Advertisement

ಅಭ್ಯರ್ಥಿಗಳ ಆಯ್ಕೆಗೆ ಕೈನಲ್ಲಿ ಕಸರತ್ತು

10:31 AM Oct 10, 2018 | |

ಬೆಂಗಳೂರು: ಉಪ ಚುನಾವಣೆ ಸಂಬಂಧ ಕಾಂಗ್ರೆಸ್‌ ನಾಯಕರು ಮಂಗಳವಾರ ಇಡೀ ದಿನ ಸರಣಿ ಸಭೆ ನಡೆಸಿದರು. ರಾಮನಗರ ವಿಧಾನಸಭೆ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟು ಜಮಖಂಡಿ ವಿಧಾನಸಭೆ, ಬಳ್ಳಾರಿ ಹಾಗೂ ಶಿವಮೊಗ್ಗ
ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಲಾಯಿತು. 

Advertisement

ಜಮಖಂಡಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಯಾವುದೇ ಗೊಂದಲವಿಲ್ಲದೆ ನಡೆದಿದ್ದು, ಆನಂದ್‌ ನ್ಯಾಮಗೌಡ ಹೆಸರು ಅಂತಿಮಗೊಂಡಿದೆ. ಶಿವಮೊಗ್ಗ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗೆ ಗೊಂದಲ ಮುಂದುವರೆದಿದೆ. ಶಿವಮೊಗ್ಗ ಕ್ಷೇತ್ರಕ್ಕೆ ಪ್ರಮುಖವಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ, ಜಿಲ್ಲಾ ಕಾಂಗ್ರೆಸ್‌ ಮುಖಂಡ ಸುಂದರೇಶ್‌ ಹಾಗೂ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಅವರ ಹೆಸರು ಕೇಳಿ ಬಂದಿದ್ದು, ಕಾಗೋಡು ತಿಮ್ಮಪ್ಪ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕಿದ್ದಾರೆ. 

ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್‌ ಲಿಂಗಾಯತ  ಸಮುದಾಯಕ್ಕೆ ಸೇರಿರುವುದರಿಂದ ಅವರಿಗೆ ಟಿಕೆಟ್‌ ನೀಡಿದರೂ ಪ್ರಬಲ ಪೈಪೋಟಿ ನೀಡಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ, ಸಂಗಮೇಶ್‌ ಕೂಡ ತಾವು ಹಾಲಿ ಶಾಸಕರಾಗಿರುವುದರಿಂದ ಲೋಕಸಭೆ ಚುನಾವಣೆಗೆ
ಸ್ಪರ್ಧಿಸಲು ಒಪ್ಪಿಲ್ಲ. ಹೀಗಾಗಿ ಕಿಮ್ಮನೆ ರತ್ನಾಕರ, ಸುಂದರೇಶ್‌ ಅಥವಾ ಬೇಳೂರು ಗೋಪಾಲಕೃಷ್ಣ ಕಾಂಗ್ರೆಸ್‌ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.

ಬಳ್ಳಾರಿ ಅಭ್ಯರ್ಥಿ ಆಯ್ಕೆ ಪಕ್ಷದ ನಾಯಕರಿಗೆ ಕಗ್ಗಂಟಾಗಿ ಪರಿಣಮಿಸಿದ್ದು ಇದೇ ವಿಚಾರವಾಗಿ ಬಳ್ಳಾರಿ ಶಾಸಕರಲ್ಲಿ ಎರಡು ಬಣ ಆಗಿದೆ. ಮಂಗಳವಾರದ ಸಭೆಗೆ ಕಂಪ್ಲಿ ಶಾಸಕ ಗಣೇಶ್‌, ಪಿ.ಟಿ.ಪರಮೇಶ್ವರ್‌ ನಾಯಕ್‌, ಆನಂದ್‌ ಸಿಂಗ್‌ ಗೈರು ಹಾಜರಾಗಿದ್ದರು. ಪ್ರಮುಖವಾಗಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಅವರ ಸಹೋದರ ವೆಂಕಟೇಶ್‌ ಪ್ರಸಾದ್‌, ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ನೆಟ್ಟಕಲ್ಲಪ್ಪ ಹಾಗೂ ಜಿಲ್ಲಾ ಕಾಂಗ್ರೆಸ್‌ ಮುಖಂಡ ರಾಮ್‌ ಪ್ರಸಾದ್‌ ಅವರ ಹೆಸರುಗಳು ಕೇಳಿ ಬಂದಿವೆ.

ಎಸ್ಟಿ ಸಮುದಾಯದ ಮುಖಂಡರೆಂದು ಹೇಳಿಕೊಂಡಿರುವ ರಮೇಶ್‌ ಜಾರಕಿಹೊಳಿ, ಬಳ್ಳಾರಿ ಚುನಾವಣೆಯ ಜವಾಬ್ದಾರಿ ವಹಿಸಿಕೊಂಡು ಪಕ್ಷದ
ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲಿ ಎಂಬ ಅಭಿಪ್ರಾಯವನ್ನು ಕೆ.ಸಿ.ಕೊಂಡಯ್ಯ ಸೇರಿದಂತೆ ಜಿಲ್ಲಾ ಮುಖಂಡರು ವ್ಯಕ್ತಪಡಿಸಿದರು. ಆದರೆ, ರಾಜ್ಯ
ನಾಯಕರು ಯಾವುದೇ ಪ್ರತಿಕ್ರಿಯೆ ನೀಡದೆ ಮೌನ ವಹಿಸಿದರು ಎಂದು ತಿಳಿದು ಬಂದಿದೆ.

