Advertisement

“ಹಗರಣಗಳನ್ನು ಮುಚ್ಚಿ ಹಾಕಲು ಕಾಂಗ್ರೆಸಿಗರಿಂದ ನೀಚ ಹೇಳಿಕೆ’

09:25 AM Oct 15, 2017 | |

ಉಡುಪಿ: ಸಚಿವ ರೋಶನ್‌ ಬೇಗ್‌ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ನೀಡಿರುವ ಹೇಳಿಕೆಯ ಹಿಂದೆ ಹಗರಣಗಳನ್ನು ಮುಚ್ಚಿ ಹಾಕುವ ಸಂಚು ಅಡಗಿದೆ ಎಂದು ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮತ್ತು ಮೀನುಗಾರ ಮುಖಂಡ ಯಶ್‌ಪಾಲ್‌ ಸುವರ್ಣ ಆರೋಪಿಸಿದ್ದಾರೆ.

Advertisement

ಕಳೆದ ಕೆಲವು ದಿನಗಳಿಂದ ಮುಖ್ಯ ಮಂತ್ರಿ ಸಿದ್ದರಾಮಯ್ಯ ನಡೆಸಿರುವ ಡಿನೋಟಿಫೈ ಹಗರಣ ಎಲ್ಲ ಮಾಧ್ಯಮಗಳಲ್ಲಿ ಚರ್ಚೆ ವಿಚಾರ ವಾಗಿದೆ. ಇನ್ನೊಂದು ಕಡೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣು ಗೋಪಾಲ್‌ ನಡೆಸಿರುವ ಸೋಲಾರ್‌ ಹಗರಣ ರಾಷ್ಟ್ರ ಮಟ್ಟದಲ್ಲೇ ಸದ್ದು ಮಾಡುತ್ತಿದೆ. ಜನರ ಮುಂದೆ ಬೆತ್ತಲಾಗಿ ನಿಂತಿರುವ ರಾಜ್ಯ ಸರಕಾರದ ಕಡೆಯಿಂದ ಜನರ ಗಮನವನ್ನು ಬೇರೆ ಕಡೆಗೆ ಸೆಳೆಯಲು ಸಚಿವ ರೋಶನ್‌ ಬೇಗ್‌ ಅವರು ಈ ಕುತಂತ್ರವನ್ನು ಹೂಡಿದ್ದಾರೆ. ಈ ರೀತಿಯ ತಂತ್ರಗಳಿಂದ ಕಾಂಗ್ರೆಸಿಗರ ಹಗರಣ ಗಳನ್ನು ಮುಚ್ಚಿ ಹಾಕಲು ಸಾಧ್ಯವಿಲ್ಲ. ಡಿನೋಟಿಫೈ ಹಗರಣದ ವಿರುದ್ಧ ಬಿಜೆಪಿ ಜನಜಾಗೃತಿ ನಡೆಸಲಿದೆ ಎಂದಿದ್ದಾರೆ. 

ಯುಪಿಎ ಅವಧಿಯಲ್ಲಿ ಕೇಂದ್ರ ಸರಕಾರದ ಹಗರಣಗಳು ದಿನಕ್ಕೊಂದರಂತೆ ಹೊರ ಬರುತ್ತಿತ್ತು. ಆದರೆ ನರೇಂದ್ರ ಮೋದಿಯವರ ಸರಕಾರ ಬಂದ ಬಳಿಕ ಒಂದೇ ಒಂದು ಭ್ರಷ್ಟಾಚಾರದ ಪ್ರಕರಣಗಳು ನಡೆದಿಲ್ಲ. ಸುಖಾ ಸುಮ್ಮನೆ ಮೋದಿಯವರ ಖಾಸಗಿ ಬದುಕು, ಬಟ್ಟೆ ಬರೆಗಳು ವಿದೇಶಿ ಪ್ರಯಾಣದ ಬಗ್ಗೆ ವ್ಯರ್ಥಾರೋಪ ಮಾಡುತ್ತಾ ವಿಪಕ್ಷಗಳು ನಗೆಪಾಟಲಿಗೀಡಾಗುತ್ತಿವೆ. ಇದೀಗ ರೋಶನ್‌ ಬೇಗ್‌ ಒಂದು ಹೆಜ್ಜೆ ಮುಂದೆ ಹೋಗಿ ತನಗೆ ಕಾಂಗ್ರೆಸ್‌ ಪಕ್ಷ ಕರುಣಿಸಿದ ಸಂಸ್ಕಾರವನ್ನು ಬಳಸಿ ಪ್ರಧಾನಿಯವರನ್ನು ನಿಂದಿಸಿದ್ದಾರೆ. ಇಂತಹ ವ್ಯಕ್ತಿಯ ಕೈಯಲ್ಲಿ ರಾಜ್ಯದ ಶಿಕ್ಷಣ ವ್ಯವಸ್ಥೆ ಸಿಲುಕಿರುವುದು ನಿಜಕ್ಕೂ ದುರಂತ. ಮೋದಿಯವರು ಮೊನ್ನೆ ಹುಟ್ಟೂರಿನಲ್ಲಿ ಮಾಡಿದ ಭಾಷಣದಲ್ಲಿ ಹೇಳಿದಂತೆ ಅವರು ಕಳೆದ 12 ವರ್ಷಗಳಿಂದ ಆರೋಪ, ಅಪಮಾನಗಳನ್ನು ಅರಗಿಸಿಕೊಂಡೇ ಬೆಳೆದಿದ್ದಾರೆ. ಈ ಸಹನೆಯನ್ನು ಕಾಂಗ್ರೆಸಿಗರು ದೌರ್ಬಲ್ಯವೆಂದು ಬಗೆದು ದುಷ್ಟ ಚೇಷ್ಟೆ ಮುಂದುವರಿಸುತ್ತ ಹೋದರೆ ಪರಿಸ್ಥಿತಿ ನೆಟ್ಟಗಿರದು ಎಂದು ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್‌ ಮುಕ್ತ ಭಾರತ ನಿರ್ಮಾಣಕ್ಕೆ ಕಾಂಗ್ರೆಸ್‌ ನಾಯಕರೇ ಸಹಕರಿಸುತ್ತಿದ್ದು, ರೋಶನ್‌ ಬೇಗ್‌ ಸಹಿತ ಕಾಂಗ್ರೆಸ್‌ ನಾಯಕರು ಪ್ರಧಾನಿ ನರೇಂದ್ರ ಮೋದಿಯವರ ಕುರಿತಾಗಿ ಮಾಡಿರುವ ಎಲ್ಲ ಅವಹೇಳನಗಳಿಗೆ ಮುಂದಿನ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮತದಾರ ಪ್ರಭುಗಳು ಉತ್ತರಿಸಲಿದ್ದಾರೆ ಎಂದು ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next