Advertisement

ಎಸ್ಪಿ-ಬಿಎಸ್ಪಿ ಋಣ ತೀರಿಸಿದ ಕಾಂಗ್ರೆಸ್‌

12:30 AM Mar 18, 2019 | Team Udayavani |

ಲಕ್ನೋ: ರಾಜಕೀಯವಾಗಿ ನಿರ್ಣಾಯಕವಾಗಿರುವ ಉತ್ತರ ಪ್ರದೇಶದಲ್ಲಿ ಎಸ್‌ಪಿ ಹಾಗೂ ಬಿಎಸ್‌ಪಿ ಮೈತ್ರಿ ಮಾಡಿಕೊಂಡರೂ, ರಾಯ್‌ಬರೇಲಿ ಮತ್ತು ಅಮೇಠಿ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದ್ದಕ್ಕೆ ಪ್ರತಿ ಯಾಗಿ ಕಾಂಗ್ರೆಸ್‌ ಈಗ ಆ ಪಕ್ಷಗಳ ಋಣ ತೀರಿಸಿದೆ. ಎಸ್‌ಪಿ-ಬಿಎಸ್‌ಪಿ-ಆರ್‌ಎಲ್‌ಡಿ ಮೈತ್ರಿ ಕೂಟಕ್ಕೆ 7 ಲೋಕಸಭೆ ಸೀಟುಗಳನ್ನು ಕಾಂಗ್ರೆಸ್‌ ಬಿಟ್ಟುಕೊಟ್ಟಿದೆ.

Advertisement

ಉತ್ತರಪ್ರದೇಶದ ಕಾಂಗ್ರೆಸ್‌ ಅಧ್ಯಕ್ಷ ರಾಜ್‌ಬಬ್ಬರ್‌ ಈ ಕುರಿತು ಭಾನುವಾರ ಘೋಷಿಸಿದ್ದಾರೆ. ಎಸ್‌ಪಿ-ಬಿಎಸ್ಪಿ-ಆರ್‌ಎಲ್‌ಡಿ ಮೈತ್ರಿಕೂಟಕ್ಕೆ 7 ಹಾಗೂ ಅಪ್ನಾ ದಲ್‌ಗೆ 2 ಸೇರಿದಂತೆ ಒಟ್ಟಾರೆ ಪ್ರತಿಪಕ್ಷಗಳಿಗೆ 12ಕ್ಕೂ ಹೆಚ್ಚು ಸೀಟುಗಳನ್ನು ಬಿಟ್ಟು ಕೊಟ್ಟಿರುವುದಾಗಿ ರಾಜ್‌ಬಬ್ಬರ್‌ ಮಾಹಿತಿ ನೀಡಿ ದ್ದಾರೆ. “ಮೈನ್‌ಪುರಿ, ಕನೌಜ್‌, ಫಿರೋಜಾ ಬಾದ್‌ ಸೇರಿದಂತೆ 7 ಸ್ಥಾನಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ. ಎಸ್‌ಪಿ ನಾಯಕ ಮುಲಾಯಂ ಸಿಂಗ್‌ ಯಾದವ್‌, ಬಿಎಸ್‌ಪಿ ನಾಯಕಿ ಮಾಯಾ ವತಿ, ಆರ್‌ಎಲ್‌ಡಿ ಮುಖ್ಯಸ್ಥ ಅಜಿತ್‌ ಸಿಂಗ್‌, ಅವರ ಪುತ್ರ ಜಯಂತ್‌ ಚೌಧರಿ ಸ್ಪರ್ಧಿಸುತ್ತಿರುವ ಕ್ಷೇತ್ರ ಗಳನ್ನು ಬಿಟ್ಟು ಕೊಡುತ್ತಿದ್ದೇವೆ’ ಎಂದು ರಾಜ್‌ಬಬ್ಬರ್‌ ಹೇಳಿದ್ದು, ಅಭ್ಯರ್ಥಿ ಯನ್ನು ಕಣಕ್ಕಿಳಿಸದೇ ಇರಲು ನಿರ್ಧರಿಸಿರುವ 7ನೇ ಕ್ಷೇತ್ರ ಯಾವುದು ಎಂಬ ಗುಟ್ಟನ್ನು ಅವರು ಬಿಟ್ಟುಕೊಟ್ಟಿಲ್ಲ. ಮೈತ್ರಿ  ಕೂಟವು ರಾಯ್‌ಬರೇಲಿ ಮತ್ತು ಅಮೇಠಿಯನ್ನು ನಮಗೆ ಬಿಟ್ಟುಕೊಟ್ಟಿದ್ದಕ್ಕೆ ಪ್ರತಿಯಾಗಿ ಈ ನಿರ್ಧಾರ ಕೈಗೊಳ್ಳ ಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಇದೇ ವೇಳೆ, 7 ಕ್ಷೇತ್ರಗಳಲ್ಲಿ ಜನ ಅಧಿಕಾರ್‌ ಪಾರ್ಟಿ ಜತೆ ಕಾಂಗ್ರೆಸ್‌ ಚುನಾವಣಾ ಒಪ್ಪಂದ ಮಾಡಿಕೊಂಡಿದ್ದು, ಝಾನ್ಸಿ, ಚಂಡೌಲಿ ಸೇರಿದಂತೆ 5 ಕ್ಷೇತ್ರಗಳಲ್ಲಿ ಜನ ಅಧಿಕಾರ್‌ ಪಾರ್ಟಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಉಳಿದಂತೆ ಎರಡು ಸೀಟು ಗಳಲ್ಲಿ ಇದೇ ಪಕ್ಷದ ಅಭ್ಯರ್ಥಿಗಳು ಕಾಂಗ್ರೆಸ್‌ ಚಿಹ್ನೆಯಡಿ ಕಣಕ್ಕಿಳಿಯಲಿದ್ದಾರೆ. ಈ ನಡುವೆ, ಎಸ್‌ಪಿ ನಾಯಕ ಅಖೀಲೇಶ್‌ ಯಾದವ್‌ ಹಾಗೂ ಬಿಎಸ್ಪಿ ನಾಯಕಿ ಮಾಯಾವತಿ ಅವರು ಈ ಬಾರಿ ಸ್ಪರ್ಧಿಸುವ ಸಾಧ್ಯತೆ ಕಡಿಮೆ ಎಂದೂ ಕೆಲ ಮೂಲಗಳು ತಿಳಿಸಿವೆ.

