Advertisement

ಮೂರು ಮಹಾನಗರ ಪಾಲಿಕೆ ಚುನಾವಣೆಗೆ ಕಾಂಗ್ರೆಸ್‌ ರಣತಂತ್ರ

07:43 PM Aug 12, 2021 | Team Udayavani |

ಬೆಂಗಳೂರು: ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಹಾಗೂ ಕಲಬುರಗಿ ಮಹಾನಗರ ಪಾಲಿಕೆಗಳ ಚುನಾವಣೆ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮೊದಲ ಅಗ್ನಿಪರೀಕ್ಷೆಯಾಗಿದ್ದು, ಆಡಳಿತಾರೂಢ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಲು ಕಾಂಗ್ರೆಸ್‌ ಕಾರ್ಯತಂತ್ರ ರೂಪಿಸಿದೆ.

Advertisement

ಬಸವರಾಜ ಬೊಮ್ಮಾಯಿ ಅವರ ತವರು ಹುಬ್ಬಳ್ಳಿ-ಧಾರವಾಡ, ನೆರೆಯ ಬೆಳಗಾವಿ ಹಾಗೂ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪ್ರಭುತ್ವ ಸಾಧಿಸಿದರೆ ಹಾನಗಲ್‌ ಹಾಗೂ ಸಿಂಧಗಿ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗೂ ಸಹಕಾರಿಯಾಗುತ್ತದೆ. ಜತೆಗೆ, ಮುಂದಿನ ಬಿಬಿಎಂಪಿ ಹಾಗೂ ತಾಲೂಕು ಮತ್ತು ಜಿಲ್ಲಾ ಪಂಚಾಯತ್‌ ಚುನಾವಣೆಗೂ ಸಂದೇಶ ರವಾನಿಸಿದಂತಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಸಜ್ಜಾಗುತ್ತಿದೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಈ ಕುರಿತು ಬುಧವಾರ ರಾತ್ರಿ ಚರ್ಚೆ ನಡೆಸಿದ್ದು, ಮೂರೂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವ್ಯವಸ್ಥಿತವಾಗಿ ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಖುದ್ದು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳಬೇಕು ಎಂಬ ಬೇಡಿಕೆ ಆ ಭಾಗದ ಮುಖಂಡರಿಂದ ಬಂದಿರುವುದರಿಂದ ಯಾವ ರೀತಿಯಲ್ಲಿ ಪ್ರಚಾರ ನಡೆಸಬೇಕು, ಯಾವ ವಿಷಯಗಳ ಆಧಾರದಲ್ಲಿ ಚುನಾವಣೆ ಎದುರಿಸಬೇಕು ಎಂಬ ಬಗ್ಗೆಯೂ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಗೋವಾ – ಬೆಳಗಾವಿ ಗಡಿಯಲ್ಲಿ ಹೆಚ್ಚಿದ ತಪಾಸಣೆ : ತೊಂದರೆ ಅನುಭವಿಸುವ ವ್ಯಾಪಾರಸ್ಥರು

ಆಡಳಿತಾರೂಢ ಬಿಜೆಪಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಹಾನಗರ ಪಾಲಿಕೆಗಳ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸುವುದರಿಂದ ಅದಕ್ಕೆ ತಕ್ಕಂತೆ ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಪ್ರಚಾರ ಹಾಗೂ ಮತದಾನದವರೆಗೆ ಪ್ರತಿ ಹಂತದಲ್ಲೂ ತಂತ್ರಗಾರಿಕೆ ರೂಪಿಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.

ಪ್ರಣಾಳಿಕೆ

ಮಹಾನಗರ ಪಾಲಿಕೆ ಚುನಾವಣೆ ಸಂಬಂಧ ಎಚ್‌.ಕೆ.ಪಾಟೀಲ್‌, ಸತೀಶ್‌ ಜಾರಕಿಹೊಳಿ, ಈಶ್ವರ್‌ ಖಂಡ್ರೆ, ಪ್ರಿಯಾಂಕ್‌ ಖರ್ಗೆ, ಅಜಯ್‌ಸಿಂಗ್‌, ಎಂ.ಬಿ.ಪಾಟೀಲ್‌ ಅವರ ನೇತೃತ್ವದಲ್ಲಿ ತಂಡ ರಚಿಸಲು ಹಾಗೂ ಪ್ರತಿ ಮಹಾನಗರ ಪಾಲಿಕೆಗೆ ಅಭಿವೃದ್ಧಿಯ ರೂಪು-ರೇಷೆ ಸಹಿತ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಲು ಚಿಂತನೆ ನಡೆಸಿದೆ.

