Advertisement
ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಹೊಸನಗರ ತಾಲೂಕು ನಿರೀಕ್ಷಿತ ಅಭಿವೃದ್ಧಿಯಾಗದೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತ ಬಂದಿದೆ. ಈ ನಡುವೆ ತಾಲೂಕಿನ ರೈತರ ಜೀವನಾಡಿಯಾಗಿರುವ ಎಪಿಎಂಸಿಯನ್ನು ವಿಲೀನಗೊಳಿಸುವ ಪ್ರಕ್ರಿಯೆಗೆ ಮುಂದಾಗಿರುವ ಸರ್ಕಾರದ ಕ್ರಮ ಖಂಡನೀಯ ಎಂದರು. ಈಗಾಗಲೇ ವಿಲೀನ ಪ್ರಕ್ರಿಯೆಗೆ ನೋಟಿಫಿಕೇಶನ್ ಜಾರಿ ಮಾಡಿ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿದೆ. ಇದಕ್ಕೆ ಆಕ್ಷೇಪಣೆ ಸಲ್ಲಿಸುವ ಜೊತೆಗೆ ನ್ಯಾಯಾಲಯದ ಮೆಟ್ಟಲೇರುವ ಕೆಲಸ ಮಾಡಬೇಕಿದೆ. 3 ಕೋಟಿಯಷ್ಟು ಆದಾಯವಿರುವ ಮತ್ತು ಉತ್ತಮ ಪ್ರಗತಿಯಲ್ಲಿರುವ ಎಪಿಎಂಸಿಯನ್ನು ವಿಲೀನಗೊಳಿಸುವ ಸರ್ಕಾರದ ಔಚಿತ್ಯವೇನು ಎಂದು ಪ್ರಶ್ನಿಸಿದರು.
Related Articles
Advertisement
ಬೇಳೂರು ವಾಗ್ಧಾಳಿ
ಕ್ಷೇತ್ರದ ಅಭಿವೃದ್ಧಿ ಬಗ್ಗೆ ಶಾಸಕರಿಗೆ ಕಾಳಜಿ ಇಲ್ಲ. ಹಿಂದೆ ಸಾಗರದ ಎಪಿಎಂಸಿಯನ್ನು ರೈತರ ಹಿತಕ್ಕೋಸ್ಕರ ವಿಭಜಿಸಿ ಹೊಸನಗರ ಮತ್ತು ಸೊರಬಕ್ಕೆ ಪ್ರತ್ಯೇಕವಾಗಿ ನೀಡಲಾಗಿತ್ತು. ಅದಕ್ಕೆ ಪೂರಕವಾಗಿ ಸಾಕಷ್ಟು ಅಭಿವೃದ್ಧಿ ಕೂಡ ಕಂಡಿದೆ. ಆದರೆ ಏಕಾಏಕಿ ಎಪಿಎಂಸಿಯನ್ನು ಸಾಗರಕ್ಕೆ ತೆಗೆದುಕೊಂಡು ಹೋಗುವ ಹಿಂದೆ ಯಾವ ಹುನ್ನಾರ ಇದೆ ಎಂದು ಪ್ರಶ್ನಿಸಿದರು.
ಎಪಿಎಂಸಿಗೆ ಚುನಾವಣೆ ನಡೆಸಬೇಕು. ಚುನಾವಣೆ ನಡೆಸಲು ಧೈರ್ಯವಿಲ್ಲ. ನಾಮಿನೇಟ್ ಸದಸ್ಯರನ್ನು ನೇಮಿಸಿ, ಬೇಕಾದವರನ್ನು ಅಧ್ಯಕ್ಷರಾಗಿ ಮಾಡುವುದು. ಅಧ್ಯಕ್ಷ ಸ್ಥಾನ ನೀಡುವ ಭರವಸೆಯನ್ನು ವ್ಯಕ್ತಿಯೊಬ್ಬರಿಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿಲೀನಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು. ಸೊರಬ ಎಪಿಎಂಸಿಯನ್ನು ಕುಮಾರ್ ಬಂಗಾರಪ್ಪ ಗುಟುರು ಹಾಕಿದ ನಂತರ ಮುಟ್ಟಲಿಲ್ಲ. ಸಂಸದರಿಗೆ ತಾಕತ್ತು ಇದ್ದರೆ ಶಿಕಾರಿಪುರ ಎಪಿಎಂಸಿಯನ್ನು ಶಿವಮೊಗ್ಗಕ್ಕೆ ಸೇರಿಸಲಿ ಎಂದು ಸವಾಲು ಹಾಕಿದರು.