“ಕೈ’ ಕೊಟ್ಟ ಭೀಮ್‌ ಆರ್ಮಿ: ಇನ್ನೊಂದೆಡೆ, ಕಾಂಗ್ರೆಸ್‌ ಜತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ ಎಂದು ಉತ್ತರಪ್ರದೇಶದ ಭೀಮ್‌ ಆರ್ಮಿ ರಾಷ್ಟ್ರೀಯ ಅಧ್ಯಕ್ಷ ವಿನಯ್‌ ರತನ್‌ ಸಿಂಗ್‌ ಸ್ಪಷ ಪಡಿಸಿದ್ದಾರೆ. ಇತ್ತೀಚೆಗೆ ಭೀಮ್‌ ಆರ್ಮಿಯ ಮುಖ್ಯಸ್ಥ ಚಂದ್ರ ಶೇಖರ್‌ ಆಜಾದ್‌ರನ್ನು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಭೇಟಿಯಾಗಿ ಮಾತುಕತೆ ನಡೆಸಿದ ಬೆನ್ನಲ್ಲೇ, ಅವರು ಕಾಂಗ್ರೆಸ್‌ಗೆ ಬೆಂಬಲ ಘೋಷಿಸಬಹುದು ಎಂಬ ವದಂತಿ ಹಬ್ಬಿತ್ತು. ಆದರೆ, ಭಾನುವಾರ ಮಾತ ನಾಡಿದ ವಿನಯ್‌ ಸಿಂಗ್‌, 60 ವರ್ಷಗಳಲ್ಲಿ ಕಾಂಗ್ರೆಸ್‌ ದಲಿತರಿಗೇನೂ ಮಾಡಿಲ್ಲ. ಹೀಗಾಗಿ ಆ ಪಕ್ಷಕ್ಕೆ ಬೆಂಬಲ ಘೋಷಿಸುವ ಮಾತೇ ಇಲ್ಲ ಎಂದು ಹೇಳಿದ್ದು, ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಬಿಹಾರ ಸೀಟು ಹಂಚಿಕೆ ಫೈನಲ್‌: ಬಿಹಾರದಲ್ಲಿ ಎನ್‌ಡಿಎ ಮಿತ್ರಪಕ್ಷಗಳಾದ ಬಿಜೆಪಿ, ಜೆಡಿಯು ಮತ್ತು ಎಲ್‌ಜೆಪಿ ಭಾನು ವಾರ 40 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಬಿಜೆಪಿ ಮತ್ತು ಜೆಡಿಯು ತಲಾ 17 ಕ್ಷೇತ್ರಗಳಲ್ಲಿ, ಎಲ್‌ಜೆಪಿ 6  ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ. ಈ ನಡುವೆ, ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಅವರು ಪ್ರತಿನಿಧಿ ಸುತ್ತಿರುವ ಪಾಟ್ನಾ ಸಾಹಿಬ್‌ ಕ್ಷೇತ್ರದಲ್ಲಿ ಈ ಬಾರಿ ಅವರಿಗೆ ಕೊಕ್‌ ಕೊಟ್ಟು, ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ಗೆ ಟಿಕೆಟ್‌ ನೀಡಲು ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

