Advertisement

ಹ್ಯಾರಿಸ್‌ ಪುತ್ರ ಕಾಂಗ್ರೆಸ್‌ನಿಂದ ಉಚ್ಚಾಟನೆ

06:05 AM Feb 19, 2018 | Team Udayavani |

ಬೆಂಗಳೂರು: ಉದ್ಯಮಿಯ ಪುತ್ರನ ಮೇಲೆ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿನಗರ ಶಾಸಕ ಎನ್‌.ಎ. ಹ್ಯಾರಿಸ್‌ ಪುತ್ರ ಹಾಗೂ ಬೆಂಗಳೂರು ನಗರ ಯುವ ಕಾಂಗ್ರೆಸ್‌ ಘಟಕದ ಪ್ರಧಾನ ಕಾರ್ಯದರ್ಶಿ ಮೊಹಮದ್‌ ನಲಪಾಡ್‌ ಹ್ಯಾರಿಸ್‌ನನ್ನು ಆರು ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ಟ್ವೀಟ್‌ ಮಾಡುವ ಮೂಲಕ ಮೊಹಮದ್‌ ನಲಪಾಡ್‌ ನನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿರುವುದಾಗಿ ತಿಳಿಸಿದ್ದಾರೆ.

Advertisement

ಸೂಚನೆ ನೀಡಿದ್ದರೂ ಬದಲಾಗಲಿಲ್ಲ: ಹ್ಯಾರಿಸ್‌ ಪುತ್ರ ಮೊಹಮದ್‌ ನಲಪಾಡ್‌ ಈ ಹಿಂದೆಯೂ ಮೂರ್ನಾಲ್ಕು ಬಾರಿ ಇದೇ ರೀತಿ ಗಲಾಟೆ ಮಾಡಿದಾಗ ಪಕ್ಷದ ವಲಯದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆ ಸಂದರ್ಭದಲ್ಲಿ ಅನೇಕ ಹಿರಿಯ ನಾಯಕರು ಶಾಸಕ ಹ್ಯಾರಿಸ್‌ಗೆ ಮಗನನ್ನು ಹಿಡಿತದಲ್ಲಿಡುವಂತೆ ಕಿವಿಮಾತು ಹೇಳಿದ್ದರು. ಆದರೆ, ಹ್ಯಾರಿಸ್‌ ಅವರ ಮಾತನ್ನು ಗಂಭೀರವಾಗಿ ಪರಿಗಣಿಸದೇ ಮಕ್ಕಳು ವಯಸ್ಸಲ್ಲಿ ಸಣ್ಣ ಪುಟ್ಟ ಗಲಾಟೆ ಮಾಡ್ತಾರೆ ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಬಾರದು ಎಂಬ ಅಭಿಪ್ರಾಯ ವ್ಯಕ್ತಪಡಿಸಿ ನಿರ್ಲಕ್ಷಿಸಿದರು ಎಂದು ತಿಳಿದು ಬಂದಿದೆ.

ಮಾಧ್ಯಮದವರ ಮೇಲೆಯೂ ಹಲ್ಲೆ: ಯುವ ಕಾಂಗ್ರೆಸ್‌ ಘಟಕದ ವತಿಯಿಂದ ಆನಂದ್‌ ರಾವ್‌ ವೃತ್ತದಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಪ್ರತಿಭಟನಾ ನಿರತ ಯುವತಿಗೆ ಬೆಂಕಿ ತಗುಲಿದ ಸಂದರ್ಭದಲ್ಲಿ ಚಿತ್ರಿಕರಿಸಲು ಹೋಗಿದ್ದ ಮಾಧ್ಯಮದವರ ಮೇಲೆಯೂ ಮೊಹಮದ್‌ ನಲಪಾಡ್‌ ಮತ್ತು ಸ್ನೇಹಿತರು ಹಲ್ಲೆ ನಡೆಸಿದ್ದರು. ಆ ಸಂದರ್ಭದಲ್ಲಿಯೂ ಕೆಪಿಸಿಸಿ ಕಾರ್ಯಾಧ್ಯಕ್ಷ  ದಿನೇಶ್‌ ಗುಂಡೂರಾವ್‌ ಮಾಧ್ಯಮದವರೊಂದಿಗೆ ಸಂಧಾನ ನಡೆಸಿ, ಮಾಡಿರುವ ತಪ್ಪಿಗೆ ಕ್ಷಮೆ ಕೇಳುವಂತೆ ಸೂಚಿಸಿದರೂ, ತಮ್ಮ ಕಾರ್ಯವನ್ನು ಸಮರ್ಥಿಸಿಕೊಂಡಿದ್ದರು.

