Advertisement
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ರವಿವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಐವನ್ ಡಿ’ಸೋಜಾ, ಜಿಲ್ಲೆಯಲ್ಲಿ ಹುಟ್ಟಿ ಬೆಳೆದು, ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿ ದಕ್ಷ ನಿರ್ವಹಣೆಯ ಮೂಲಕ ಅತ್ಯುತ್ತಮ ಸಾಧನೆ ಮಾಡುತ್ತಿರುವ ಜನಸ್ನೇಹಿ ಹಾಗೂ ರೈತರು, ಗ್ರಾಮೀಣ ಭಾಗದ ಜನರ ಪರವಾಗಿರುವ ವಿಜಯ ಬ್ಯಾಂಕ್‌ನ್ನು ನಷ್ಟದಲ್ಲಿ ನಡೆಯುತ್ತಿರುವ ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನ ಮಾಡುತ್ತಿರುವುದು ಕೇಂದ್ರ ಸರಕಾರ ಜಿಲ್ಲೆಗೆ, ಜನರಿಗೆ ಮಾಡುತ್ತಿರುವ ಅನ್ಯಾಯ. ಇದರ ವಿರುದ್ಧ ಜಿಲ್ಲೆಯ ಸಂಸದರು ಲೋಕಸಭೆಯಲ್ಲಿ ಧ್ವನಿಯೆತ್ತಿಲ್ಲ. ಬಿಜೆಪಿ ಶಾಸಕರು ಮಾತನಾಡುತ್ತಿಲ್ಲ. ಈ ಧೋರಣೆಗಳನ್ನು ಪ್ರತಿಭಟಿಸಿ ಜ.8ರಂದು ಪುರಭವನದ ಬಳಿಯ ಮಹಾತ್ಮಾ ಗಾಂಧೀಜಿ ಪ್ರತಿಮೆಯ ಬಳಿ ಉಪವಾಸ ಸತ್ಯಾಗ್ರಹ ನಡೆಸಲಿದ್ದೇನೆ ಎಂದರು.
ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಪ್ರತ್ಯೇಕ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಮಿಥುನ್ ರೈ, ಲಾಭದಲ್ಲಿ ಮುನ್ನಡೆಯುತ್ತಿರುವ ವಿಜಯ ಬ್ಯಾಂಕನ್ನು 2017-18ನೇ ಸಾಲಿನ ಮೊದಲ ತ್ತೈಮಾಸಿಕದಲ್ಲಿ 3,102 ಕೋ.ರೂ. ನಷ್ಟ ಅನುಭವಿಸಿರುವ ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನ ಮಾಡುವ ಮೋದಿ ಸರಕಾರದ ನಿರ್ಧಾರ ಜಿಲ್ಲೆಗೆ ಮಾಡಿರುವ ಅನ್ಯಾಯ. ಇದು ದೇಶದ ಆರ್ಥಿಕ ವ್ಯವಸ್ಥೆಗೆ ವಿಜಯ ಬ್ಯಾಂಕ್ ನೀಡಿರುವ ಕೊಡುಗೆಯನ್ನು ಅಳಿಸಿ ಹಾಕುವ ಹುನ್ನಾರ. ಇದರ ವಿರುದ್ಧ ಪಕ್ಷಭೇದ ಮರೆತು ಧ್ವನಿ ಎತ್ತುವ ಮೂಲಕ ಬ್ಯಾಂಕಿನ ಅಸ್ತಿತ್ವ ಮತ್ತು ಹೆಸರನ್ನು ಉಳಿಸಲು ಹೋರಾಟ ಮಾಡ ಬೇಕಿದೆ. ಅದಕ್ಕಾಗಿ ಜ.9ರಂದು ನಗರದಲ್ಲಿ ಹರತಾಳಕ್ಕೆ ಯುವ ಕಾಂಗ್ರೆಸ್ ಕರೆ ನೀಡುತ್ತಿದೆ ಎಂದರು.
ಅನೇಕ ಸಂಘಟನೆಗಳು ಬೆಂಬಲ ಸೂಚಿಸಿದ್ದು, ಬ್ಯಾಂಕಿನ ಎಲ್ಲ ಗ್ರಾಹಕರು, ಸಿಬಂದಿ ವರ್ಗ ಬೆಂಬಲ ನೀಡಬೇಕು. ಸಂಸದರು ಹಾಗೂ ಬಿಜೆಪಿ ಶಾಸಕರು ಇದರಲ್ಲಿ ಭಾಗವಹಿಸಬೇಕು ಯುವ ಕಾಂಗ್ರೆಸ್ ಆಹ್ವಾನ ನೀಡುತ್ತಿದೆ ಎಂದವರು ಹೇಳಿದರು.
Related Articles
Advertisement