Advertisement

ಶಾಗೆ ಆಹ್ವಾನ: ಗುಜರಾತ್‌ನ ಗಾಂಧಿನಗರದಲ್ಲಿ ಸ್ಪರ್ಧಿಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗೆ ಪಕ್ಷದ ಕಾರ್ಯಕರ್ತರು ಆಹ್ವಾನ ನೀಡಿದ್ದಾರೆ. ಪ್ರಸ್ತುತ ಗಾಂಧಿನಗರ ಕ್ಷೇತ್ರವನ್ನು ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಪ್ರತಿ ಡಿನಿಧಿಸುತ್ತಿದ್ದಾರೆ.

ವಿವರ ನೀಡುವಂತೆ ಎಟಿಸಿಗೆ ಸೂಚನೆ
ಚುನಾವಣಾ ಉದ್ದೇಶಕ್ಕೆ ಬಳಸಲಾಗುವ ಹೆಲಿಕಾಪ್ಟರ್‌ಗಳು ಹಾಗೂ ಬಾಡಿಗೆ ವಿಮಾನಗಳ ವಿವರವನ್ನು ಹಂಚಿಕೊಳ್ಳುವಂತೆ ಏರ್‌ ಟ್ರಾಫಿಕ್‌ ಕಂಟ್ರೋಲ್‌ ವಿಭಾಗಕ್ಕೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಅಭ್ಯರ್ಥಿಗಳ ಚುನಾವಣಾ ವೆಚ್ಚಗಳ ಮೇಲೆ ಕಣ್ಣಿಡುವ ಸಲುವಾಗಿ ಈ ನಿರ್ದೇಶನ ನೀಡಲಾಗಿದೆ. ಅಲ್ಲದೆ, ಬಾಡಿಗೆ ವಿಮಾನಗಳಲ್ಲಿ ಪ್ರಯಾಣಿಸುವವರ ಬ್ಯಾಗುಗಳನ್ನೂ ತಪಾಸಣೆ ನಡೆಸುವಂತೆಯೂ ಸೂಚಿಸಲಾಗಿದೆ. ಮಹಾಮೈತ್ರಿ ಎಂಬುದು ವಿಪತ್ತಿನ ಕಡೆಗೆ ಪಯಣವಿದ್ದಂತೆ. ಹೀಗಾಗಿ ಜನರು ಮಹಾಕಲಬೆರಕೆಯ ಹಿಂದೆ ಹೋಗದೇ ಈ ಚುನಾವಣೆಯಲ್ಲಿ ಸೂಕ್ತವಾದ ಆಯ್ಕೆಯನ್ನೇ ಮಾಡಲಿದ್ದಾರೆ ಎಂಬ ನಂಬಿಕೆಯಿದೆ. 
ಅರುಣ್‌ ಜೇಟ್ಲಿ, ಕೇಂದ್ರ ಸಚಿವ

