ಹೊಸದಿಲ್ಲಿ : ಮುಂಬರುವ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕೆಲವೊಂದು ಸ್ಥಾನಗಳನ್ನು ಕಳೆದುಕೊಳ್ಳಬಹುದಾದರೂ ಒಟ್ಟು ಪ್ರಕ್ರಿಯೆಯಲ್ಲಿ ಕಾಂಗ್ರೆಸ್‌ಗೆ ಅನುಕೂಲವೇ ಆಗುವ ಸಾಧ್ಯತೆಗಳಿವೆ.
ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಂಖ್ಯೆ ಕಡಿಮೆಯಾಗಲಿದೆ; ಹಾಗಿದ್ದರೂ ಅದು ಮಿತ್ರಪಕ್ಷಗಳನ್ನು ಒಗ್ಗೂಡಿಸಿ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟವನ್ನು ಹಣಿಯುವ ಕಾರ್ಯತಂತ್ರ ರೂಪಿಸುತ್ತಿದೆ.
ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ಪಶ್ಚಿಮ ಬಂಗಾಲದಲ್ಲಿ ತೃಣಮೂಲ ಪಕ್ಷದ ಬೆಂಬಲವಿದೆ; ಜಾರ್ಖಂಡ್‌ನಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾದ ಬೆಂಬಲವಿದೆ. ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿ ಅವರ ರಾಜ್ಯಸಭಾ ಉಮೇದ್ವಾರಿಕೆಯನ್ನು ಬೆಂಬಲಿಸುವುದಾಗಿ ಈಗಾಗಲೇ ಹೇಳಿದ್ದಾರೆ.
ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ಎರಡರಲ್ಲಿ ಕನಿಷ್ಠ ಒಂದು ಸ್ಥಾನದ ನಿರೀಕ್ಷೆಯಲ್ಲಿದೆ. ರಾಜ್ಯಸಭಾ ಚುನಾವಣೆಯ ಮಟ್ಟಿಗೆ ಉತ್ತರ ಪ್ರದೇಶದಲ್ಲಿ ಪರಸ್ಪರ ಬದ್ಧ ವೈರಿಗಳಾಗಿರುವ ಎಸ್‌ಪಿ ಮತ್ತು ಬಿಎಸ್‌ಪಿ, ಕಾಂಗ್ರೆಸ್‌ಗೆ ಬೆಂಬಲ ನೀಡಲಿವೆ. ಇದರ ಪರಿಣಾಮವಾಗಿ 2019ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಸೋಲಿಸಲು ಕಾಂಗ್ರೆಸ್‌ಗೆ ಉತ್ತರ ಪ್ರದೇಶದಲ್ಲಿ ವಿಶೇಷ ಬಲ ಸಿಗಲಿದೆ ಎಂಬ ನಿರೀಕ್ಷೆ ಇದೆ.
ರಾಜ್ಯಸಭಾ ಚುನಾವಣೆಯ ಮರುದಿನ ಮಾರ್ಚ್ 13ರಂದು ಕಾಂಗ್ರೆಸ್ ನಾಯಕಿ ಸೋನಿಯ ಗಾಂಧಿ ಅವರು ಭೋಜನ ಕೂಟವೊಂದನ್ನು ಏರ್ಪಡಿಸಿದ್ದು ಅದಕ್ಕೆ 14 ವಿರೋಧಿ ಪಕ್ಷಗಳನ್ನು ಆಹ್ವಾನಿಸಿದ್ದಾರೆ.