Advertisement

ಅಭ್ಯರ್ಥಿಗಳ ಆಯ್ಕೆ ಕುರಿತು ಒಮ್ಮತಕ್ಕೆ ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೆ
ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಯ ಜವಾಬ್ದಾರಿ ವಹಿಸಲಾಗಿದೆ. ಬಳಿಕ, ಅವರು ತಮ್ಮ ನಿವಾಸದಲ್ಲಿ ಬಳ್ಳಾರಿ ಟಿಕೆಟ್‌ ಆಕಾಂಕ್ಷಿಗಳೊಂದಿಗೆ ಪತ್ಯೇಕ ಸಭೆ ನಡೆಸಿದರೂ ಒಮ್ಮತ ಮೂಡಲಿಲ್ಲ. ಹೀಗಾಗಿ, ಬುಧವಾರ ಮತ್ತೂಂದು ಸುತ್ತಿನ ಸಭೆ ನಡೆಯಲಿದೆ.

ಈ ಮಧ್ಯೆ, ಚುನಾವಣೆಯಲ್ಲಿ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಳ್ಳುವ ಕುರಿತು ಎಲ್ಲ ಕ್ಷೇತ್ರಗಳ ಸ್ಥಳೀಯ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಆದರೆ, ಪಕ್ಷದ ಭವಿಷ್ಯದ ಹಿತ ದೃಷ್ಠಿ ಹಾಗೂ ರಾಷ್ಟ್ರ ರಾಜಕಾರಣವನ್ನು ಗಮನದಲ್ಲಿಟ್ಟುಕೊಂಡು ಈ ಚುನಾವಣೆ ಎದುರಿಸಬೇಕೆಂದು ನಾಯಕರು ಐದೂ
ಕ್ಷೇತ್ರಗಳ ಸ್ಥಳೀಯ ಮುಖಂಡರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಹೇಳಲಾಗಿದೆ. 

ಕ್ಷೇತ್ರ ಬಿಟ್ಟುಕೊಡಲು ವಿರೋಧ: ರಾಮನಗರ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಬಗ್ಗೆ ಸ್ಥಳೀಯ ನಾಯಕರು
ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ, ರಾಷ್ಟ್ರಮಟ್ಟದ ಲೆಕ್ಕಾಚಾರದಲ್ಲಿ ಹೊಂದಿಕೊಂಡು ಹೋಗುವಂತೆ ಸಿದ್ದರಾಮಯ್ಯ ಎಲ್ಲರಿಗೂ
ಸಮಾಧಾನ ಪಡಿಸಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಚುನಾವಣೆ ಸಿದ್ಧತೆಗಳ ಕುರಿತು ರಾಜ್ಯ ನಾಯಕರ ಸಮ್ಮುಖದಲ್ಲಿ ಚರ್ಚೆ ನಡೆಸಿದ್ದೇವೆ. ಅ. 16ರಂದು ರಾಜ್ಯ ನಾಯಕರು ಹಾಗೂ  ರ್ಯಕರ್ತರೊಂದಿಗೆ
ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಕೆ ಮಾಡಲಿದ್ದೇನೆ. 

● ಆನಂದ ನ್ಯಾಮಗೌಡ, ಜಮಖಂಡಿ ಕಾಂಗ್ರೆಸ್‌ ಅಭ್ಯರ್ಥಿ 

ನಮ್ಮ ಜಿಲ್ಲೆಯ ಪಕ್ಷದ ಕಾರ್ಯಕರ್ತರ ಭಾವನೆಗಳನ್ನು ವಿವರವಾಗಿ ಪಕ್ಷದ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ನಮ್ಮ ಮನವಿಗೆ ವಿರುದ್ಧವಾಗಿ ವರಿಷ್ಠರು ನಿರ್ಧಾರ ಕೈಗೊಂಡರೆ ನಂತರ ಮಾತನಾಡುತ್ತೇನೆ.
● ಸಿ.ಎಂ.ಲಿಂಗಪ್ಪ, ವಿಧಾನ ಪರಿಷತ್‌ ಸದಸ್ಯ

ಬಳ್ಳಾರಿಯಲ್ಲಿ ಆರು ಜನ ಕಾಂಗ್ರೆಸ್‌ ಶಾಸಕರಿದ್ದಾರೆ. ಭಿನ್ನಮತ ಇದ್ದಿದ್ದರೆ ಅಷ್ಟೊಂದು ಸ್ಥಾನ ಗೆಲ್ಲಲು ಹೇಗೆ ಸಾಧ್ಯ?. ಲೋಕಸಭೆ ಅಭ್ಯರ್ಥಿ ಆಯ್ಕೆಯಲ್ಲಿಯೂ ಭಿನ್ನಮತ ಇಲ್ಲ. ಕೆಲವು ಶಾಸಕರು ಸಭೆಗೆ ಬಂದಿಲ್ಲ. ಹೀಗಾಗಿ, ನಾಳೆ ಮತ್ತೂಂದು ಸುತ್ತಿನ ಸಭೆ ಕರೆದು, ಎಲ್ಲರ ಅಭಿಪ್ರಾಯ ಪಡೆದು, ಅಂತಿಮ ತೀರ್ಮಾನ ಮಾಡಲಾಗುತ್ತದೆ.
● ಅಲ್ಲಂ ವೀರಭದ್ರಪ್ಪ, ವಿಧಾನ ಪರಿಷತ್‌ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next