ಮೈಸೂರು: ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಯಾರು ಮಾಡುತ್ತಾರೆ. ನಮ್ಮದು ತ್ಯಾಗದ ಪಕ್ಷ. ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಸಿದ್ದರಾಮಯ್ಯ ಅವರಿಗೆ ಯಾರೋ ಕಿವಿ ಕಚ್ಚುವ ಕೆಲಸ ಮಾಡಿದ್ದಾರೆ ಎಂದು ಶಾಸಕ ತನ್ವೀರ್ ಸೇಠ್ ಕಿಡಿಕಾರಿದ್ದಾರೆ.
ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಕುರಿತಂತೆ ತಮಗೆ ನೋಟಿಸ್ ನೀಡುತ್ತಾರೆ ಎಂಬ ವಿಚಾರ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲವನ್ನೂ ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ತಂದಿದ್ದೇನೆ. ಅವರ ಸೂಚನೆಯಂತೆ ಕೆಲಸ ಮಾಡಿದ್ದೇನೆ. ಇದರಲ್ಲಿ ನನ್ನದು ವೈಯಕ್ತಿಕ ವಿಚಾರವಿಲ್ಲ. ಪಕ್ಷದ ಕಾರ್ಯಾದಕ್ಷ ಧ್ರುವನಾರಾಯಣ್ ಕೂಡ ವೀಕ್ಷಕರಾಗಿದ್ದರು. ಪಕ್ಷದ ವರಿಷ್ಠರು ಮೇಯರ್ ಗಿರಿ ನಮ್ಮದಾಗಬೇಕು ಅಂತ ಹೇಳಿದರು. ಆದರೆ, ಕೊನೆ ಗಳಿಗೆಯಲ್ಲಿ ಆದ ಬದಲಾವಣೆಯಿಂದ ಈ ನಿರ್ಧಾರ ಮಾಡಿದೆ ಎಂದು ತಿಳಿಸಿದರು.
ಪಕ್ಷ ನೋಟಿಸ್‌ನಲ್ಲಿ ಏನು ಕೇಳುತ್ತಾರೋ ಅದಕ್ಕೆ ನಾನು ಉತ್ತರ ನೀಡಲು ಸಿದ್ಧ. ಪಕ್ಷದಲ್ಲಿ ಬಣ ರಾಜಕಾರಣ ಇದ್ರೆ ಕೆಲವರು ವೈಯಕ್ತಿಕ ಹಿತ ಕಾಪಾಡಿಕೊಳ್ಳುವ ಹಾಗೂ ಅವರ ಪ್ರತಿಷ್ಠೆಗೆ ನಾನು ಬಲಿಯಾಗಲು ಬಿಡಲ್ಲ. ನಾನು ಯಾರ ವಿರುದ್ಧವೂ ಮಾತನಾಡಲ್ಲ. ಯಾರು ನನಗೆ ಸಮಾಜಯಿಷಿಕೇಳುತ್ತಾರೊ ಅವರಿಗೆ ಉತ್ತರ ನೀಡುತ್ತೇನೆ ಎಂದರು.
ನನ್ನ ಪಕ್ಷದ ವರ್ಚಸ್ಸು ಬೆಳೆಸಲು ನಾನು ಬದ್ಧ. ನಗರದ ಬೆಳವಣಿಗೆ ಮಾರಕವಾದ ಶಕ್ತಿಗಳನ್ನು ಅಧಿಕಾರದಿಂದ ದೂರ ಇಟ್ಟಿದ್ದೇವೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕಿತ್ತು. ಆ ಕೆಲವನ್ನು ನಾನು ಮಾಡಿದ್ದೇನೆ. ಯಾರ ಶಕ್ತಿಯನ್ನು ಯಾರು ಕುಗ್ಗಿಸಲು ಸಾಧ್ಯವಿಲ್ಲ. ಈ ಕುರಿತು ಸಿದ್ದರಾಮಯ್ಯ ಜೊತೆ ಮಾತನಾಡುತ್ತೇನೆ ಎಂದರು.
ಬೆಂಬಲಿಗರ ಆಕ್ರೋಶ: ಶಾಸಕ ತನ್ವೀರ್ ಸೇಠ್ ಗೆ ಕೆಪಿಸಿಸಿಯಿಂದ ನೋಟಿಸ್ ನೀಡುವ ವಿಚಾರ ಕುರಿತು ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧವೇ ಶಾಸಕ ತನ್ವೀರ್ ಸೇಠ್ ಬೆಂಬಲಿಗರು ಆಕೋಶ ವ್ಯಕ್ತಪಡಿಸಿದ್ದಾರೆ.
ಶಾಸಕ ತನ್ವೀರ್ ಸೇಠ್ ಮನೆ ಮುಂದೆ ಜಮಾಯಿಸಿದ ನೂರಾರು ಅಭಿಮಾನಿಗಳು, ಸಿದ್ಧರಾಮಯ್ಯ ಹಾಗೂ ಪಕ್ಷದ ನಾಯಕರ ವಿರುದ್ಧವೇ ಧಿಕ್ಕಾರದ ಕೂಗಿದರು. ಕೆಪಿಸಿಸಿಯಿಂದ ನೋಟಿಸ್ ವಿಚಾರಕ್ಕೆ ಗರಂ ಆಗಿರುವ ಅಭಿಮಾನಿಗಳನ್ನು ತನ್ವೀರ್ ಸೇಠ್ ಸಮಾಧಾನಪಡಿಸಿದರು.