ದೇಶದಲ್ಲಿವೆ 2293 ಪಕ್ಷಗಳು!
ಭರೋಸಾ ಪಾರ್ಟಿ, ಸಬ್ಸಿ ಬಡಿ ಪಾರ್ಟಿ, ರಾಷ್ಟ್ರೀಯ್‌ ಸಾಫ್ ನೀತಿ ಪಾರ್ಟಿ,  ನ್ಯೂ ಜನರೇಶನ್‌ ಪೀಪಲ್ಸ್‌ ಪಾರ್ಟಿ… ಇಂಥ ಹೆಸರಿನ ಪಕ್ಷಗಳೂ ಇವೆಯೇ ಎಂದು ನೀವು ಹುಬ್ಬೇರಿಸಬಹುದು. ಇವೆಲ್ಲವೂ ಚುನಾವಣಾ ಆಯೋಗವೇ ಮಾನ್ಯ ಮಾಡಿದ ಪಕ್ಷಗಳು! ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷ ಗಳು ಎಲ್ಲೆಲ್ಲೂ ಹುಟ್ಟಿಕೊಳ್ಳುತ್ತವೆ. ಸದ್ಯ ಇಡೀ ದೇಶದಲ್ಲಿ ಸುಮಾರು 2,300 ಪಕ್ಷಗಳಿವೆ. ಅದರಲ್ಲೂ ಲೋಕಸಭೆ ಚುನಾ ವಣೆಯ ಕಾವು ಏರುತ್ತಿದ್ದಂತೆ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಪಕ್ಷಗಳ ನೋಂದ ಣಿಯೂ ಏರಿಕೆಯಾಗಿದೆ. ಫೆಬ್ರವರಿ ವರೆಗೆ 2143 ಪಕ್ಷಗಳು ನೋಂದಣಿಯಾಗಿ ದ್ದವು. ನಂತರದ 2 ತಿಂಗಳಲ್ಲಿ 149 ಪಕ್ಷ ಗಳು ನೋಂದಣಿ ಮಾಡಿಕೊಂಡಿವೆ. ಚುನಾ  ವಣೆ ಘೋಷಣೆಯಾಗುವ ಮುನ್ನಾ ದಿನ ಚುನಾವಣಾ ಆಯೋಗದಲ್ಲಿ ನೋಂದಣಿ ಯಾದ ಪಕ್ಷಗಳ ಸಂಖ್ಯೆ 2,293 ಆಗಿದೆ.

ಬಿಹಾರದ ಬಹುಜನ ಆಜಾದ್‌ ಪಾರ್ಟಿ, ಉತ್ತರ ಪ್ರದೇಶದ ಸಾಮೂಹಿಕ ಏಕತಾ ಪಾರ್ಟಿ, ಜೈಪುರದ ರಾಷ್ಟ್ರೀಯ ಸಾಫ್ ನೀತಿ ಪಾರ್ಟಿ, ದೆಹಲಿಯ ಸಬ್ಸಿ ಬಡಿ ಪಾರ್ಟಿ, ತೆಲಂಗಾಣದ ಭರೋಸಾ ಪಾರ್ಟಿ ಹಾಗೂ ತಮಿಳುನಾಡಿನ ನ್ಯೂ ಜನರೇಶನ್‌ ಪೀಪಲ್ಸ್‌ ಪಾರ್ಟಿಗಳೆಲ್ಲ ಚುನಾವಣೆ ಸಮೀಪಿಸುತ್ತಿದ್ದಂತೆ ಹುಟ್ಟಿ ಕೊಂಡಿರುವಂಥದ್ದು. ಆದರೆ ಈ ಪಕ್ಷ ಗಳಿಗೆ ನಿಗದಿತ ಚಿಹ್ನೆ ಎಂಬುದು ಇರು ವುದಿಲ್ಲ. ಚುನಾವಣಾ ಆಯೋಗ ಪಟ್ಟಿ ಮಾಡಿರುವ ಚಿಹ್ನೆಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. 

