Advertisement

Congress: ವಿಜಯಪುರದಲ್ಲಿ ಹೆಚ್ಚಿದ ಬಂಡಾಯ; ಕಮಲ ಸಖ್ಯಕ್ಕೆ ಮುಂದಾದ ಕೈ ಟಿಕೆಟ್ ಆಕಾಂಕ್ಷಿ

03:00 PM Apr 06, 2023 | Team Udayavani |

ವಿಜಯಪುರ: ರಾಜ್ಯ ವಿಧಾನಸಭೆ ಚುನಾವಣೆಯ ಸ್ಪರ್ಧೆಗಾಗಿ ಗುರುವಾರ ಕಾಂಗ್ರೆಸ್ ಪ್ರಕಟಿಸಿರುವ ಎರಡನೇ ಪಟ್ಟಿಯಲ್ಲಿ ವಿಜಯಪುರ ನಗರ ಹಾಗೂ ನಾಗಠಾಣಾ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಅಖೈರು ಮಾಡಲಾಗಿದೆ. ಇದರೊಂದಿಗೆ ಜಿಲ್ಲೆಯ 8 ಕ್ಷೇತ್ರಗಳಲ್ಲಿ 6ಕ್ಕೆ ಕಾಂಗ್ರೆಸ್ ಕಲಿಗಳ ಹೆಸರು ಅಂತಿಮವಾಗಿದೆ. ಹೆಚ್ಚು ಪೈಪೋಟಿ ಇರುವ ದೇವರಹಿಪ್ಪರಗಿ ಹಾಗೂ ಸಿಂದಗಿ ಕ್ಷೇತ್ರಕ್ಕೆ ಎರಡನೇ ಪಟ್ಟಿಯಲ್ಲೂ ಅಭ್ಯರ್ಥಿಗಳ ಘೋಷಣೆ ಆಗಿಲ್ಲ. ಈ ಎರಡೂ ಕ್ಷೇತ್ರಗಳಲ್ಲಿ ಕೈ ಅಭ್ಯರ್ಥಿ ಯಾರು ಎಂಬ ಕುತುಹೂಲ ಹೆಚ್ಚಿಸಿಕೊಳ್ಳುತ್ತ ಸಾಗಿವೆ.

Advertisement

ಮೊದಲ ಪಟ್ಟಿಯಲ್ಲಿ ಟಿಕೆಟ್ ಪ್ರಕಟಿಸಿರುವ ಹಾಲಿ ಮೂವರು ಶಾಸಕರಾದ ಎಂ.ಬಿ.ಪಾಟೀಲ-ಬಬಲೇಶ್ವರ, ಶಿವಾನಂದ ಪಾಟೀಲ-ಬಸವನಬಾಗೇವಾಡಿ, ಯಶವಂತ್ರಾಯಗೌಡ ಪಾಟೀಲ-ಇಂಡಿ ಹಾಗೂ ಮಾಜಿ ಸಚಿವ ಸಿ.ಎಸ್.ನಾಡಗೌಡ-ಮುದ್ದೇಬಿಹಾಳ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಎರಡನೇ ಪಟ್ಟಿಯಲ್ಲಿ ಅಬ್ದುಲ್ ಹಮೀದ್ ಮುಶ್ರೀಫ್-ವಿಜಯಪುರ ನಗರ, ವಿಠಲ ಕಟಕಧೋಂಡ ಇವರಿಗೆ ಅವಕಾಶ ನೀಡಿದೆ. ಇದರೊಂದಿಗೆ ಜಿಲ್ಲೆಯ ಆರು ಕ್ಷೇತ್ರಗಳಿಗೆ ಟಿಕೆಟ್ ಅಂತಿಮವಾಗಿದ್ದರೂ, ದೇವರಹಿಪ್ಪರಗಿ ಹಾಗೂ ಸಿಂದಗಿ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಪ್ರಕಟಿಸಿಲ್ಲ.

ಎರಡನೇ ಪಟ್ಟಿಯಲ್ಲಿ ಭಾರಿ ಪೈಟಪೋಟಿ ಮಧ್ಯೆಯೂ ವಿಜಯಪುರ ನಗರ ಕ್ಷೇತ್ರಕ್ಕೆ 2018 ರ ಪರಾಜಿತ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್‍ಗೆ ಮಣೆ ಹಾಕಲಾಗಿದೆ. ಇದರಿಂದ ಮಾಜಿ ಶಾಸಕ ಡಾ.ಎಂ.ಎಸ್.ಬಾಗವಾನ ಸೇರಿದಂತೆ ಕಾಂಗ್ರೆಸ್ ಟಿಕೆಟ್‍ಗೆ ಅರ್ಜಿ ಸಲ್ಲಿಸಿದ್ದ ಇತರೆ 26 ಜನರಿಗೆ ನಿರಾಸೆ ಮೂಡಿಸಿದೆ.