ಪಕ್ಷದಲ್ಲಿ ಅಸಮಾಧಾನ: ಚುನಾವಣಾ ಸಂದರ್ಭದಲ್ಲಿ ಅದೂ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಈ ರೀತಿಯ ಘಟನೆ ನಡೆದಿರುವುದು ಕಾಂಗ್ರೆಸ್‌ ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ. ಹಲ್ಲೆ ಪ್ರಕರಣ ಬೆಳಕಿಗೆ ಬಂದ ತಕ್ಷಣವೇ ಮೊಹಮದ್‌ನನ್ನು ಪಕ್ಷದಿಂದ ಉಚ್ಚಾಟನೆ ಮಾಡಿದರೂ, ಬಂಧನ ಮಾಡದಿರುವ ಬಗ್ಗೆ ಸಾರ್ವಜನಿಕವಾಗಿ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿರುವುದರಿಂದ ಪ್ರತಿಪಕ್ಷಕ್ಕೆ ಅನಾಯಾಸವಾಗಿ ಅಸ್ತ್ರ ನೀಡಿದಂತಾಗಿದೆ ಎಂದು ಕಾಂಗ್ರೆಸ್‌ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಗನ ತಪ್ಪಿಗೆ ಕ್ಷಮೆ ಕೇಳುತ್ತೇನೆ
ಬೆಂಗಳೂರು:
ಮಗ ಮೊಹಮದ್‌ ನಲಪಾಡ್‌ ಉದ್ಯಮಿ ಮಗನ ಮೇಲೆ ಹಲ್ಲೆ ಮಾಡಿರುವುದು ನೋವಿನ ಸಂಗತಿಯಾಗಿದೆ. ಹಲ್ಲೆಗೊಳಗಾದ ವಿದ್ವತ್‌ ಕೂಡ ತಮ್ಮ ಸ್ನೇಹಿತನ ಮಗ. ಅವರಿಗೆ ಆಗಿರುವ ನೋವಿಗೆ ಕ್ಷಮೆ ಕೋರುವುದಾಗಿ ಶಾಸಕ ಹ್ಯಾರೀಸ್‌ ಹೇಳಿದ್ದಾರೆ. 