58 ಪಕ್ಷಗಳು ಮಧ್ಯಪ್ರದೇಶ, ರಾಜ ಸ್ಥಾನ, ತೆಲಂಗಾಣ, ಮಿಜೋರಾಂ ಮತ್ತು ಛತ್ತೀಸ್‌ಗಡದಲ್ಲಿ ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ನೋಂದ ಣಿ ಯಾಗಿ ದ್ದವು. ಸದ್ಯ, ಚುನಾವಣಾ ಆಯೋಗವು ಈ ಪೈಕಿ ಏಳು ಪಕ್ಷಗಳನ್ನು ರಾಷ್ಟ್ರೀಯ ಪಕ್ಷಗಳು ಹಾಗೂ 59 ಪಕ್ಷ ಗಳನ್ನು ರಾಜ್ಯ ಮಟ್ಟದ ಪಕ್ಷಗಳು ಎಂದು ಗುರುತಿಸಿದೆ. ರಾಜ್ಯ ಅಥವಾ ರಾಷ್ಟ್ರ ಮಟ್ಟ ದಲ್ಲಿ ಗುರುತಿಸಲ್ಪಟ್ಟ ರಾಜಕೀಯ ಪಕ್ಷ ವಾಗಲು, ನಿರ್ದಿಷ್ಟ ಸಂಖ್ಯೆಯ ಕ್ಷೇತ್ರಗಳಲ್ಲಿ ಗೆಲ್ಲಬೇಕು ಅಥವಾ ನಿರ್ದಿಷ್ಟ ಶೇಕಡಾ ವಾರು ಮತಗಳನ್ನು ಗಳಿಸಿರಬೇಕು. 

ಚುನಾವಣೆ ಸಮೀಪಿಸುತ್ತಿದ್ದಂತೆಯೇ ಹುಟ್ಟಿಕೊಳ್ಳುವ ಪಕ್ಷಗಳ ಮೂಲಕ ಹಣ ಕಾಸು ವಹಿವಾಟು ನಡೆಯುವ ಆತಂಕ ಇರುವ ಹಿನ್ನೆಲೆಯಲ್ಲಿ 2016ರಲ್ಲೇ ಕೇಂದ್ರೀಯ ನೇರ ತೆರಿಗೆ ಮಂಡಳಿಗೆ ಸೂಚನೆ ನೀಡಿ, 255 ಪಕ್ಷಗಳ ಹಣಕಾಸು ವಹಿವಾಟನ್ನು ಪರಿಶೀಲಿಸುವಂತೆ ಸೂಚಿ ಸಿತ್ತು. ಚುನಾವಣಾ ಆಯೋಗ ಪಕ್ಷವನ್ನು ನೋಂದಣಿ ಮಾಡಿಸಿಕೊಳ್ಳಬಹುದು. ಆದರೆ ಪಟ್ಟಿಯಿಂದ ತೆಗೆದುಹಾಕುವುದಕ್ಕೆ ಸಂಬಂಧಿಸಿದಂತೆ ಯಾವುದೇ ನಿಯಮಾ ವಳಿ ಇರಲಿಲ್ಲ. ಆದರೆ 2016ರಲ್ಲಿ ವಿಶೇಷ ಅಧಿಕಾರ ಬಳಸಿ ನಿಷ್ಕ್ರಿಯ ಪಕ್ಷಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ.

ಹಿಂದೆ ಸರಿದ ರಾಜ್‌ಠಾಕ್ರೆ 
ರಾಜ್‌ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್‌ಎಸ್‌) ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಎಮ್ಮೆನ್ನೆಸ್‌ ನಾಯಕ ಶಿರಿಶ್‌ ಸಾವಂತ್‌ ಈ ಬಗ್ಗೆ ಭಾನುವಾರ ಮಾಹಿತಿ ನೀಡಿದ್ದಾರೆ. ಮಾ.19ರಂದು ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ ಬೃಹತ್‌ ರ್ಯಾಲಿ ಆಯೋಜಿಸಿದ್ದು, ಅಲ್ಲಿ ರಾಜ್‌ ಠಾಕ್ರೆ ಅವರು ಎನ್‌ಸಿಪಿಗೆ ಬೆಂಬಲ ಘೋಷಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next