ಶಹಾಬಾದ: ಪಕ್ಷ ಸಂಘಟನೆಗೆ ಮಹತ್ವದ ಘಟ್ಟ ಎಂದು ಭಾವಿಸಲಾದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ತಾಲೂಕಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ| ರಶೀದ್ ಮರ್ಚಂಟ ನೇತೃತ್ವದಲ್ಲಿ ಶನಿವಾರ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ| ರಶೀದ್ ಮರ್ಚಂಟ್, ದೇಶ, ಸಮಾಜ, ಪ್ರಜಾಪ್ರಭುತ್ವ, ಸಂವಿಧಾನದ ಉಳಿವಿಗಾಗಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ. ಆದ್ದರಿಂದ ಎಲ್ಲರೂ ಕಾಂಗ್ರೆಸ್ ಸದಸ್ಯತ್ವವನ್ನು ಪಡೆದುಕೊಳ್ಳಬೇಕು ಎಂದರು.
ಬಿಜೆಪಿಯಿಂದ ದೇಶದ ಐಕ್ಯತೆ ಉಳಿಸಲು ಸಾಧ್ಯವಿಲ್ಲ. ಹೀಗಾಗಿ ಕಾಂಗ್ರೆಸ್‌ಗೆ ಹೊಸ ರಕ್ತದ ಜೊತೆಗೆ ಹೊಸ ಚಿಂತನೆಗಳು ಬರಬೇಕು. ಬದ್ಧತೆ ಇರಬೇಕು. ಇದಕ್ಕಾಗಿ ಹೊಸಬರನ್ನು ಪಕ್ಷಕ್ಕೆ ಸೇರಿಸಬೇಕು. ಅದಕ್ಕಾಗಿ ಸದಸ್ಯತ್ವ ಅಭಿಯಾನ ಹಮ್ಮಿಕೊಂಡಿದ್ದೇವೆ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು, ರೈತರು-ಕಾರ್ಮಿಕರು, ವಿದ್ಯಾರ್ಥಿ-ಯುವ ಜನರು ಕಾಂಗ್ರೆಸ್ ಸೇರಬೇಕು ಎಂದು ಕರೆ ನೀಡಿದರು.
ಪ್ರಸ್ತುತ ಆಡಳಿತ ನಡೆಸುತ್ತಿರುವ ರಾಜ್ಯ ಹಾಗೂ ಕೇಂದ್ರ ಸರಕಾರ ಅಭಿವೃದ್ಧಿ ವಿಚಾರವಾಗಿ ಸಂಪೂರ್ಣವಾಗಿ ವಿಫಲವಾಗಿವೆ. ಬಿಜೆಪಿ ಸರ್ಕಾರದ ಬೆಲೆ ಏರಿಕೆಯಿಂದ ಜನರು ಬೇಸತ್ತು ಹೋಗಿದ್ದಾರೆ. ಅಲ್ಲದೇ ಕಾಂಗ್ರೆಸ್ ಪಕ್ಷದ ಜನಪರವಾದ ಕೊಡುಗೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಕಾಂಗ್ರೆಸ್ ಕಡೆಗೆ ಜನರು ಮುಖಮಾಡುತ್ತಿದ್ದಾರೆ. ಪಕ್ಷವನ್ನು ಬಲಿಷ್ಠಗೊಳಿಸಲು ಈ ಅಭಿಯಾನ ಹಮ್ಮಿಕೊಂಡಿದ್ದೆವೆ ಎಂದರು.
ಪ್ರಧಾನ ಕಾರ್ಯದರ್ಶಿ ಮೃತ್ಯುಂಜಯ ಹಿರೇಮಠ, ಯುವ ಕಾಂಗ್ರೆಸ್ ಅಧ್ಯಕ್ಷ ಕಿರಣ ಚವ್ಹಾಣ ಮಾತನಾಡಿ, ಬಿಜೆಪಿ ಸರ್ಕಾರದ ಬೆಲೆ ಏರಿಕೆ ಸೇರಿದಂತೆ ಬಿಟ್ ಕಾಯಿನ್ ಹಗರಣ ಸರಕಾರದ ವೈಫಲ್ಯವನ್ನು ಎತ್ತಿ ತೋರಿಸಿದೆ. ದೇಶ ನಿರ್ಮಾಣದಲ್ಲಿ ಕಾಂಗ್ರೆಸ್ ಪಾತ್ರ ಹಾಗೂ ಪ್ರಸ್ತುತ ಸಂದರ್ಭದಲ್ಲಿ ದೇಶಕ್ಕೆ ಕಾಂಗ್ರೆಸ್ ಅನಿವಾರ್ಯತೆ ಇದೆ ಎಂದು ಹೇಳಿದರು.
ಅಂಬೇಡ್ಕರ್ ಮೂಲಕ ಸಂವಿಧಾನ ಕೊಡಲಾಗಿದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟದ್ದು ಮಾತ್ರವಲ್ಲದೆ, ಸ್ವಾಭಿಮಾನದಿಂದ ಬದುಕುವಂತೆ ಮಾಡಿದ್ದು ಕಾಂಗ್ರೆಸ್ ಪಕ್ಷ. ಅದಕ್ಕಾಗಿ ಕಾಂಗ್ರೆಸ್ ಪಕ್ಷದ ಸದಸ್ಯತ್ವವನ್ನು ಜನರು ಪಡೆದುಕೊಳ್ಳುತ್ತಿದ್ದಾರೆ ಎಂದರು.
ಮುಖಂಡರಾದ ಗಿರೀಶ ಕಂಬಾನೂರ, ಶರಣು ಪಗಲಾಪುರ, ಸೂರ್ಯಕಾಂತ ಕೋಬಾಳ, ನಾಗಣ್ಣ ರಾಂಪೂರೆ, ಮಲ್ಲಿಕಾರ್ಜುನ ವಾಲಿ, ನಾಗರಾಜ ಕರಣಿಕ್, ಜಹೀರ ಅಹಮ್‌ದ್, ಸಯ್ಯದ್ ಜಹೀರ್, ರಮೇಶ ಪವಾರ, ಸ್ನೇಹಲ್ ಜಾಯಿ, ಮಹ್ಮದ್ ಅಜರೋದ್ದಿನ್, ಮಹ್ಮದ್ ಇಮ್ರಾನ್, ಸಾಜಿದ್ ಗುತ್ತೇದಾರ, ರಾಕೇಶ ಪವಾರ ಮತ್ತಿತರರು ಇದ್ದರು.