ವಿಜಯಪುರ ನಗರ ಕ್ಷೇತ್ರದಿಂದ ಯುವ ಹಾಗೂ ಮಹಿಳಾ ಕೋಟಾದಲ್ಲಿ ಕೆಪಿಸಿಸಿ ಯುವ ಘಟಕದ ಪ್ರಧಾನ ಕಾರ್ಯದರ್ಶಿ, ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾ ಪಾಟೀಲ, ಮಾಜಿ ಸಚಿವ ಎಂ.ಎಲ್.ಉಸ್ತಾದ ಪುತ್ರಿ ಸಲಿಮಾ ಉಸ್ತಾದ್, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮಹ್ಮದ್ ರಫಿಕ್ ಟಪಾಲ ಸೇರಿದಂತೆ 27 ಜನರು ಕೈ ಟಿಕೆಟ್‍ಗಾಗಿ ಅರ್ಜಿ ಸಲ್ಲಿಸಿದ್ದರು. ಮುಶ್ರೀಫ್ ಕೈ ಹಿಡಿದ ಕಾರಣ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ವಂಚಿತರು ಬಂಡಾಯ ಎಳುವ ನಿರೀಕ್ಷೆ ಇದೆ.

ಕಾಂಗ್ರೆಸ್ ಟಿಕೆಟ್ ಕೈ ತಪ್ಪುವ ಮುನ್ಸೂಚನೆ ಅರಿತ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಸಿಂಪೀರ ವಾಲೀಕಾರ ವಾರದ ಹಿಂದೆಯೇ ಕಾಂಗ್ರೆಸ್ ತೊರೆದಿದ್ದಾರೆ. ಆಪ್ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸಮ್ಮಖದಲ್ಲಿ ವಾಲೀಕಾರ ಆಪ್ ಸೇರಿದ್ದು, ಅಭ್ಯರ್ಥಿ ಎಂದು ಘೋಷಿಸಿಕೊಂಡಿದ್ದಾರೆ. ಹೀಗಾಗಿ ನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿತ ಕಾಂಗ್ರೆಸ್ ಪಾಳೆಯದಲ್ಲಿ ಇನ್ನಷ್ಟು ಅಸಮಾಧಾನ ಭುಗಿಲೇಳುವ ನಿರೀಕ್ಷೆ ಇದೆ.

Advertisement

ಪರಿಶಿಷ್ಟ ಜಾತಿಗೆ ಮೀಸಲಿರುವ ನಾಗಠಾಣಾ ಕ್ಷೇತ್ರದಿಂದ ಮಾಜಿ ಸಚಿವ ಹಾಗೂ ಕಳೆದ ಬಾರಿಯ ಪರಾಜಿತ ವಿಠಲ ಕಟಕಧೋಂಡ ಅವರನ್ನು ಅಭ್ಯರ್ಥಿ ಎಂದು ಘೋಷಿಸಲಾಗಿದೆ. 14 ಆಕಾಂಕ್ಷಿಗಳು ಕಾಂಗ್ರೆಸ್ ಟಿಕೆಟ್‍ಗೆ ಅರ್ಜಿ ಸಲ್ಲಿಸಿದ್ದರಿಂದ, ಭಾರಿ ಪೈಪೋಟಿ ಕಂಡುಬಂದಿತ್ತು. ಆದರೂ ಇದೇ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜು ಆಲಗೂರಗೆ ಟಿಕೆಟ್ ಕೈ ತಪ್ಪಿದೆ. ಬಿಜೆಪಿ ಪಕ್ಷದಿಂದ ವಲಸೆ ಬಂದಿರುವ ಮಾಜಿ ಶಾಸಕ-ಕಳೆದ ಬಾರಿಯ ಪರಾಜಿತ ವಿಠ್ಠಲ ಕಟಕಧೋಂಡ ಅವರಿಗೆ ಕಾಂಗ್ರೆಸ್ ಕೈ ಹಿಡಿದಿದೆ.