ಎಪಿಎಂಸಿಯಿಂದ ಮೆರವಣಿಗೆ
ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಎಪಿಎಂಸಿಯಿಂದ ಮಾವಿಕೊಪ್ಪ ಸರ್ಕಲ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಸರ್ಕಾರ ಮತ್ತು ಶಾಸಕರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ಹೆದ್ದಾರಿ ಮೇಲೆ ಪ್ರತಿಭಟನೆ ನಡೆಸಿ, ರಸ್ತೆ ತಡೆ ಮಾಡಿ ಅಲ್ಲೇ ಸಭೆ ನಡೆಸಲಾಯಿತು. ರಸ್ತೆಯನ್ನು ಪೂರ್ತಿಯಾಗಿ ಆಕ್ರಮಿಸಿಕೊಂಡ ಕಾರಣ ವಾಹನಗಳನ್ನು ಕಳುಹಿಸಲು ಪೊಲೀಸರು ಹರಸಾಹಸಪಡುವಂತಾಯಿತು.
ಬೈಪಾಸ್‌ಗೂ ವಿರೋಧ
ಹೊಸನಗರ ಪಟ್ಟಣ ಚಿಕ್ಕದಾಗಿದ್ದು ಬೈಪಾಸ್ ನಿರ್ಮಾಣವಾದರೆ ಹೊಸನಗರ ಅಭಿವೃದ್ಧಿ ಶೂನ್ಯವಾಗುತ್ತದೆ ಮತ್ತು ಸಣ್ಣಪುಟ್ಟ ವ್ಯಾಪಾರಸ್ಥರು ಬೀದಿಗೆ ಬರಬೇಕಾಗುತ್ತದೆ. ಯಾವುದೇ ಬೈಪಾಸ್ ನಿರ್ಮಿಸದೇ ಹಾಲಿ ಇರುವ ಪ್ರಮುಖ ರಸ್ತೆ ಮೇಲೆ ಹೆದ್ದಾರಿ ನಿರ್ಮಾಣಕ್ಕೆ ಪ್ರತಿಭಟನೆಯಲ್ಲಿ ಆಗ್ರಹಿಸಲಾಯಿತು.
ಸ್ಥಳಕ್ಕೆ ಬಂದು ಮನವಿ ಸ್ವೀಕಾರ
ಪ್ರತಿಭಟನೆಯಲ್ಲಿ ಕಾಗೋಡು ತಿಮ್ಮಪ್ಪ ಭಾಗವಹಿಸಿದ್ದ ಹಿನ್ನೆಲೆಯಲ್ಲಿ ತಹಶೀಲ್ದಾರ್ ವಿ.ಎಸ್. ರಾಜೀವ್ ಪ್ರತಿಭಟನೆ ನಡೆಯುತ್ತಿದ್ದ ಮಾವಿನಕೊಪ್ಪ ಸರ್ಕಲ್‌ಗೆ ಆಗಮಿಸಿ ಮನವಿ ಸ್ವೀಕರಿಸಿ, ಸರ್ಕಾರಕ್ಕೆ ತಲುಪಿಸುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಾ| ರಾಜನಂದಿನಿ, ಕಲಗೋಡು ರತ್ನಾಕರ್, ಎಪಿಎಂಸಿ ಅಧ್ಯಕ್ಷ ದುಮ್ಮ ಅಶೋಕಗೌಡ, ಮಾಜಿ ಅಧ್ಯಕ್ಷರಾದ ಬಂಡಿ ರಾಮಚಂದ್ರ, ಈಶ್ವರಪ್ಪ ಗೌಡ, ಈಶ್ವರಪ್ಪ, ಬ್ಲಾಕ್ ಅಧ್ಯಕ್ಷ ಬಿ.ಜಿ. ನಾಗರಾಜ್, ಪ್ರಮುಖರಾದ ಬಿ.ಜಿ. ಚಂದ್ರಮೌಳಿ ಕೋಡೂರು, ಏರಗಿ ಉಮೇಶ್, ಕರುಣಾಕರ ಶೆಟ್ಟಿ, ಅಶ್ವಿನಕುಮಾರ್, ಚಿದಂಬರ್ ಮಾರುತಿಪುರ, ಸದಾಶಿವ ಶ್ರೇಷ್ಠಿ, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ರೈತ ಪ್ರಮುಖರು ಇದ್ದರು.