಮಂತ್ರಿಯವರು ಒಪ್ಪಿಕೊಳ್ಳುತ್ತಾರೆಯೇ? ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹೇಳಿಕೆ ಒತ್ತಟ್ಟಿಗೆ ಇರಲಿ. ಯಾಕೆಂದರೆ ಅವರು ಈ ಘಟನೆಯ ನಿಜಾಂಶವನ್ನು ತಿಳಿದುಕೊಳ್ಳದೇ ದೂರದಲ್ಲಿದ್ದುಕೊಂಡು ಮಾತನಾಡುತ್ತಾರೆ. ಮುಖ್ಯಮಂತ್ರಿಯವರು ಬೇಡ ಬೇಡ ಎಂದು ಸನ್ನೆ ಮಾಡಿ ಹೇಳುತ್ತಿದ್ದರೂ ಸಚಿವರು ತಮ್ಮ ವರ್ತನೆ ಮುಂದುವರಿಸಿದ್ದರು. ಅನಿತಾ ಕುಮಾರಸ್ವಾಮಿ ಅವರು ಇದೇನು ರಾಜಕಾರಣ ಎಂದು ಪ್ರಶ್ನಿಸಿದ್ದರು. ಓರ್ವ ಸಚಿವ ಮಾಡೋ ಕೆಲಸ, ಆಡುವ ಮಾತು ಇದಾ? ಸಚಿವರು ತನ್ನ ನಡತೆಯನ್ನು ಎಕ್ಸ್‌ಪೋಸ್‌ ಮಾಡಿದ್ದಾರೆ. ಅವರು ರಾಮನಗರ ಜಿಲ್ಲೆಯ ಸಚಿವರು ಕೂಡ ಅಲ್ಲ. ಸರಕಾರದ ಓರ್ವ ಸಚಿವ ಮಾತ್ರ. ರಾಮನಗರದಲ್ಲಿ ಬಿಜೆಪಿಗೆ ನೆಲೆ ಇಲ್ಲ. ಅದಕ್ಕಾಗಿ ಈ ರೀತಿಯ ಕೆಲಸ ಮಾಡಲು ಹೊರಟಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಸ್ಥಳೀಯಾಡಳಿತ ಚುನಾವಣೆಗಳಲ್ಲಿ ಗೆಲ್ಲಲು ಬಿಜೆಪಿಗೆ ಸಾಧ್ಯವಾಗಿಲ್ಲ. ಜಿಲ್ಲೆಯಲ್ಲಿ ಅವರಿಗೆ ಇದ್ದ ಅಲ್ಪಸ್ವಲ್ಪ ಮತಗಳನ್ನು ಕೂಡ ಕಳೆದುಕೊಂಡಿದ್ದಾರೆ. ಇಂಥವರು ಇದ್ದರೆ ನಮಗೆ ಒಳ್ಳೆಯದು.

ಕಾಂಗ್ರೆಸ್‌ನ ಮೇಕೆದಾಟು ಪಾದಯಾತ್ರೆಯನ್ನು ರಾಜಕೀಯ ಗಿಮಿಕ್ಸ್‌ ಎಂದು ಬಿಜೆಪಿ ಟೀಕಿಸುತ್ತಿದೆಯಲ್ಲವೇ?
ಬಿಜೆಪಿಯವರು ಸಚಿವರನ್ನು ಕರೆಸಿ ರಥಯಾತ್ರೆ ಮಾಡುವುದು, ಚುನಾವಣೆಗಳನ್ನು ನಡೆಸುವುದು, ಅವರಿಗೆ ಬೇಕು-ಬೇಕಾದ ಹಾಗೆ ಮಾಡುವುದು ಎಲ್ಲ ಸರಿ. ಕಾಂಗ್ರೆಸ್‌ ಮಾಡಿದರೆ ಮಾತ್ರ ತಪ್ಪು. ಇದು ಯಾವ ನ್ಯಾಯ?. ರಾಜಕೀಯವಾಗಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ಏನಾದರೂ ಮಾಡಿ ನಮ್ಮ ಪಾದಯಾತ್ರೆ ಯನ್ನು ನಿಲ್ಲಿಸಬೇಕು ಎಂದು ಪ್ರಯತ್ನಿಸುತ್ತಿದ್ದಾರೆ. ಅದನ್ನು ಬಿಟ್ಟು ಮುಖ್ಯಮಂತ್ರಿಯವರು ಕೇಂದ್ರ ಸರಕಾರದ ಅನುಮತಿ ತೆಗೆದುಕೊಂಡು ನಾಳೆ ಬೆಳಗ್ಗೆಯೇ ಮೇಕೆದಾಟು ಕೆಲಸ ಪ್ರಾರಂಭಿಸಲಿ. ಅನುಮತಿ ಪಡೆಯುವುದು ಕೇವಲ ಆರ್ಧಗಂಟೆಯ ಕೆಲಸ. ನಾವು ಕೂಡ ಈ ಸಮಾರಂಭದಲ್ಲಿ ಭಾಗವಹಿಸುತ್ತೇವೆ.

