Advertisement

ಲೋಕಸಭೆಗೆ ಕೈ ಟಿಕೆಟ್ ಆಕಾಂಕ್ಷಿ: ವಾಸು

07:30 AM Jan 30, 2019 | Team Udayavani |

ಮೈಸೂರು: ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ನಿಂದ ನಾನೂ ಕೂಡ ಪ್ರಬಲ ಟಿಕೆಟ್ ಆಕಾಂಕ್ಷಿ, ಹೈಕಮಾಂಡ್‌ ಅವಕಾಶ ನೀಡಿದರೆ ಸ್ಪರ್ಧೆ ಮಾಡುವುದಾಗಿ ಮಾಜಿ ಶಾಸಕ ವಾಸು ತಿಳಿಸಿದರು.

Advertisement

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕಳೆದ ಮೂರು ದಶಕಗಳಿಂದ ಕಾಂಗ್ರೆಸ್‌ ಪಕ್ಷಕ್ಕೆ ನಾನು ಮಾಡಿರುವ ಸೇವೆಗೆ ಭತ್ಯೆಯಾಗಿ ಮೈಸೂರು-ಕೊಡಗು ಕ್ಷೇತ್ರದಿಂದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಮೈತ್ರಿ ಅಭ್ಯರ್ಥಿಯಾಗಲು ಆಕಾಂಕ್ಷಿಯಾಗಿದ್ದು, ಪಕ್ಷ ಅರ್ಜಿ ಆಹ್ವಾನಿಸಿದಾಗ ನಾನೂ ಅರ್ಜಿ ಸಲ್ಲಿಸುತ್ತೇನೆ.

ನಾನು ಸ್ಪರ್ಧೆ ಮಾಡುವ ಬಯಕೆಯನ್ನು ಈಗಾಗಲೇ ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದೇನೆ. ಈ ಕ್ಷೇತ್ರದಲ್ಲಿ ಎಚ್.ಡಿ. ದೇವೇಗೌಡ ಅಥವಾ ಸಿದ್ದರಾಮಯ್ಯ ಅವರು ಸ್ಪರ್ಧಿಸಿದರೆ ಹಿಂದೆ ಸರಿಯುತ್ತೇನೆ. ಹಿರಿಯ ನಾಯಕರು ಸ್ಪರ್ಧಿಸಿದರೆ ನಾವು ಪ್ರಚಾರ ಮಾಡುತ್ತೇವೆ. ಇಲ್ಲದಿದ್ದರೆ ನಮಗೆ ಆದ್ಯತೆ ಕೊಡಲಿ ಎಂದರು.

ನಾನು ಚಾಮರಾಜ ಕ್ಷೇತ್ರದ ಶಾಸಕನಾಗಿದ್ದಾಗ 5 ವರ್ಷಗಳ ಕಾಲ ಮಾಡಿರುವ ಕೆಲಸ ಐದಾರು ಜಿಲ್ಲೆಗಳಿಗೆ ಸಂಬಂಧಪಟ್ಟಿದ್ದು, ಮೈಸೂರು ಕೊಡಗು ಕ್ಷೇತ್ರದಲ್ಲಿ ನಾನು ಸೇವೆ ಸಲ್ಲಿಸಿರುವುದರಿಂದ ಪ್ರಬಲ ಆಕಾಂಕ್ಷಿಯಂತೂ ಹೌದು. ಅಂತಿಮ ನಿರ್ಧಾರ ಪಕ್ಷಕ್ಕೆ ಬಿಟ್ಟದ್ದು ಎಂದರು.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಲಿಂಗಾಯತರಿಗೂ ಟಿಕೆಟ್ ನೀಡಬೇಕೆಂಬ ಒತ್ತಾಯ ಇದೆ. ಕೊಡಗಿನ ಚಂದ್ರಮೌಳಿ ಕೂಡ ಆಕಾಂಕ್ಷಿ ಯಾಗಿದ್ದಾರೆ. ಒಕ್ಕಲಿಗ ಕೋಟಾದಡಿ ಟಿಕೆಟ್ ಕೇಳದಿದ್ದರೂ ಒಬ್ಬ ನಿಷ್ಠಾವಂತ ಕಾಂಗ್ರೆಸ್ಸಿಗ ನಾಗಿ ನಾನು ಟಿಕೆಟ್ ಕೇಳುತ್ತಿದ್ದೇನೆ ಎಂದು ತಿಳಿಸಿದರು.

Advertisement

ಸಿಎಂಗೆ ಮನವಿ: ಚಾಮರಾಜ ಕ್ಷೇತ್ರದಲ್ಲಿ ಈ ಹಿಂದೆ ನಾನು ಶಾಸಕನಾಗಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಈಗ ಅನುದಾನ ಕೊರತೆ ಯಿಂದ ಸ್ಥಗಿತಗೊಂಡಿದ್ದು, ಕೆಲ ಕಾಮಗಾರಿಗಳು ಅಪೂರ್ಣ ವಾಗಿವೆ. ಇವುಗಳನ್ನು ಪೂರ್ಣಗೊಳಿಸಲು ಅಗತ್ಯ ಅನು ದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಮನವಿ ಮಾಡುವುದಾಗಿ ತಿಳಿಸಿದರು.

ಕೆಆರ್‌ಎಸ್‌ ರಸ್ತೆಯಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆ ಉದ್ಘಾಟನೆಯಾದರೂ ಪೂರ್ಣ ಪ್ರಮಾಣದಲ್ಲಿ ಚಿಕಿತ್ಸೆ ಲಭ್ಯವಾಗುತ್ತಿಲ್ಲ. ಟ್ರಾಮಾ ಸೆಂಟರ್‌ ಸಿದ್ಧ ಗೊಂಡಿದ್ದರೂ ಅಗತ್ಯ ಮೂಲ ಸೌಲಭ್ಯವಿಲ್ಲದೇ ಆರಂಭ ಗೊಂಡಿಲ್ಲ.

ಇನ್ನೂ ಜಿಲ್ಲಾಸ್ಪತ್ರೆ ನಿರ್ಮಾಣವಾಗಿದ್ದರೂ ಉದ್ಘಾಟನೆಯಾಗುತ್ತಿಲ್ಲ. ಹೀಗೆ ನನ್ನ ಅವಧಿಯಲ್ಲಿ ಆರಂಭಗೊಂಡ ಬಹುತೇಕ ಕಾಮಗಾರಿಗಳು ಅಪೂರ್ಣ ವಾಗಿದ್ದು, ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಯವರಿಗೆ ಕೋರುವುದಾಗಿ ಹೇಳಿದರು.

ಮೇಯರ್‌ ಪುಷ್ಪಲತಾ, ಮಾಜಿ ಮೇಯರ್‌ಗಳಾದ ಬಿ.ಕೆ.ಪ್ರಕಾಶ್‌, ಟಿ.ಬಿ.ಚಿಕ್ಕಣ್ಣ, ಮೋದಾಮಣಿ, ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್‌ಗೌಡ, ಉದ್ಯಮಿ ಸುರೇಶ್‌ ಕುಮಾರ್‌ ಜೈನ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next