Advertisement

ಪುತ್ರನ ಹಲ್ಲೆ ಪ್ರಕರಣದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ರೀತಿಯ ಘಟನೆ ಯಾರಿಗೂ ಆಗಬಾರದು. ನಾನೂ ಒಬ್ಬ ತಂದೆಯಾಗಿ ನನಗೆ ನೋವಿದೆ. ನನ್ನ ಮಗನಿಗೆ ದೂರವಾಣಿ ಮೂಲಕ ತರಾಟೆಗೆ ತೆಗೆದುಕೊಂಡಿದ್ದೇನೆ. ನಂತರ ಆತ ಫೋನ್‌ ಸ್ವಿಚ್‌ಆಫ್ ಮಾಡಿದ್ದಾನೆ. ಮಕ್ಕಳು ಈ ರೀತಿ ಮಾಡುವುದರಿಂದ ತಂದೆ ತಾಯಿಗೆ ಎಷ್ಟು ನೋವಾಗುತ್ತದೆ ಎಂದು ನನಗೂ ಗೊತ್ತು. ನಾನೂ ಒಬ್ಬ ತಂದೆಯಾಗಿ ಲೋಕೇಶ್‌ ಪುತ್ರನ ಬಗ್ಗೆ ಅನುಕಂಪ ಇದೆ. ಈ ರೀತಿಯ ಘಟನೆ ನಡೆಯಬಾರದಿತ್ತು, ನಡೆದಿದೆ. ಪೋಲಿಸರು ಪ್ರಕರಣ ದಾಖಲಿಸಿಕೊಂಡು ಅವರ ಕೆಲಸ ಮಾಡುತ್ತಾರೆ. ಅವರ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ಸರೆಂಡರ್‌ ಮಾಡಿಸಲು ಗೃಹ ಸಚಿವರ ಸೂಚನೆ
ಬೆಂಗಳೂರು:
ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಲೆ ಮರೆಸಿಕೊಂಡಿರುವ ಮೊಹಮದ್‌ ನಲಪಾಡ್‌ನ‌ನ್ನು ಶೀಘ್ರವೇ ಬಂಧಿಸುವಂತೆ ನಗರ ಪೊಲಿಸ್‌ ಆಯುಕ್ತರಿಗೆ ಕಟ್ಟು ನಿಟ್ಟಿನ ಆದೇಶ ನೀಡಿದ್ದೇನೆ. ಪುತ್ರನನ್ನು ಪೋಲಿಸರಿಗೆ ಒಪ್ಪಿಸುವಂತೆ ಶಾಸಕ ಹ್ಯಾರಿಸ್‌ಗೂ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಘಟನೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ತಪ್ಪು ಯಾರೇ ಮಾಡಿದರೂ ಅದು ತಪ್ಪೇ. ಅವರನ್ನು ಶೀಘ್ರ ಬಂಧಿಸುವಂತೆ ಪೊಲಿಸ್‌ ಆಯುಕ್ತರಿಗೆ ಸೂಚಿಸಿದ್ದೇನೆ. ಮುಖ್ಯಮಂತ್ರಿ ಕೂಡ ಶಿಸ್ತು ಕ್ರಮ ಕೈಗೊಳ್ಳುವಂತೆ ಹೇಳಿದ್ದಾರೆ. ಶಾಸಕ ಹ್ಯಾರಿಸ್‌ಗೂ ಮಾತನಾಡಿ ಮಗನನ್ನು ಸರೆಂಡರ್‌ ಮಾಡಿಸುವಂತೆ ಹೇಳಿರುವುದಾಗಿ ತಿಳಿಸಿದರು. 

ಬಿಜೆಪಿ ಸಂಸದ ಪ್ರಹ್ಲಾದ್‌ ಜೋಶಿ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿರುವ ಅವರು, “ಪ್ರಹ್ಲಾದ್‌ ಜೋಶಿ ದೊಡ್ಡ ನಾನ್‌ ಸೆನ್ಸ್‌, ಅವರ ಅಣ್ಣ ಬ್ಯಾಂಕಿಂಗ್‌ ವಂಚನೆ ಮಾಡಿದವರು. ಅವರ ತಮ್ಮ ಜೋಶಿ ದೊಡ್ಡ ನಾನ್‌ಸೆನ್ಸ್‌, ಆರೋಗ್ಯಕರವಾಗಿ ಮಾತನಾಡಿದರೆ, ಆರೋಗ್ಯಕರವಾಗಿ ಉತ್ತರ ನೀಡುತ್ತೇನೆ’ ಎಂದು ತಿರುಗೇಟು ನೀಡಿದರು.

ಕಾನೂನು ಕ್ರಮಕ್ಕೆ ಶೆಟ್ಟರ್‌ ಒತ್ತಾಯ
ಹುಬ್ಬಳ್ಳಿ:
ಅಮಾಯಕ ಯುವಕನ ಮೇಲೆ ಹಲ್ಲೆ ನಡೆಸಿರುವ ಶಾಸಕ ಹ್ಯಾರಿಸ್‌ ಪುತ್ರನ ವಿರುದ್ಧ ಸೂಕ್ತ ಕಾನೂನು ಕ್ರಮ
ಕೈಗೊಳ್ಳಬೇಕೆಂದು ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌ ಒತ್ತಾಯಿಸಿದರು.

ಭಾನುವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಜನಪ್ರತಿನಿಧಿಗಳ ಮಕ್ಕಳು ಸೌಜನ್ಯದಿಂದ ವರ್ತಿಸಬೇಕು. ತಂದೆ ಶಾಸಕ ಎನ್ನುವ ಕಾರಣಕ್ಕೆ ಅಮಾಯಕ ಯುವಕನ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ಶಾಸಕರ ಪುತ್ರನನ್ನು ಕಾಂಗ್ರೆಸ್‌ನಿಂದ ಉಚ್ಚಾಟನೆ ಮಾಡಿರುವುದು ಕೇವಲ ನಾಟಕ ಎಂದರು. ಆರೋಪಿಸಿದರು.

ಬೆಂಗಳೂರಿನ ಶಾಂತಿನಗರ ಶಾಸಕ ಹ್ಯಾರಿಸ್‌ ಅವರ ಪುತ್ರ ನಲಪಾಡ್‌ ಉದ್ಯಮಿ ಪುತ್ರನೊಬ್ಬನ ಮೇಲೆ ಹಲ್ಲೆ ನಡೆಸಿದ್ದು ತಪ್ಪು. ಯಾರೇ ತಪ್ಪು ಮಾಡಿದ್ದರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಶಾಸಕರ ಮಗನಾದರೇನು, ಯಾರಾದರೇನು ತಪ್ಪು ತಪ್ಪೇ. ಆಗಿದ್ದರಿಂದ ಆರೋಪಿ ವಿರುದ್ಧ ಕ್ರಮ ಜರುಗಿಸಲಾಗುವುದು.
ಸಿದ್ದರಾಮಯ್ಯ, ಸಿಎಂ

“ಶಾಸಕರ ಪುತ್ರ’ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಸರ್ಕಾರ ತಕ್ಷಣ ತಪ್ಪಿತಸ್ಥರ ವಿರುದಟಛಿ ಕ್ರಮ
ಕೈಗೊಳ್ಳಬೇಕು. ಸರ್ಕಾರ ಪೊಲೀಸ್‌ ಅಧಿಕಾರಿಗಳ ಮೇಲೆ ಯಾವುದೇ ರೀತಿ ಒತ್ತಡ ತರುವ ಕೆಲಸ ಮಾಡಬಾರದು. ಈ ಬಗ್ಗೆ ಪೊಲೀಸ್‌ ಆಯುಕ್ತರ ಜತೆ ಮಾತನಾಡುತ್ತೇನೆ.ಇದು ಶಾಸಕರ ಪುತ್ರನ ಎರಡನೇ ಪ್ರಕರಣ ಆಗಿರುವುದರಿಂದ, ಸಾರ್ವಜನಿಕ ಜೀವನದಲ್ಲಿ ನಡೆದುಕೊಳ್ಳುವ ರೀತಿಯನ್ನು ಅವರ ಕುಟುಂಬ ಬದಲಾಯಿಸಿಕೊಳ್ಳಬೇಕು.

– ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯಾಧ್ಯಕ್ಷ.

ಕಾಂಗ್ರೆಸ್‌ ಶಾಸಕ ಹ್ಯಾರಿಸ್‌ ಪುತ್ರನ ಗೂಂಡಾಗಿರಿ ಹೊಸದೇನಲ್ಲ. ಮತ್ತೋರ್ವ ಶಾಸಕ ವಿಜಯಾನಂದ ಕಾಶಪ್ಪನವರ ಕೂಡ ಗೂಂಡಾಗಿರಿ ನಡೆಸಿದ್ದರು. ಅವರ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯ ರಾಜ್ಯ ಸರ್ಕಾರಕ್ಕಿಲ್ಲ.
– ಪ್ರಹ್ಲಾದ ಜೋಶಿ ಬಿಜೆಪಿ ಸಂಸದ.

Advertisement

Udayavani is now on Telegram. Click here to join our channel and stay updated with the latest news.

Next