ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಮೈತ್ರಿ ಒಪ್ಪಂದದಂತೆ ಮೂರನೇ ಒಂದು ಭಾಗ ಬಿಟ್ಟು ಕೊಡಬೇಕೆಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದ್ದಾರೆ. ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯ ನಂತರ ಮಾತನಾಡಿದ ಅವರು, ನಾವು 12 ಸೀಟು ಬೇಕೇ, ಬೇಕು ಎಂದು ಹಠ ಹಿಡಿಯುವುದಿಲ್ಲ. ಆದರೆ, 10 ಸೀಟಾದರೂ ಕಾಂಗ್ರೆಸ್‌ನವರು ಬಿಟ್ಟು ಕೊಡಬೇಕು ಎಂದು ಹೇಳಿದರು.
ವಿಜಯಪುರ, ಬೀದರ್, ರಾಯಚೂರು, ಯಾದಗಿರಿ, ಹಾಸನ, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಮೈಸೂರು ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಶಕ್ತಿಯಿದೆ. ಆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕು ಎಂಬುದು ಪಕ್ಷದ ಶಾಸಕರು, ನಾಯಕರು, ಕಾರ್ಯಕರ್ತರ ಅಭಿಪ್ರಾಯ. ಈ ಬಗ್ಗೆ ಅಹಮದ್ ಪಟೇಲ್ ಜತೆ ಚರ್ಚಿಸಲಾಗುವುದು. ನಿಗಮ-ಮಂಡಳಿ ನೇಮಕ ವಿಚಾರದಲ್ಲಿ ಮಾಲಿನ್ಯ
ನಿಯಂತ್ರಣ ಮಂಡಳಿ, ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಗಳ ನೇಮಕಕ್ಕೆ ತಕರಾರಿದೆ. ಅದನ್ನು ಹೊರತುಪಡಿಸಿ ಬೇರೆ ಯಾವುದೇ ಸಮಸ್ಯೆಯಿಲ್ಲ. ಕಾಂಗ್ರೆಸ್‌ನವರು ಯಾರನ್ನು ಬೇಕಾದರೂ ನೇಮಿಸಬಹುದೆಂದು ತಿಳಿಸಿದರು.
ಮೀಸಲು -ಎಚ್‌ಡಿಡಿ ಬೆಂಬಲ: ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೂ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಶೇ.10 ಮೀಸಲಾತಿ ಕಲ್ಪಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಜೆಡಿಎಸ್ ಸ್ವಾಗತಿಸಲಿದೆ. ಇದಕ್ಕೆ ನಮ್ಮ ಬೆಂಬಲವೂ ಇದೆ ಎಂದು ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡರು ಟ್ವೀಟ್ ಮಾಡಿದ್ದಾರೆ. ಆರ್ಥಿಕವಾಗಿ ದುರ್ಬಲವಾಗಿರುವ ಮೇಲ್ವರ್ಗದವರಿಗೂ ಸರ್ಕಾರಿ, ಉದ್ಯೋಗ, ಶಿಕ್ಷಣದಲ್ಲಿ ಶೇ.10 ಮೀಸಲಾತಿ ಕಲ್ಪಿಸುವ ನಿರ್ಧಾರ ಐತಿಹಾಸಿಕವಾದುದು. ಯಾರದೇ ಮೀಸಲಾತಿ ಕಸಿದುಕೊಳ್ಳದೆ ಎಲ್ಲ ವರ್ಗದ ಬಡವರಿಗೆ ಮೀಸಲು ಕಲ್ಪಿಸುವುದು ಉತ್ತಮ ನಿರ್ಧಾರ ಎಂದು ತಿಳಿಸಿದ್ದಾರೆ.