ಇದನ್ನೂ ಓದಿ:ಮಾಡೆಲಿಂಗ್‌ನಿಂದ ಸಿನಿಮಾದತ್ತ…: ನವನಟಿ ಸಲೋನಿ ಸಿನಿ ಕನಸು

ರಾಜು ಆಲಗೂರ ಅವರಿಗೆ ಲೋಕಸಭೆ ಟಿಕೆಟ್ ಭರವಸೆ ನೀಡಲಾಗಿದೆ ಎಂಬ ಮಾತಿದೆ. ನಾಗಠಾಣಾ ಕ್ಷೇತ್ರದಿಂದ ಟಿಕಟ್ ಬಯಸಿದ್ದ ಹಲವರು ಅದಾಗಲೇ ತಮ್ಮ ಪರ ಒಲವಿದೆ ಎಂದು ಬಿಂಬಿಸಿಕೊಳ್ಳಲು ಪ್ರಚಾರ ಅರಂಭಿಸಿದ್ದರು. ಪಕ್ಷದ ಹೈಕಮಾಂಡ್ ಕಟಕಧೋಂಡ ಅವರಿಗೆ ಮಣೆ ಹಾಕಿದ್ದರಿಂದ ಇವರೆಲ್ಲ ಕಂಗಾಲಾಗಿದ್ದು, ಟಿಕೆಟ್ ವಂಚಿತರಿಂದ ಬಂಡಾಯ ಏಳುವ ಸಾಧ್ಯತೆ ಇಲ್ಲದಿಲ್ಲ.

ದೇವರಹಿಪ್ಪರಗಿ ಕ್ಷೇತ್ರಕ್ಕೆ ಎರಡು ಪಟ್ಟಿಯಲ್ಲೂ ಟಿಕೆಟ್ ಘೋಷಿಸಿಲ್ಲ. ಈ ಕ್ಷೇತ್ರದಿಂದ ಟಿಕೆಟ್‍ಗಾಗಿ ಕೆಪಿಸಿಸಿ ನಿಯಮದಂತೆ ಅರ್ಜಿ ಸಲ್ಲಿಸದಿದ್ದರೂ ಮಾಜಿ ಸಚಿವ ಎಸ್.ಆರ್.ಪಾಟೀಲ ಇಲ್ಲಿಂದ ಸ್ಪರ್ಧಿಸಲು ಕಣ್ಣಿಟ್ಟಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬೀಳಗಿ ಕ್ಷೇತ್ರದಲ್ಲಿ ಸ್ಪರ್ಧಾಕಾಂಕ್ಷಿ ಆಗಿದ್ದರೂ, ಅಲ್ಲಿ ಮಾಜಿ ಶಾಸಕ ಜೆ.ಟಿ.ಪಾಟೀಲ ಅವರಿಗೆ ಪಕ್ಷ ಟಿಕೆಟ್ ಘೋಷಿಸಿದೆ. ಹೀಗಾಗಿ ಎಸ್.ಆರ್.ಪಾಟೀಲ ದೇವರಹಿಪ್ಪರಗಿ ಕ್ಷೇತ್ರಕ್ಕೆ ಪಟ್ಟು ಹಿಡಿದಿದ್ದಾರೆ. ಸ್ಥಳೀಯರಲ್ಲದ ಅವರ ವಿರುದ್ಧ ಅದಾಗಲೇ ಟಿಕೆಟ್‍ಗಾಗಿ ಅರ್ಜಿ ಸಲ್ಲಿಸಿರುವ 9 ಆಕಾಂಕ್ಷಿಗಳೆಲ್ಲರೂ ಪ್ರತಿರೋಧದ ಧ್ವನಿಯಿಂದ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಕಾರಣ ಎಸ್.ಆರ್.ಪಾಟೀಲ ಅಂದುಕೊಂಡಷ್ಟು ಇಲ್ಲಿ ಸುಲಭವಿಲ್ಲ.

ಕಾಂಗ್ರೆಸ್ ಪ್ರಬಲ ಟಿಕೆಟ್ ಆಕಾಂಕ್ಷಿಯೊಬ್ಬರು ಬಿಜೆಪಿ ಸಖ್ಯ ಬೆಳೆಸಲು ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿ ಹರಡಿದೆ. ಹಾಲಿ ಬಿಜೆಪಿ ಶಾಸಕರಿಗೆ ಕಮಲ ಟಿಕೆಟ್ ತಪ್ಪಿದರೆ ತಮಗೆ ಆದ್ಯತೆ ನೀಡಬೇಕು ಎಂಬ ಷರತ್ತಿನೊಂದಿಗೆ ಕೇಸರಿ ಪಾಳೆಯದ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂಬ ವರದಿಗಳಿವೆ.

