ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ದೆಹಲಿಯ ವಿವಿಧ ಗಡಿಯಲ್ಲಿ ಪಂಜಾಬ್-ಹರ್ಯಾಣದ ರೈತರು ಪ್ರತಿಭಟನೆ ನಡೆಸುತ್ತಿರುವ ನಡುವೆ ಪಂಜಾಬ್ ಸ್ಥಳೀಯ ಸಂಸ್ಥೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿಗಳಿಸಿದ್ದು, ಬಿಜೆಪಿ ಮತ್ತು ಶಿರೋಮಣಿ ಅಕಾಲಿದಳ ತೀವ್ರ ಹಿನ್ನಡೆ ಅನುಭವಿಸಿದೆ.
ಇದನ್ನೂ ಓದಿ:‘ಟ್ರೋಲ್ ಮಾಡ್ಬೇಡಿ ಪ್ಲೀಸ್’… ಟ್ರೋಲಿಗರಿಗೆ ಪರಿಪರಿಯಾಗಿ ಕೇಳಿಕೊಂಡ ನಟಿ
ಬುಧವಾರ(ಫೆ.17, 2021) ಪ್ರಕಟಗೊಂಡ ಫಲಿತಾಂಶದ ಪ್ರಕಾರ, ಮೋಗಾ, ಹೋಶಿಯಾರ್ ಪುರ್, ಕಪುರ್ಥಾಲಾ, ಅಬೋಹರ್, ಪಠಾಣ್ ಕೋಟ್, ಬಾಟ್ಲಾ ಮತ್ತು ಬಟಿಂಡಾ ಸೇರಿದಂತೆ ಆರು ಮಹಾನಗರ ಪಾಲಿಕೆಗಳು ಕಾಂಗ್ರೆಸ್ ವಶವಾಗಿರುವುದಾಗಿ ತಿಳಿಸಿದೆ.
ವರದಿಯ ಪ್ರಕಾರ, ಬರೋಬ್ಬರಿ 53 ವರ್ಷಗಳ ಬಳಿಕ ಬಟಿಂಡಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವುದಾಗಿ ವರದಿ ಹೇಳಿದೆ. ಏತನ್ಮಧ್ಯೆ ಮರು ಮತದಾನ ಹಿನ್ನೆಲೆಯಲ್ಲಿ ಮೋಹಾಲಿ ಫಲಿತಾಂಶವನ್ನು ಗುರುವಾರ(ಫೆ19) ಪ್ರಕಟಿಸುವುದಾಗಿ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಫೆ.14ರಂದು ಪಂಜಾಬ್ ನ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿದ್ದು, ಒಟ್ಟು 104 ಮಹಾನಗರ ಪಾಲಿಕೆ ಫಲಿತಾಂಶ ಘೋಷಣೆಯಾಗಿದ್ದು, 98 ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದಿರುವುದಾಗಿ ವರದಿ ತಿಳಿಸಿದೆ.
ಈ ಬಾರಿಯ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಮತದಾರರು ಹೆಚ್ಚಿನ ಒಲವು ತೋರಿಸಿಲ್ಲ. ಅಷ್ಟೇ ಅಲ್ಲ ಬಾಲಿವುಡ್ ನಟ ಸನ್ನಿ ಡಿಯೋಲ್ ಪ್ರತಿನಿಧಿಸುವ ಗುರುದಾಸ್ ಪುರ್ ಲೋಕಸಭಾ ಕ್ಷೇತ್ರದ 29 ವಾರ್ಡ್ ಗಳಲ್ಲಿ ಬಿಜೆಪಿ ಕೇವಲ ಒಂದೇ ಒಂದು ಸ್ಥಾನಗಳಿಸಲಿಲ್ಲ ಎಂದು ವರದಿ ವಿವರಿಸಿದೆ.
ಬಟಿಂಡಾದಲ್ಲಿನ ಒಟ್ಟು 50 ವಾರ್ಡ್ ಗಳಲ್ಲಿ 43ರಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ ಬಾರಿಸುವ ಮೂಲಕ 53 ವರ್ಷಗಳ ಬಳಿಕ ಬಟಿಂಡಾ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಗೆ ಮೇಯರ್ ಹುದ್ದೆ ದಕ್ಕಿದಂತಾಗಿದೆ.