Advertisement

Corruption,ಗಲಭೆಯಲ್ಲಿ ಕಾಂಗ್ರೆಸ್ ರಾಜಸ್ಥಾನವನ್ನು ಅಗ್ರಸ್ಥಾನಕ್ಕೇರಿಸಿದೆ: ಪ್ರಧಾನಿ ಮೋದಿ

04:53 PM Nov 18, 2023 | Team Udayavani |

ಜೈಪುರ: ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ವಾಗ್ದಾಳಿ ನಡೆಸಿದರು.

Advertisement

ಭರತ್‌ಪುರದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು,ಕಾಂಗ್ರೆಸ್ ಪಕ್ಷವು ತನ್ನ ತುಷ್ಟೀಕರಣ ನೀತಿಯೊಂದಿಗೆ ಸಮಾಜ ವಿರೋಧಿ ಚಟುವಟಿಕೆಗಳನ್ನು ಸಡಿಲಗೊಳಿಸುವ ಮೂಲಕ ರಾಜ್ಯವನ್ನು ಅಪರಾಧ ಮತ್ತು ಗಲಭೆಗಳಲ್ಲಿ ಅಗ್ರಸ್ಥಾನಕ್ಕೇರಿಸಿದೆ ಎಂದು ಆರೋಪಿಸಿದ್ದಾರೆ.

ಈ ಬಾರಿ ಇಲ್ಲಿಯ ಜನರು ಜಾದೂಗಾರರಿಗೆ ಮತ ನೀಡದಿರಲು ನಿರ್ಧರಿಸಿದ್ದಾರೆ ಮತ್ತು ಚುನಾವಣೆಯ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಕಣ್ಮರೆಯಾಗಲಿದೆ ಎಂದು ಹೇಳಿದರು.

ಡಿ.3 ರಂದು ಕಾಂಗ್ರೆಸ್ ‘ಛೂ ಮಂತರ್ ಆಗಲಿದೆ. ರಾಜಕೀಯಕ್ಕೆ ಪ್ರವೇಶಿಸುವ ಮೊದಲು, ವೃತ್ತಿಪರ ಜಾದೂಗಾರನ ಮಗನಾದ ಗೆಹ್ಲೋಟ್ ಅವರು ಮ್ಯಾಜಿಕ್ ತಂತ್ರಗಳನ್ನು ಪ್ರದರ್ಶಿಸುವ ಮೂಲಕ ದೇಶಾದ್ಯಂತ ಪ್ರವಾಸ ಮಾಡಿದ್ದರು ಎಂದು ಮೋದಿ ಲೇವಡಿ ಮಾಡಿದ್ದಾರೆ.

“ಒಂದೆಡೆ ಭಾರತ ವಿಶ್ವದಲ್ಲಿಯೇ ನಾಯಕನಾಗುತ್ತಿದೆ. ಮತ್ತೊಂದೆಡೆ ಕಳೆದ ಐದು ವರ್ಷಗಳಲ್ಲಿ ರಾಜಸ್ಥಾನದಲ್ಲಿ ಏನಾಯಿತು ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಕಾಂಗ್ರೆಸ್ ರಾಜಸ್ಥಾನವನ್ನು ಭ್ರಷ್ಟಾಚಾರ, ಗಲಭೆಗಳು ಮತ್ತು ಅಪರಾಧಗಳಲ್ಲಿ ನಾಯಕನನ್ನಾಗಿ ಮಾಡಿದೆ. ಅದಕ್ಕಾಗಿಯೇ ರಾಜಸ್ಥಾನ ಮಾಂತ್ರಿಕ ಜೀ, ನೀವು ಬಹುಮತ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

Advertisement

ಕಾಂಗ್ರೆಸ್ ಪಕ್ಷವು ತುಷ್ಟೀಕರಣ ನೀತಿಯಿಂದ ಅಪರಾಧಿಗಳಿಗೆ ಮುಕ್ತ ಹಸ್ತ ನೀಡುತ್ತಿದೆ. ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಮಹಿಳೆಯರು ಮತ್ತು ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ ಎಂದು ಮೋದಿ ಆರೋಪಿಸಿದರು.

“ಕಾಂಗ್ರೆಸ್ ಎಲ್ಲೇ ಅಧಿಕಾರಕ್ಕೆ ಬಂದರೂ ಭಯೋತ್ಪಾದಕರು, ಕ್ರಿಮಿನಲ್‌ಗಳು ಮತ್ತು ಗಲಭೆಕೋರರು ಓಡಾಡುತ್ತಿರುತ್ತಾರೆ. ಕಾಂಗ್ರೆಸ್‌ಗೆ ಓಲೈಕೆಯೇ ಸರ್ವಸ್ವ. ನಿಮ್ಮ ಪ್ರಾಣವನ್ನು ಪಣಕ್ಕಿಟ್ಟರೂ ಸರಿ ಕಾಂಗ್ರೆಸ್ ಓಲೈಕೆಗಾಗಿ ಯಾವುದೇ ಹಂತಕ್ಕೆ ಬೇಕಾದರೂ ಹೋಗಬಹುದು” ಎಂದು ಹೇಳಿದರು.

ಹೋಳಿ, ರಾಮ ನವಮಿ ಅಥವಾ ಹನುಮ ಜಯಂತಿ ಇರಲಿ, ನೀವು ಯಾವುದೇ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಸಾಧ್ಯವಿಲ್ಲ, ಗಲಭೆಗಳು, ಕಲ್ಲು ತೂರಾಟ, ಕರ್ಫ್ಯೂ ಇದೆಲ್ಲವೂ ರಾಜಸ್ಥಾನದಲ್ಲಿ ಮುಂದುವರೆದಿದೆ ಎಂದರು.

ರಾಜಸ್ಥಾನದ ಮಹಿಳೆಯರ ಆತ್ಮವಿಶ್ವಾಸವನ್ನು ಕಾಂಗ್ರೆಸ್ ಛಿದ್ರಗೊಳಿಸಿದೆ. ನೆರೆಯ ಹರಿಯಾಣ, ಮಧ್ಯಪ್ರದೇಶ ಮತ್ತು ಗುಜರಾತ್‌ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಸುಮಾರು 97 ರೂಪಾಯಿ ಗಳಾಗಿದ್ದರೆ, ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವು ಲೀಟರ್ ಪೆಟ್ರೋಲ್‌ಗೆ 109 ರೂಪಾಯಿಗಳನ್ನು ವಿಧಿಸುತ್ತದೆ ಎಂದು ಅವರು ಹೇಳಿದರು. “ಪ್ರತಿ ಲೀಟರ್ ಮೇಲೆ ನಿಮ್ಮ ಜೇಬಿನಿಂದ 12 ರೂಪಾಯಿ ತೆಗೆದು ಅವರ ನಾಯಕರ ಬೊಕ್ಕಸಕ್ಕೆ ಹಾಕುತ್ತಾರೆ. ಬಿಜೆಪಿ ಸರ್ಕಾರ ರಚನೆಯಾದ ತಕ್ಷಣ ಕಾಂಗ್ರೆಸ್‌ನ ಈ ಆಟವೂ ಕೊನೆಗೊಳ್ಳುತ್ತದೆ” ಎಂದು ಅವರು ಹೇಳಿದರು.

ನ. 25 ರಂದು ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಡಿ. 3 ರಂದು ಮತ ಎಣಿಕೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next