ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಪ್ರತಿದಿನ ಸಂಘರ್ಷ ನಡೆಸುವುದಕ್ಕಿಂತ ಪ್ರತಿಪಕ್ಷದಲ್ಲಿಯೇ ಕೂರುವುದು ಉತ್ತಮ ಎಂಬ ಅಭಿಪ್ರಾಯವನ್ನು ಕಾಂಗ್ರೆಸ್‌ನ ಬಹುತೇಕ ಶಾಸಕರು ಹೊಂದಿದ್ದಾರೆ. ಸರ್ಕಾರದ ಆರಂಭದಿಂದಲೂ ಮೈತ್ರಿ ಸರ್ಕಾರದಲ್ಲಿನ ಗೊಂದಲಗಳಿಂದ ಬೇಸತ್ತಿದ್ದ ಕಾಂಗ್ರೆಸ್‌ನ ಶಾಸಕರು, ಈಗ 13 ಶಾಸಕರು ರಾಜೀನಾಮೆ ಸಲ್ಲಿಸಿರುವುದರಿಂದ ಸರ್ಕಾರ ಪತನವಾದರೂ ಚಿಂತೆಯಿಲ್ಲ- ಅವರ ಮೇಲೆ ಶಿಸ್ತು ಕ್ರಮ ಕೈಗೊಂಡು, ದೇಶಕ್ಕೆ ಒಂದು ಸಂದೇಶ ರವಾನೆ ಮಾಡುವಂತೆ ಪಕ್ಷದ ನಾಯಕರಿಗೆ ಶಾಸಕರು ಮನವಿ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಈಗಾಗಲೇ ಸದನದಲ್ಲಿ ವಿಶ್ವಾಸ ಮತ ಸಾಬೀತಿಗೆ ಸ್ಪೀಕರ್ ಬಳಿ ಸಮಯ ಕೇಳಿದ್ದು, ಈಗಿರುವ ಪರಿಸ್ಥಿತಿಯಲ್ಲಿ ಸರ್ಕಾರ ಉಳಿಯುತ್ತದೆ ಎಂಬ ನಂಬಿಕೆ ಬಹುತೇಕ ಕಾಂಗ್ರೆಸ್ ಶಾಸಕರಿಗೆ ಉಳಿದಿಲ್ಲ. ಅಲ್ಲದೇ ಈಗಾಗಲೇ ರಾಜೀನಾಮೆ ಕೊಟ್ಟವರನ್ನು ವಾಪಸ್ ಕರೆಯಿಸಿ, ಸರ್ಕಾರ ಉಳಿಸಿಕೊಳ್ಳುವುದರಿಂದ ಕಾಂಗ್ರೆಸ್ ಗಳಿಸಿಕೊಳ್ಳುವುದು ಏನೂ ಇಲ್ಲ ಎಂಬ ಅಭಿಪ್ರಾಯವನ್ನು ಅನೇಕ ಶಾಸಕರು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮುಂದೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್‌ನಿಂದ ಆಯ್ಕೆಯಾಗಿ ಅರ್ಧದಲ್ಲಿಯೇ ರಾಜೀನಾಮೆ ನೀಡಿ ಹೋಗುವವರಿಗೆ ಒಂದು ಸಂದೇಶ ರವಾನೆಯಾಗಬೇಕು. ಇದರಿಂದ ಭವಿಷ್ಯದಲ್ಲಿ ಬೇರೆ ಪಕ್ಷಕ್ಕೆ ಹೋಗುವವರು ಆಲೋಚನೆ ಮಾಡುವಂತೆ ಆದರೆ, ಕಾಂಗ್ರೆಸ್ ಪಕ್ಷಕ್ಕೂ ಒಂದು ವರ್ಚಸ್ಸು ಬರುತ್ತದೆ. ಇಲ್ಲದಿದ್ದರೆ, ಈ ರೀತಿಯ ಪ್ರವೃತ್ತಿಯಿಂದ ಮತ್ತಷ್ಟು ಹೆಚ್ಚಾಗುವುದರಿಂದ ಅಂತವರಿಂದ ಪಕ್ಷಕ್ಕೂ ಕೆಟ್ಟ ಹೆಸರು ಬರುತ್ತದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಸೋಮವಾರ ವಿಧಾನಸಭೆ ಕಲಾಪ ಆರಂಭವಾಗಿದ್ದು, ಸಂತಾಪ ಸೂಚನೆ ಸಭೆ ನಡೆಯುತ್ತಿದ್ದಾಗಲೂ ಬಹುತೇಕ ಶಾಸಕರು ವಿಧಾನಸಭೆಯ ಆಡಳಿತ ಪಕ್ಷದ ಮೊಗಸಾಲೆಯಲ್ಲೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌ಗೂ ಕೂಡ ಅದೇ ರೀತಿಯ ಒತ್ತಡ ಹೇರುತ್ತಿದ್ದುದು ಕಂಡು ಬಂದಿತು.
ಆಪರೇಷನ್ ಹೆಸರು ಮುಜುಗರ: ಈಗಾಗಲೇ ಜೆಡಿಎಸ್, ಕಾಂಗ್ರೆಸ್ ಸೇರಿ 16 ಶಾಸಕರು ರಾಜೀನಾಮೆ ಸಲ್ಲಿಸಿದ್ದು, ಇನ್ನೂ ಕನಿಷ್ಠ ಐದಾರು ಶಾಸಕರು ರಾಜೀನಾಮೆ ಸಲ್ಲಿಸುತ್ತಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಪ್ರಮುಖವಾಗಿ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್, ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಹೆಸರುಗಳು ಕೇಳಿ ಬರುತ್ತಿವೆ.
ಇವರೊಂದಿಗೆ ಜಮಖಂಡಿ ಶಾಸಕ ಆನಂದ ನ್ಯಾಮಗೌಡ, ಚಿಕ್ಕೋಡಿ ಶಾಸಕ ಪ್ರಕಾಶ್ ಹುಕ್ಕೇರಿ ಹಾಗೂ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಅವರ ಹೆಸರು ಕೇಳಿ ಬರುತ್ತಿವೆ. ಪ್ರತಿದಿನ ಆಪರೇಷನ್ ಕಮಲದ ಹೆಸರಿನಲ್ಲಿ ಸುದ್ದಿ ಹರಿದಾಡುತ್ತಿರುವುದರಿಂದ ಮುಜುಗರ ಅನಿಭವಿಸುವಂತಾಗಿದೆ ಎಂದು ಕೆಲವು ಶಾಸಕರು ಪಕ್ಷದ ನಾಯಕರ ಎದುರು ಅಳಲು ತೋಡಿಕೊಳ್ಳುತ್ತಿದ್ದರು.
ಈ ರೀತಿಯ ಸುದ್ದಿಗಳಿಂದ ಕ್ಷೇತ್ರದ ಜನರು ಹಾಗೂ ಪಕ್ಷದ ನಾಯಕರಿಗೆ ವಿವರಣೆ ನೀಡುವುದೇ ಕೆಲಸವಾಗಿದೆ ಎಂಬ ಅಭಿಪ್ರಾಯವನ್ನು ಆಪರೇಷನ್ ಕಮಲಕ್ಕೊಳಗಾಗುತ್ತಾರೆ ಎಂದು ಹೆಸರು ಓಡಾಡುತ್ತಿರುವ ಶಾಸಕರು ಮೊಗಸಾಲೆಯಲ್ಲಿಯೂ ಮಾತಾಡಿಕೊಳ್ಳುತ್ತಿರುವುದು ಕಂಡು ಬಂದಿತು.