ಸಿಂದಗಿ ಕ್ಷೇತ್ರದ ಕಥೆ ಇದಕ್ಕಿಂತ ಭಿನ್ನವಾಗೇನೂ ಇಲ್ಲ. 2018 ರಲ್ಲಿ ಕಾಂಗ್ರೆಸ್ ಇಲ್ಲಿ ಹೀನಾಯ ಸೋಲು ಅನುಭವಿಸಿತ್ತು. ಈ ಕ್ಷೇತ್ರದಿಂದ ಜೆಡಿಎಸ್ ಪಕ್ಷದಿಂದ ಗೆದ್ದಿದ್ದ ಮಾಜಿ ಸಚಿವ ಎಂ.ಸಿ. ಮನಗೂಳಿ ಅವರ ನಿಧನದಿಂದ ಕಳೆದ ವರ್ಷ ಉಪ ಚುನಾವಣೆ ನಡೆದಿತ್ತು. ರಾಜಕೀಯ ಬೆಳವಣಿಗೆಯಲ್ಲಿ ಜೆಡಿಎಸ್ ನಾಯಕ ಎಂ.ಸಿ.ಮನಗೂಳಿ ಪುತ್ರ ಅಶೋಕ ಮನಗೂಳಿ ಕಾಂಗ್ರೆಸ್ ಸೇರಿ ಉಪ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ, ಸೋಲುಂಡಿದ್ದರು. ತಂದೆಯ ನಿಧನ, ಉಪ ಚುನಾವಣೆಯ ಸೋಲಿನ ಅನುಕಂಪದ ಹಿನ್ನೆಲೆಯಲ್ಲಿ ನನಗೆ ಆದ್ಯತೆ ನೀಡಿ ಎಂಬ ಬೇಡಿಕೆಯೊಂದಿಗೆ ಟಿಕೆಟ್‍ಗೆ ಅರ್ಜಿ ಸಲ್ಲಿಸಿದ್ದಾರೆ.

ದೇವರಹಿಪ್ಪರಗಿ ಕ್ಷೇತ್ರದಿಂದ ಟಿಕೆಟ್‍ಗೆ ಅರ್ಜಿ ಸಲ್ಲಿಸಿದ್ದರೂ ತಾವು ಹಿಂದೊಮ್ಮೆ ಶಾಸಕರಾಗಿದ್ದ ಸಿಂದಗಿ ಕ್ಷೇತ್ರದಲ್ಲೇ ಅವಕಾಶ ಕಲ್ಪಿಸಿ ಎಂದು ಶರಣಪ್ಪ ಸುಣಗಾರ ಕೂಡ ಪೈಪೋಟಿಗೆ ಇಳಿದಿದ್ದಾರೆ. ಬಿಜೆಪಿ ಪಕ್ಷದಿಂದ ವಲಸೆ ಬಂದಿರುವ ಮಾಜಿ ಶಾಸಕ ಅಶೋಕ ಶಾಬಾದಿ ಸೇರಿದಂತೆ ಅರ್ಜಿ ಸಲ್ಲಿಸಿರುವ ಇತರರು ಟಿಕೆಟ್‍ಗಾಗಿ ತಮ್ಮ ಪ್ರಯತ್ನ ನಡೆಸಿದ್ದಾರೆ.

ಹೀಗಾಗಿ ತೀವ್ರ ಪೈಪೋಟಿ ಏರ್ಪಟ್ಟಿರುವ ಇಲ್ಲಿ ಟಿಕೆಟ್ ವಂಚಿತರು ಬಂಡಾಯ ಎಳದಂತೆ ಅತೃಪ್ತಿ ಶಮನಕ್ಕಾಗಿ ಮನವೊಲಿಸುವ ಕೆಲಸ ನಡೆದಿದೆ. ಪರಿಣಾಮವೇ ಎರಡು ಪಟ್ಟಿಯಲ್ಲೂ ಈ ಎರಡೂ ಕಡೆ ಅಭ್ಯರ್ಥಿಗಳನ್ನು ಘೋಷಿಸದೆ ಕಾಂಗ್ರೆಸ್ ವರಿಷ್ಠರು ಜಾಣ ನಡೆ ಅನುಸರಿಸಿದ್ದಾರೆ.

ಜಿ.ಎಸ್.ಕಮತರ

Advertisement

Udayavani is now on Telegram. Click here to join our channel and stay updated with the latest news.

Next