Advertisement

ಕಾಂಗ್ರೆಸ್ ಮೂರನೇ ಗ್ಯಾರಂಟಿ: ಬಡ ಕುಟುಂಬದ ಪ್ರತಿ ಸದಸ್ಯನಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ

02:27 PM Feb 24, 2023 | Team Udayavani |

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಮೊದಲು ಕಾಂಗ್ರೆಸ್ ಮೂರನೇ ಗ್ಯಾರಂಟಿಯನ್ನು ಪ್ರಕಟಿಸಿದ್ದು, ಬಡ ಕುಟುಂಬದ ಪ್ರತಿ ಸದಸ್ಯನಿಗೆ ಪ್ರತಿ ತಿಂಗಳು 10 ಕೆಜಿ ಉಚಿತ ಅಕ್ಕಿ ನೀಡುವುದಾಗಿ ಘೋಷಿಸಿದೆ.

Advertisement

ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದ ಜನರಿಗೆ ನೆರವಾಗುವ ಉದ್ದೇಶದಿಂದ ಈಗಾಗಲೇ ಎರಡು ಗ್ಯಾರಂಟಿ ಯೋಜನೆ ಘೋಷಿಸಿದ್ದೇವೆ. ಈಗ ಮೂರನೇ ಗ್ಯಾರಂಟಿಯಾಗಿ ಅನ್ನಭಾಗ್ಯ ಯೋಜನೆ ಮೂಲಕ ಬಿಪಿಎಲ್ ಕಾರ್ಡ್ ಕುಟುಂಬದ ಪ್ರತಿ ಸದಸ್ಯನಿಗೆ 10 ಕೆಜಿ ಅಕ್ಕಿ ನೀಡಲು ತೀರ್ಮಾನಿಸಿದ್ದೇವೆ ಎಂದರು.

ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ನೆರವು ನೀಡುವ ಉದ್ದೇಶದಿಂದ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ ನೀಡುವ ಗೃಹಜ್ಯೋತಿ ಯೋಜನೆ ಮೊದಲ ಗ್ಯಾರಂಟಿಯಾಗಿ ಘೋಷಣೆ ಮಾಡಿದ್ದೇವೆ. ಆ ಮೂಲಕ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು 1500 ರೂ ಉಳಿತಾಯ ಮಾಡಲು ಸಹಕಾರಿಯಾಗುತ್ತಿದ್ದೇವೆ. ಇನ್ನು ಪ್ರತಿ ಮನೆಯ ಮನೆಯೊಡತಿಗೆ 2 ಸಾವಿರ ಪ್ರೋತ್ಸಾಹ ಧನವನ್ನು ನೀಡಲು ಗೃಹಲಕ್ಷ್ಮಿ ಎಂಬ ಎರಡನೇ ಗ್ಯಾರಂಟಿ ಯೋಜನೆ ಘೋಷಿಸಿದ್ದೇವೆ ಎಂದರು.

ಪ್ರಜಾಧ್ವನಿ ಯಾತ್ರೆ ಸಂದರ್ಭದಲ್ಲಿ ನಮ್ಮ ಹಿಂದಿನ ಸರ್ಕಾರದ ಅನ್ನಭಾಗ್ಯ ಯೋಜನೆ ಬಗ್ಗೆ ಜನ ಪ್ರಶಂಸೆ ವ್ಯಕ್ತಿಪಡಿಸಿದ್ದು, ಒಂದು ವೇಳೆ ಕಾಂಗ್ರೆಸ್ ಸರ್ಕಾರ ಈ ಯೋಜನೆ ನೀಡದಿದ್ದರೆ ಕೋವಿಡ್ ಸಮಯದಲ್ಲಿ ನಾವು ಬದುಕು ನಡೆಸುವುದೇ ಕಷ್ಟವಾಗುತ್ತಿತ್ತು ಎಂದು ಹೇಳಿದರು.

Advertisement

ನಮ್ಮ ಸರಕಾರ ನೀಡುತಿದ್ದ 7 ಕೆ.ಜಿ ಅಕ್ಕಿಯನ್ನು ಬಿಜೆಪಿ ಸರ್ಕಾರ 5 ಕೆ.ಜಿಗೆ ಇಳಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ನಾನು, ನಮ್ಮ ಶಾಸಕಾಂಗ ಪಕ್ಷದ ನಾಯಕರು, ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ ಇತರ ನಾಯಕರೆಲ್ಲರೂ ಸೇರಿ ಚರ್ಚಿಸಿ ಅನ್ನಭಾಗ್ಯ ಯೋಜನೆಗೆ ಹೆಚ್ಚಿನ ಶಕ್ತಿ ತುಂಬಬೇಕು, ಆ ಮೂಲಕ ರಾಜ್ಯವನ್ನು ಹಸಿವು ಮುಕ್ತವನ್ನಾಗಿ ಮಾಡಬೇಕು ಎಂದು ನಮ್ಮ ಮೂರನೇ ಗ್ಯಾರಂಟಿ ಯೋಜನೆಯಾಗಿ 10 ಕೆ.ಜಿ ಅಕ್ಕಿಯನ್ನು ನೀಡಲು ನಿರ್ಧರಿಸಲಾಗಿದೆ ಎಂದು ಡಿಕೆಶಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next