Advertisement

ರಾಜ್ಯದಲ್ಲಿ ಜಿ.ಪಂ.,ತಾ.ಪಂ. ಚುನಾವಣೆ ವಿಳಂಬವಾಗುತ್ತಿರುವುದು ಏಕೆ?
ರಾಜ್ಯದಲ್ಲಿ ಬಿಜೆಪಿಗೆ ಪರಿಸ್ಥಿತಿ ಅನುಕೂಲಕರವಾಗಿಲ್ಲ ಎಂಬ ಕಾರಣಕ್ಕಾಗಿಯೇ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಚುನಾವಣೆಯನ್ನು ಅವರು ಮುಂದೂಡಿದ್ದಾರೆ. ಅವರಿಗೆ ಅನುಕೂಲಕರವಾಗುವ ರೀತಿಯಲ್ಲಿ ಮೀಸಲಾತಿಗಳನ್ನು ನಿಗದಿ ಪಡಿಸುತ್ತಿದ್ದಾರೆ. ಮುಂದಕ್ಕೆ ಏನಾಗುತ್ತದೆ ಎಂದು ನೋಡೋಣ.

ಸಿದ್ದರಾಮಯ ಹಾಗೂ ಡಿಕೆಶಿ ತೋರಿಕೆಗೆ ಮಾತ್ರ ಒಂದಾಗಿದ್ದಾರೆ ಎಂಬ ಟೀಕೆ ಇದೆಯಲ್ಲ?
ಬಿಜೆಪಿಯವರಿಗೆ ಮಾತನಾಡಲು ಬೇರೆ ಯಾವುದೇ ವಿಷಯ ಇಲ್ಲ. ಅದಕ್ಕಾಗಿ ಇಂತಹ ವಿಚಾರಗಳನ್ನು ಪ್ರಸ್ತಾವಿಸುತ್ತಿದ್ದಾರೆ. ನಾವೆಲ್ಲ ಒಂದಾಗಿದ್ದೇವೆ, ಒಗ್ಗಟ್ಟಾಗಿದ್ದೇವೆ. ಬಿಜೆಪಿಯವರಂತೆ ಕಿತ್ತಾಡಲು ಹೋಗುವುದಿಲ್ಲ. ಗುಂಪುಗಾರಿಕೆ ನಮ್ಮಲ್ಲಿ ಇಲ್ಲ. ಹೈಕಮಾಂಡ್‌ ಏನು ಹೇಳುತ್ತದೆಯೋ ಅದರಂತೆ ಕೆಲಸ ಮಾಡಿಕೊಂಡು ಹೋಗುತ್ತೇವೆ.

ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ನ ಕಾಯತಂತ್ರ ಏನು?
ಬಿಜೆಪಿಯ ಆಡಳಿತ ವೈಫಲ್ಯವನ್ನು ಜನರ ಮುಂದಿಡುತ್ತೇವೆ. ರಾಜ್ಯದ ಜನತೆಗೆ ಏನು ಮಾತು ಕೊಟ್ಟಿದ್ದರೋ ಅದರಂತೆ ಅವರು ನಡೆದುಕೊಂಡಿಲ್ಲ. ರಾಜ್ಯದ ಆದಾಯವನ್ನು, ರೈತರ ಆದಾಯವನ್ನು ಡಬಲ್‌ ಮಾಡುತ್ತೇವೆ ಎಂದವರು ಎಲ್ಲಿ ಡಬಲ್‌ ಮಾಡಿದರು? ಪ್ರತಿದಿನ ರಾಜ್ಯದ ಜನತೆಯ ಪಿಕ್‌ಪಾಕೆಟ್‌ ಆಗುತ್ತಿದೆ. ದಿನಂಪ್ರತಿ ಬೆಲೆಯೇರಿಕೆ ಆಗುತ್ತಿದೆ. ಪೆಟ್ರೋಲ್‌, ಗ್ಯಾಸ್‌, ಡೀಸೆಲ್‌ ಹೀಗೆ ಪ್ರತಿಯೊಂದು ವಸ್ತುವಿನ ಬೆಲೆ ವಿಪರೀತ ಜಾಸ್ತಿಯಾಗುತ್ತಿದೆ. ರಾಜ್ಯದಲ್ಲಿ ಪ್ರಕೃತಿ ವಿಕೋಪ, ರೈತರ ಬೆಳೆ ನಾಶಕ್ಕೆ ಪರಿಹಾರ ಕೊಟ್ಟಿದ್ದೇವೆ ಎನ್ನುತ್ತಿದ್ದಾರೆ. ಆದರೆ ಯಾರಿಗೆ ಕೊಟ್ಟಿದ್ದಾರೆ ಹೇಳಿ? ಇವೆಲ್ಲ ಬರೀ ಬೊಗಳೆ ಮಾತುಗಳು.

– ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next