Advertisement

ಪ್ರತಿ ಮಹಾನಗರ ಪಾಲಿಕೆಗೆ ಹತ್ತು ಶಾಸಕರನ್ನು ನಿಯೋಜಿಸಿ ವಿಧಾನಸಭೆ ಕ್ಷೇತ್ರಾವಾರು ಮಾಜಿ ಶಾಸಕರ ಜತೆಗೆ ಗೆಲುವಿಗೆ ಕಾರ್ಯತಂತ್ರ ರೂಪಿಸಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

ಬೆಳಗಾವಿ ಲೋಕಸಭೆ ಉಪ ಚುನಾವಣೆ ನಡೆಸಿದಂತೆಯೇ ಮಹಾನಗರ ಪಾಲಿಕೆ ಚುನಾವಣೆಯನ್ನೂ ಗಂಭೀರವಾಗಿ ಪರಿಗಣಿಸಬೇಕು. ಸತೀಶ್‌ ಜಾರಕಿಹೊಳಿ ಅವರಿಗೇ ಉಸ್ತುವಾರಿ ನೀಡಿ ಮಾಜಿ ಶಾಸಕ ಫೈರೋಜ್‌  ಸೇಠ್ ಸೇರಿದಂತೆ ಹಾಲಿ ಶಾಸಕರ ನೇತೃತ್ವದ ತಂಡ ರಚಿಸುವುದು.
ಹುಬ್ಬಳ್ಳಿ-ಧಾರವಾಡದಲ್ಲಿ ಎಚ್‌.ಕೆ.ಪಾಟೀಲ್‌ ನೇತೃತ್ವದಲ್ಲಿ ಹಾಲಿ ಹಾಗೂ ಮಾಜಿ ಶಾಸಕರ ತಂಡ ರಚನೆ, ಕಲಬುರಗಿಯಲ್ಲಿ ಎಂ.ಬಿ.ಪಾಟೀಲ್‌, ಈಶ್ವರ್‌ ಖಂಡ್ರೆ, ಪ್ರಿಯಾಂಕ್‌ ಖರ್ಗೆ, ಡಾ.ಅಜಯ್‌ಸಿಂಗ್‌ ಅವರನ್ನೊಳಗೊಂಡ ರಚನೆ ರಚನೆ ಮಾಡುವ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಮಧ್ಯೆ, ಜೆಡಿಎಸ್‌ ಸಹ ಮೂರೂ ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಸ್ಪರ್ಧೆ ಮಾಡಲು ತೀರ್ಮಾನಿಸಿದ್ದು, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆ ಭಾಗದ ಮುಖಂಡರ ಜತೆ ಸಮಾಲೋಚನೆ ನಡೆಸಿದ್ದಾರೆ. ಎಲ್ಲ ಕಡೆ ಸಮರ್ಥ ಅಭ್ಯರ್ಥಿಗಳು ಸಿಗುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ ಎನ್ನಲಾಗಿದೆ.

ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ-ಧಾರವಾಡ ಮೂರೂ ಮಹಾನಗರ ಪಾಲಿಕೆ ಚುನಾವಣೆ ಕಾಂಗ್ರೆಸ್‌ಗೆ ಪ್ರತಿಷ್ಠೆಯಾಗಿದೆ. ಮೂರೂ ಕಡೆ ನಮಗೆ ಭದ್ರ ನೆಲೆಯಿದ್ದು ಹಲವಾರು ಬಾರಿ ಆಡಳಿತ ನಡೆಸಿದ್ದೇವೆ. ಪೂರ್ವಭಾವಿ ಸಮಾಲೋಚನೆಗಳು ನಡೆದಿದ್ದು, ಸದ್ಯದಲ್ಲೇ ಪ್ರತಿ ಪಾಲಿಕೆಗೂ ತಂಡ ರಚಿಸಿ ಹೊಣೆಗಾರಿಕೆ ನೀಡಿ ಪೂರ್ಣ ಪ್ರಮಾಣದ ಕಾರ್ಯತಂತ್ರದೊಂದಿಗೆ ಹೋರಾಟದ ಕಣಕ್ಕೆ ಇಳಿಯುತ್ತೇವೆ.
-ಸಲೀಂ ಅಹಮದ್‌, ಕೆಪಿಸಿಸಿ ಕಾರ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next