ಬೆಂಗಳೂರು: 17 ಶಾಸಕರ ಬಂಡಾಯದಿಂದ ಮೈತ್ರಿ ಸರ್ಕಾರ ಪತನಗೊಂಡು, ಆ ಶಾಸಕರು ಅನರ್ಹಗೊಂಡಿರುವುದರಿಂದ ಅವರ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಪರ್ಯಾಯ ಅಭ್ಯರ್ಥಿಗಳನ್ನು ಹುಡುಕುವ ಕಾರ್ಯದಲ್ಲಿ ಕಾಂಗ್ರೆಸ್ ನಾಯಕರು ನಿರತರಾಗಿದ್ದಾರೆ.
ಅನರ್ಹಗೊಂಡ 17 ಶಾಸಕರ ಪೈಕಿ 14 ಜನ ಕಾಂಗ್ರೆಸ್‌ನವರಾಗಿದ್ದು, ಅವರ ಕ್ಷೇತ್ರಗಳಿಗೆ ಪರ್ಯಾಯ ಅಭ್ಯರ್ಥಿಗಳನ್ನು ಈಗಿನಿಂದಲೇ ಸಂಭಾವ್ಯರನ್ನು ಹುಡುಕುವ ಕೆಲಸ ಆರಂಭಿಸಿದ್ದಾರೆ. ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದವರನ್ನು ಕಾಂಗ್ರೆಸ್‌ಗೆ ಸೆಳೆಯುವ ಪ್ರಯತ್ನ ಮಾಡುವುದು, ಅವರು ಪಕ್ಷಕ್ಕೆ ಬಾರದಿದ್ದರೆ, ಪಕ್ಷದಲ್ಲಿನ ಪ್ರಭಲ ಅಭ್ಯರ್ಥಿಗೆ ಮಣೆ ಹಾಕುವ ಕುರಿತು ಚರ್ಚೆ ನಡೆಯುತ್ತಿದೆ.
ಈ ಹಿನ್ನೆಲೆಯಲ್ಲಿ ಕೆಲವು ಕ್ಷೇತ್ರಗಳಿಗೆ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಹೆಸರುಗಳು ಕೇಳಿ ಬರುತ್ತಿದೆ. ಕಾಗವಾಡ-ಪ್ರಕಾಶ್ ಹುಕ್ಕೇರಿ, ಗೋಕಾಕ್-ಲಖನ್ ಜಾರಕಿಹೊಳಿ, ಹೊಸಕೋಟೆ- ಮಂಜುನಾಥಗೌಡ (ಜೆಡಿಎಸ್‌ನಿಂದ ಕರೆತರುವ ಪ್ರಯತ್ನ) ಚಿಕ್ಕಬಳ್ಳಾಪುರ-ಎಂ.ಸಿ.ಸುಧಾಕರ್/ ಅಂಜಿನಪ್ಪ, ಕೆ.ಆರ್.ಪುರಂಗೆ ಬಿಜೆಪಿ ಮಾಜಿ ಶಾಸಕ ನಂದೀಶ್‌ರೆಡ್ಡಿಯನ್ನ ಪಕ್ಷಕ್ಕೆ ಕರೆತರುವ ಪ್ರಯತ್ನ ನಡೆಸುವುದು. ಇಲ್ಲವಾದರೆ, ಬಿಬಿಎಂಪಿ ಸದಸ್ಯ ಉದಯಕುಮರ್ ರೆಡ್ಡಿ ಅಥವಾ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಸಿ.ಎಂ. ಧನಂಜಯ್, ಮಹಾಲಕ್ಷ್ಮೀ ಲೇಔಟ್- ಮಾಗಡಿ ಕ್ಷೇತ್ರದ ಮಾಜಿ ಶಾಸಕ ಬಾಲಕೃಷ್ಣ ಅಥವಾ ಎನ್‌ಎಸ್‌ಯುಐ ಅಧ್ಯಕ್ಷ ಮಂಜುನಾಥಗೌಡ, ರಾಜರಾಜೇಶ್ವರಿ ನಗರ-ಮಾಜಿ ಶಾಸಕ ಪ್ರಿಯಾ ಕೃಷ್ಣಾ ಅಥವಾ ಬೆಂಗಳೂರು ಉತ್ತರ ಜಿಲ್ಲಾ ಘಟಕದ ಅಧ್ಯಕ್ಷ ರಾಜಕುಮಾರ್, ಶಿವಾಜಿನಗರ- ರಿಜ್ವಾನ್ ಅರ್ಷದ್, ವಿಜಯನಗರ (ಹೊಸಪೇಟೆ)- ಸಂತೋಷ್ ಲಾಡ್, ಹುಣಸೂರು-ಮಾಜಿ ಶಾಸಕ ಎಚ್.ಪಿ. ಮಂಜುನಾಥ್, ರಾಣೆಬೆನ್ನೂರು-ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಅಥವಾ ಅವರ ಪುತ್ರ ಪ್ರಕಾಶ್ ಕೋಳಿವಾಡ್, ಹಿರೇಕೆರೂರು-ಬಿಜೆಪಿಯ ಯು.ಬಿ. ಬಣಕಾರ್ ಅವರನ್ನು ಕರೆತರುವುದು ಅಥವಾ ಸ್ಥಳೀಯವಾಗಿ ಪರ್ಯಾಯ ಅಭ್ಯರ್ಥಿ ಹುಡುಕುವುದು. ಕೆ.ಆರ್.ಪೇಟೆ-ಮಾಜಿ ಸಚಿವ ಚಲುವರಾಯಸ್ವಾಮಿ ಅಥವಾ ಮಾಜಿ ಶಾಸಕ ಚಂದ್ರಶೇಖರ್ ಅವರ ಹೆಸರು ಕೇಳಿ ಬರುತ್ತಿವೆ.