ಬೆಂಗಳೂರು: ಮೈತ್ರಿ ಸರ್ಕಾರದ ಸಂಪುಟದಲ್ಲಿ ಸೇರ್ಪಡೆಯಾಗಲು ಕೆಪಿಜೆಪಿ (ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ)ಯನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸುವಂತೆ ಕಾಂಗ್ರೆಸ್ ನಾಯಕರು ರಾಣೆಬೆನ್ನೂರು ಕೆಪಿಜೆಪಿ ಶಾಸಕ ಆರ್.ಶಂಕರ್‌ಗೆ ಷರತ್ತು ವಿಧಿಸಿದ್ದಾರೆ.
ಶುಕ್ರವಾರ ಸಂಪುಟ ವಿಸ್ತರಣೆಗೂ ಮೊದಲು ಕೆಪಿಜೆಪಿ ಕಾಂಗ್ರೆಸ್‌ನಲ್ಲಿ ವಿಲೀನಗೊಳ್ಳದಿದ್ದರೆ, ಅವರಿಗೆ ಕಾಂಗ್ರೆಸ್‌ನಿಂದ ಸಚಿವರಾಗಲು ನೀಡಿರುವ ಅವಕಾಶವನ್ನು ತಡೆ ಹಿಡಿಯುವ ಬಗ್ಗೆ ರಾಜ್ಯ ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಒಂದೊಮ್ಮೆ ಕೆಪಿಜೆಪಿ ವಿಲೀನವಾಗದಿದ್ದರೆ ಸಂಪುಟ ವಿಸ್ತರಣೆ ನಡೆಯುತ್ತಾ? ಶಂಕರ್ ಬದಲಿಗೆ ಯಾರಿಗೆ ಅವಕಾಶ ಸಿಗಬಹುದು ಎಂಬ ಲೆಕ್ಕಾಚಾರಗಳು ಕಾಂಗ್ರೆಸ್ ವಲಯದಲ್ಲಿ ನಡೆಯುತ್ತಿವೆ. ಇದರ ಬೆನ್ನಲ್ಲೇ ಸಚಿವಾಕಾಂಕ್ಷಿಗಳು ಚುರುಕಾಗಿದ್ದು, ಅದೃಷ್ಟ ಒಲಿದು ಬರುವ ನಿರೀಕ್ಷೆಯಲ್ಲಿದ್ದಾರೆ.
ಈಗಾಗಲೇ ಮೈತ್ರಿ ಸರ್ಕಾರಕ್ಕೆ ಬೆಂಬಲ ಸೂಚಿಸಿ, ಒಂದು ಬಾರಿ ಕಾಂಗ್ರೆಸ್‌ನಿಂದ ಮಂತ್ರಿಯಾಗಿದ್ದ ಶಂಕರ್, ರಮೇಶ್ ಜಾರಕಿಹೊಳಿ ಅವರೊಂದಿಗೆ ಗುರುತಿಸಿಕೊಂಡು ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದ್ದರು.
ಆ ಕಾರಣದಿಂದ ಶಂಕರ್ ಮತ್ತೆ ಮುಂದೆ ಬಿಜೆಪಿಗೆ ಹೋಗುವುದನ್ನು ತಡೆಯಲು ಈ ತಂತ್ರ ಅನುಸರಿಸಿದ್ದಾರೆ ಎನ್ನಲಾಗಿದೆ. ಆರ್ ಶಂಕರ್ ಕೂಡ ಕಾಂಗ್ರೆಸ್ ನಾಯಕರ ಷರತ್ತಿಗೆ ಒಪ್ಪಿಗೆ ನೀಡಿ, ಕೆಪಿಜೆಪಿ ರಾಜ್ಯಾಧ್ಯಕ್ಷರೊಂದಿಗೆ ಆಗಮಿಸಿ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಮೂಲಗಳ ಪ್ರಕಾರ ಶಂಕರ್ ಬುಧವಾರವೇ ಕೆಪಿಜೆಪಿಯನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸುವ ಪ್ರಕ್ರಿಯೆ ನಡೆಸುವುದಾಗಿ ಹೇಳಿದ್ದರು ಎಂದು ತಿಳಿದು ಬಂದಿದೆ. ಆದರೆ, ಬುಧವಾರ ವಿಲೀನ ಪ್ರಕ್ರಿಯೆ ನಡೆದಿಲ್ಲ.