ಹಾನಗಲ್ಲ: ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದೇಶ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಾವು ನೋಡುತ್ತಲೇ ಇದ್ದೇವೆ. ಮಹಿಳೆಯರ ಸುರಕ್ಷತೆ ಹಾಗೂ ಎಲ್ಲ ವರ್ಗದ ಬಂಧುಗಳ ಕಲ್ಯಾಣಕ್ಕೆ ಕಾಂಗ್ರೆಸ್ ಬೆಂಬಲಿಸಿ, ಆಶೀರ್ವದಿಸುವಂತೆ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಟಾಳ್ಕರ ಮನವಿ ಮಾಡಿದರು.
ಹಾನಗಲ್ಲ ಉಪ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದ ಬ್ಯಾಗವಾದಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ ಮತಯಾಚಿಸಿ ಅವರು ಮಾತನಾಡಿದರು. ಜನಸಂಖ್ಯೆಯಲ್ಲಿ ಶೇ.50 ಇರುವ ಮಹಿಳೆಯರಿಗೆ ದೇಶ-ರಾಜ್ಯದಲ್ಲಿ ಯಾವ ರೀತಿ ರಕ್ಷಣೆ ಸಿಗುತ್ತಿದೆ ಎನ್ನುವುದನ್ನು ನೋಡುತ್ತಿದ್ದೇವೆ. ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿರುವ ಬಿಜೆಪಿಗೆ ಮತ ಹಾಕಬೇಕಾ? ಎನ್ನುವುದನ್ನು ನೀವೇ ಯೋಚಿಸಿ ಎಂದರು.
ಶ್ರೀನಿವಾಸ ಮಾನೆಯಂತಹ ಯುವ ನಾಯಕನನ್ನು ಕಾಂಗ್ರೆಸ್ ಹಾನಗಲ್ಲ ಕ್ಷೇತ್ರದ ಜನರ ಮಡಿಲಿಗೆ ಹಾಕಿದೆ. ಕಳೆದ ಮೂರುವರೇ ವರ್ಷಗಳಲ್ಲಿ ತಮ್ಮ ನಾಯಕತ್ವ ಸಾಬೀತು ಪಡಿಸುವಲ್ಲಿ ಶ್ರೀನಿವಾಸ ಮಾನೆ ಯಶಸ್ವಿಯಾಗಿದ್ದಾರೆ. ಸಮಸ್ಯೆ, ಸವಾಲುಗಳ ಮಧ್ಯೆ ಹೋರಾಡಿ ಕ್ಷೇತ್ರದ ಜನರನ್ನು ರಕ್ಷಿಸಿದ್ದಾರೆ. ಕ್ಷೇತ್ರದ ತುಂಬೆಲ್ಲ ಅವರ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ ಎಂದರು.
ಮಾಜಿ ಶಾಸಕ ಮಧು ಬಂಗಾರಪ್ಪ ಮಾತನಾಡಿ, ಜನಪರ ಯೋಜನೆ, ಕಾರ್ಯಕ್ರಮ ಕೊಡುವುದರಲ್ಲಿ ಕಾಂಗ್ರೆಸ್ ಎತ್ತಿದ ಕೈ. ಜನರ ಭಾವನೆಗೆ ಮೊದಲಿನಿಂದಲೂ ಕಾಂಗ್ರೆಸ್ ಸ್ಪಂದಿಸಿದೆ. ಆದರೀಗ ಅಧಿಕಾರದಲ್ಲಿರುವ ಬಿಜೆಪಿ ಜನರ ಭಾವನೆಗಳ ವಿರುದ್ಧ ಆಡಳಿತ ನಡೆಸುವ ಮೂಲಕ ಜನಾಕ್ರೋಶಕ್ಕೆ ಕಾರಣವಾಗಿದೆ ಎಂದು ಹರಿಹಾಯ್ದ ಅವರು, ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಬಗ್ಗೆ ಎಲ್ಲೆಡೆ ಒಳ್ಳೆಯ ವಾತಾವರಣವಿದೆ, ಜನರ ಒಲವಿದೆ ಎಂದರು.
ಬೆಲೆ ಏರಿಕೆಯಿಂದ ಜನ ಬಸವಳಿಯುತ್ತಿದ್ದಾರೆ. ಜೀವನ ದುಸ್ಥಿತಿಗೆ ತಳ್ಳಿದ ಬಿಜೆಪಿ ಬಗೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಸೇಡು ತೀರಿಸಿಕೊಳ್ಳಲು ಜನ ಕಾದು ಕುಳಿತಿದ್ದಾರೆ. ಜನರ ಭಾವನೆ ಏನಿದೆ? ಎನ್ನುವುದು ಸ್ವತಃ ಬಿಜೆಪಿಗೂ ಗೊತ್ತಿದೆ. ಹೀಗಾಗಿಯೇ ಅವರು ಕುತಂತ್ರಕ್ಕೆ ಮೊರೆ ಹೋಗಿದ್ದಾರೆ. ನನ್ನದು ಪಕ್ಕದ ಕ್ಷೇತ್ರ ಸೊರಬ. ಹೀಗಾಗಿ ಹಾನಗಲ್ಲ ಕ್ಷೇತ್ರದೊಂದಿಗೆ ಒಳ್ಳೆಯ ಒಡನಾಟವಿದೆ ಎಂದ ಅವರು, ಕಾಂಗ್ರೆಸ್ ಕ್ಷೇತ್ರದಲ್ಲಿ ಗೆಲ್ಲಲಿದೆ ಎಂದರು. ಈ ವೇಳೆ ಅಭ್ಯರ್ಥಿ ಶ್ರೀನಿವಾಸ ಮಾನೆ ಸೇರಿದಂತೆ ಇತರ ಪ್ರಮುಖ ನಾಯಕರು, ಕಾರ್ಯಕರ್ತರು ಇತರರಿದ್ದರು.