ಜಬಲ್ ಪುರ್(ಮಧ್ಯಪ್ರದೇಶ) : ಕರ್ನಾಟಕದಲ್ಲಿ ಗಮನಾರ್ಹ ಗೆಲುವಿನ ನಂತರ ಕಾಂಗ್ರೆಸ್ ಮಧ್ಯಪ್ರದೇಶ ಚುನಾವಣೆಗೆ ಸರ್ವ ಸಿದ್ಧತೆಗಳನ್ನು ನಡೆಸುತ್ತಿದ್ದು,ಬಿಜೆಪಿ ಕಸಿದುಕೊಂಡಿದ್ದ ಅಧಿಕಾರವನ್ನು ಮರಳಿ ಪಡೆಯಲು ಪಕ್ಷವು ಎಲ್ಲಾ ತಂತ್ರಗಳನ್ನು ಹಣೆಯುತ್ತಿರುವಂತೆ ತೋರುತ್ತಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರ ಮಧ್ಯಪ್ರದೇಶಕ್ಕೆ ಭೇಟಿ ನೀಡಿ ನರ್ಮದಾ ಪೂಜೆ ನೆರವೇರಿಸಿದ್ದಾರೆ. ಪ್ರಿಯಾಂಕಾ ಅವರೊಂದಿಗೆ ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಕಮಲ್ ನಾಥ್ ಕೂಡ ಇದ್ದರು.
ಜಬಲ್ ಪುರ್ ನಲ್ಲಿ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕಾ” ಕಾಂಗ್ರೆಸ್ ಪಕ್ಷವು ಛತ್ತೀಸ್ ಗಢ ಮತ್ತು ಹಿಮಾಚಲ ಪ್ರದೇಶದಲ್ಲಿ ಕೊಟ್ಟ ಆಶ್ವಾಸನೆಗಳನ್ನು ಈಡೇರಿಸಿದೆ.ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಸ್ಥಿತಿಯನ್ನು ಒಮ್ಮೆ ನೋಡಿ. ನಿಮಗೆ ಆಗ ಅರ್ಥವಾಗುತ್ತದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಐದು ಖಾತರಿ ಯೋಜನೆ ಜಾರಿಗೆ ತರುವುದಾಗಿ ಪ್ರಿಯಾಂಕಾ ಗಾಂಧಿ ಭರವಸೆ ನೀಡಿದರು. ರಾಜ್ಯದ ಪ್ರತಿ ಮಹಿಳೆಗೆ ಪ್ರತಿ ತಿಂಗಳು 1500 ರೂಪಾಯಿ, ಗ್ಯಾಸ್ ಸಿಲಿಂಡರ್ ಬೆಲೆಯನ್ನು 1000 ರೂ.ನಿಂದ 500 ರೂ.ಗೆ ಇಳಿಸಲಾಗುವುದು, ರಾಜ್ಯದಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತರುವುದು, ರೈತರ ಸಾಲ ಮನ್ನಾ, 100 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲಿದ್ದು, 200 ಯೂನಿಟ್ ಬಳಕೆಯೊಳಗೆ ವೆಚ್ಚವನ್ನು ಅರ್ಧಕ್ಕೆ ಇಳಿಸಲಾಗುವುದು ಎಂದು ಭರವಸೆ ನೀಡಿದರು.
‘ಸತ್ಯ’ದಲ್ಲಿ ಅವರನ್ನು ಸೋಲಿಸಬಲ್ಲೆ
ಸಭೆಯನ್ನುದ್ದೇಶಿಸಿ ಮಾತನಾಡಿದ ಕಮಲ್ ನಾಥ್ ‘ಘೋಷಣೆ’ಗಳ ಮೂಲಕ ನಾನು ಶಿವರಾಜ್ ಸಿಂಗ್ ಜಿಯನ್ನು ಸೋಲಿಸಲು ಸಾಧ್ಯವಿಲ್ಲ, ಆದರೆ ‘ಸತ್ಯ’ದಲ್ಲಿ ಅವರನ್ನು ಸೋಲಿಸಬಲ್ಲೆ.ಇದಕ್ಕಾಗಿ ನಾನು ಶಿವರಾಜ್ ಸಿಂಗ್ ಅವರಿಗೆ ಸವಾಲು ಹಾಕುತ್ತೇನೆ.ನಾನು ಶಿವರಾಜ್ ಸಿಂಗ್ ಜೀ ಅವರನ್ನು ಕೇಳುತ್ತೇನೆ, ನೀವು ಮಧ್ಯಪ್ರದೇಶದ ಜನರಿಗೆ ಏನು ನೀಡಿದ್ದೀರಿ? ಹಣದುಬ್ಬರ, ನಿರುದ್ಯೋಗ, ನೇಮಕಾತಿ ಹಗರಣ ಮತ್ತು ಮಾಫಿಯಾ ಆಡಳಿತವನ್ನು ರಾಜ್ಯಕ್ಕೆ ನೀಡಿದ್ದೀರಿ ಎಂದು ಕಿಡಿ ಕಾರಿದರು.