ಮೈಸೂರು: ಕೇಂದ್ರ ಸರ್ಕಾರ ಇತ್ತೀಚೆಗೆ ಮಂಡಿಸಿದ ನೂತನ ಕೃಷಿ ನೀತಿಗಳಿಂದ ರೈತರಿಗೆ ಅನುಕೂಲವಾಗಲಿದೆ. ಇದರಿಂದ ರೈತರ ಆದಾಯ ದ್ವಿಗುಣವಾಗಲಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ. ವಿ. ಸದಾನಂದಗೌಡ ಹೇಳಿದರು.
ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಬೆಳೆ ನನ್ನ ಹಕ್ಕು ಎಂಬಂತೆ ರೈತರು ತಮ್ಮ ಉತ್ಪನ್ನಗಳನ್ನು ದೇಶದ ಯಾವುದೇ ಮೂಲೆಯಲ್ಲಿ, ಯಾರಿಗೆ ಬೇಕಾದರೂ ತಮಗಿಷ್ಟ ಬಂದ ದರದಲ್ಲಿ ಮಾರಬಹುದು. ಇದು ಒಂದು ದೇಶ – ಒಂದು ಕೃಷಿ ಮಾರುಕಟ್ಟೆ ಎಂಬ ಪರಿಕಲ್ಪನೆಗೆ ಪೂರಕವಾಗಿದೆ ಎಂದರು.
ಆದರೆ ಪ್ರತಿಪಕ್ಷ ಕಾಂಗ್ರೆಸ್ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ. ಇನ್ನು ಮುಂದಾದರೂ ಕಾಂಗ್ರೆಸ್ ನವರು ಬಾಯಿ ಮುಚ್ಚಿಕೊಂಡು ಮಾಸ್ಕ್ ಹಾಕಿಕೊಳ್ಳಲಿ. ರೈತರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲಿ ಎಂದರು.
ಇದನ್ನೂ ಓದಿ:ರಾಜ್ಯದಲ್ಲಿ ರಸಗೊಬ್ಬರ ಕೊರತೆಯಿಲ್ಲ: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ
ಕಾಂಗ್ರೆಸ್‌ನವರೇ ನಿಮಗೆ ಏನೂ ಕೆಲಸ ಇಲ್ಲ ಅಂದ್ರೆ ಮನೆಯಲ್ಲಿರಿ. ಮಾಸ್ಕ್ ಹಾಕೊಳ್ಳಿ, ಸ್ಯಾನಿಟೈಸ್ ಮಾಡಿಕೊಳ್ಳಿ. ರೈತರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಕೋವಿಡ್ ನಂತೆ ನಿಮ್ಮಚಾಳಿಯೂ ರೈತರಿಗೆ ಹಬ್ಬುವುದು ಬೇಡ. ನೂತನ ಎಪಿಎಂಸಿ ಕಾಯ್ದೆಯಿಂದ ದೇಶದ ರೈತರಿಗೆ ಉಪಯೋಗ ಆಗಲಿದೆ. ಆದರೆ ನೀವು ಇದನ್ನೂ ರಾಜಕೀಯಗೊಳಿಸಬೇಡಿ ಎಂದು ಡಿ ವಿ ಸದಾನಂದ ಗೌಡರು ಹೇಳಿದರು.