Advertisement

ಕಾಂಗ್ರೆಸ್‌ ಸಹಿ ಅಭಿಯಾನ

11:20 AM Jun 02, 2019 | Team Udayavani |

ಪಡುಬಿದ್ರಿ: ರಾಹುಲ್ ಗಾಂಧಿ ಅವರು ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ಹಿಂಪಡೆದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಬೇಕು ಎಂದು ಒತ್ತಾಯಿಸಿ ಬೃಹತ್‌ ಗಾತ್ರದ ಬ್ಯಾನರ್‌ನಲ್ಲಿ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಮುಖಂಡರು ಸಹಿ ಹಾಕಿ, ಮನವಿಯನ್ನು ದೆಹಲಿಗೆ ರವಾನಿಸಲಾಗುವುದೆಂದು ಕಾಂಗ್ರೆಸ್‌ ಹಿರಿಯ ಮುಖಂಡ ಆಸ್ಕರ್‌ ಫೆರ್ನಾಂಡಿಸ್‌ ತಿಳಿಸಿದರು.

Advertisement

ಗುರುವಾರ ಎರ್ಮಾಳಿನ ರಾಜೀವ್‌ ಗಾಂಧಿ ಎಕಾಡೆಮಿ ಆಫ್‌ ಪೊಲಿಟಿಕಲ್ ಎಜ್ಯುಕೇಶನ್‌ ಸೆಂಟರ್‌ನಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಅವರು ಸಭೆಯಲ್ಲಿ ಮಾತನಾಡಿದರು.

ನಾವು ಜನರಿಗೆ ಇನ್ನಷ್ಟು ಹತ್ತಿರವಾಗಬೇಕು. ಲೋಕಸಭೆಯಲ್ಲಿ ನಾವು ಹೀನಾಯ ಸೋಲನ್ನು ಕಂಡಿದ್ದೇವೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸೋಲು ಗೆಲುವು ಸಾಮಾನ್ಯವಾಗಿದೆ. ಸೋಲೇ ಗೆಲುವಿನ ಮೆಟ್ಟಿಲಾಗಬೇಕು. ಈ ನಿಟ್ಟಿನಲ್ಲಿ ಪಕ್ಷದ ನಾಯಕರು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಇನ್ನಷ್ಟು ಸದೃಢಗೊಳಿಸಬೇಕಾಗಿದೆ. ಒಂದು ಕಾಲದಲ್ಲಿ ಹೋರಾಟದ ಮೂಲಕ ಶಕ್ತಿಯುತವಾಗಿದ್ದ ಕಾಂಗ್ರೆಸ್‌ ಪಕ್ಷವು ಇಂದು ಹೋರಾಟದ ಮನೋಭಾವ ಇಲ್ಲದೆ ಕುಂಠಿತಗೊಂಡಿದೆ ಎಂದು ಆಸ್ಕರ್‌ ಫೆರ್ನಾಂಡಿಂಸ್‌ ಖೇದ ವ್ಯಕ್ತಪಡಿಸಿದರು.

ಎಐಸಿಸಿ ಉಡುಪಿ ಜಿಲ್ಲಾ ಉಸ್ತುವಾರಿ ವಿಷ್ಣುವರ್ಧನ್‌ ಮಾತನಾಡಿ, ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ. ಜಿಲ್ಲೆಯ 6 ಬೂತ್‌ಗಳಲ್ಲಿ 100 ಹಾಗೂ 20 ಬೂತ್‌ಗಳಲ್ಲಿ 300ರ ಗಡಿ ದಾಟಲಿಲ್ಲ. ಇದು ಬಹಳ ಬೇಸರ ಸಂಗತಿ. ಕಾರ್ಯಕರ್ತರೊಂದಿಗೆ ನಾಯಕರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಜಿಲ್ಲೆಯಲ್ಲಿ ಯೂತ್‌ ಕಾಂಗ್ರೆಸ್‌ ಹಾಗೂ ಎನ್‌ಎಸ್‌ಯುಐ ಅಷ್ಟೊಂದು ಬಲಿಷ್ಠವಾಗಲಿಲ್ಲ. ಈ ಬಗ್ಗೆ ಜಿಲ್ಲಾ ಸಮಿತಿ ಗಮನ ನೀಡಬೇಕಾಗಿದೆ ಎಂದು ನುಡಿದರು.

ಜಿಲ್ಲಾಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಬ್ಲೋಸಮ್‌ ಫೆರ್ನಾಂಡಿಸ್‌, ಮುಖಂಡರಾದ ವಿನಯಕುಮಾರ್‌ ಸೊರಕೆ, ಗೋಪಾಲ ಭಂಡಾರಿ, ಯು. ಆರ್‌. ಸಭಾಪತಿ, ಎಂ. ಎ. ಗಫೂರ್‌, ನವೀನ್‌ ಡಿ’ಸೋಜ, ನವೀನ್‌ಚಂದ್ರ ಜೆ. ಶೆಟ್ಟಿ, ಗೀತಾ ವಾಗ್ಲೆ, ರೋಶನ್‌, ಮುರಳೀ ಶೆಟ್ಟಿ, ಸರಳಾ ಕಾಂಚನ್‌ ಉಪಸ್ಥಿತರಿದ್ದರು.

Advertisement

ಸಭೆಯಲ್ಲಿ ಚುನಾವಣೆಯ ಸೋಲಿನ ಬಗ್ಗೆ ಹಾಗೂ ಮುಂಬರುವ ದಿನಗಳಲ್ಲಿ ಪಕ್ಷವನ್ನು ಬಲಿಷ್ಠಗೊಳಿಸುವ ಬಗ್ಗೆ ಚರ್ಚಿಸಲಾಯಿತು. ದಿನವಿಡೀ ನಡೆದ ಸಭೆಯಲ್ಲಿ ಬ್ಲಾಕ್‌ ಸಮಿತಿ, ಜಿಲ್ಲಾ ಸಮಿತಿಯ ವಿವಿಧ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಹಾಜರಿದ್ದರು.

ರಾಹುಲ್ ಗಾಂಧಿಯವರು ರಾಷ್ಟಾಧ್ಯಕ್ಷ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ಹಿಂಪಡೆದು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಬೇಕು ಎಂದು ಒತ್ತಾಯಿಸಿ ಬೃಹತ್‌ ಗಾತ್ರದ ಬ್ಯಾನರ್‌ನಲ್ಲಿ ಜಿಲ್ಲಾ ಸಮಿತಿಯ ವತಿಯಿಂದ ಮುಖಂಡರು ಸಹಿ ಹಾಕಿ, ಮನವಿಯನ್ನು ಅವರಿಗೆ ಕಳುಹಿಸಿಕೊಡಲು ತೀರ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next