Advertisement
ಅದಕ್ಕೆ ಪೂರವಾಗಿ ಶುಕ್ರವಾರ ಸಂಜೆ ಬಿಜೆಪಿಯ ಪ್ರಭಾವಿ ನಾಯಕರೊಬ್ಬರ ನಿವಾಸದಲ್ಲಿ ಪಕ್ಷೇತರರೊಂದಿಗೆ ಸಭೆ ನಡೆದಿದೆ. ಪಕ್ಷೇತರರನ್ನು ವಿದೇಶ ಪ್ರವಾಸಕ್ಕೆ ಕಳುಹಿಸಿ ಚುನಾವಣೆಗೆ ಗೈರಾಗಿಸುವ ಮೂಲಕ ಬಹುಮತ ಪಡೆಯುವುದು ಬಿಜೆಪಿ ಯೋಜನೆಯಾಗಿತ್ತು.
Related Articles
Advertisement
ಪಕ್ಷೇತರ ಪೈಕಿ ಒಬ್ಬರು ಈಗಾಗಲೇ ಬಿಜೆಪಿಗೆ ನೀಡಿದ್ದ ಬೆಂಬಲ ವಾಪಸ್ ಪಡೆದು ಕಾಂಗ್ರೆಸ್ ಕಡೆಗೆ ಬಂದಿದ್ದು, ಏಳುಮಲೈ ಹಾಗೂ ಮುಜಾಹಿದ್ ಬಿಜೆಪಿ ಬೆಂಬಲ ನೀಡುವುದಿಲ್ಲ ಎನ್ನಲಾಗಿದೆ. ಜತೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಕೇವಲ 2 ಮತಗಳ ಕೊರತೆಯಿದ್ದು, ಇಬ್ಬರು ಪಕ್ಷೇತರರ ಬೆಂಬಲ ಪಡೆದರೆ ಸುಲಭವಾಗಿ ಅಧಿಕಾರ ಹಿಡಿಯಬಹುದಾಗಿದೆ. ಹೀಗಾಗಿ ಬಿಜೆಪಿಗೆ ಪಾಲಿಕೆಯಲ್ಲಿ ಅಧಿಕಾರ ಹಿಡಿಯುವುದು ಸುಲಭವಾಗಿಲ್ಲ.
ಪಕ್ಷೇತರರ ಜತೆ ಕಾಂಗ್ರೆಸ್ ನಾಯಕರ ಸಭೆ: ಬಿಬಿಎಂಪಿಯಲ್ಲಿ ಅಧಿಕಾರ ಮುಂದುವರಿಸಲು ಪಕ್ಷೇತರ ಸದಸ್ಯರ ಬೆಂಬಲ ಅಗತ್ಯವಿರುವುದರಿಂದ ಬಿಜೆಪಿ ನಾಯಕರು ಪಕ್ಷೇತರ ಸದಸ್ಯರ ಜತೆ ಸಭೆ ನಡೆಸಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕರೂ ಶನಿವಾರ ಪಕ್ಷೇತರ ಕಾರ್ಪೊರೇಟರ್‌ಗಳೊಂದಿಗೆ ಸಭೆ ನಡೆಸಿ ಕಾಂಗ್ರೆಸ್‌ಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.
ಮಾಜಿ ಸಚಿವ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವರಾದ ಕೆ.ಜೆ.ಜಾರ್ಜ್, ಕೃಷ್ಣ ಬೈರೇಗೌಡ ಅವರು ಪಕ್ಷೇತರ ಸದಸ್ಯರ ಜತೆ ಸುಮಾರು ಒಂದು ಗಂಟೆಗಳ ಕಾಲ ಸಭೆ ನಡೆಸಿ ಮನವೊಲಿಸಿದ್ದಾರೆ.
ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸುವುದರ ಜತೆಗೆ ಬಿಬಿಎಂಪಿಯಲ್ಲೂ ಅಧಿಕಾರ ಹಿಡಿಯಲು ಬಿಜೆಪಿ ಕಸರತ್ತು ನಡೆಸುತ್ತಿದ್ದು, ಆ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಶುಕ್ರವಾರ ತಡ ರಾತ್ರಿ ಪಕ್ಷೇತರ ಸದಸ್ಯರೊಂದಿಗೆ ಸಭೆ ನಡೆಸಿ ಬಿಜೆಪಿಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿದ್ದರು.
ಈ ಬೆಳವಣಿಗೆಯಿಂದ ಎಚ್ಚೆತ್ತ ಕಾಂಗ್ರೆಸ್ ನಾಯಕರು ಶನಿವಾರ ಪಕ್ಷೇತರ ಸದಸ್ಯರೊಂದಿಗೆ ಮಾತುಕತೆ ನಡೆಸಿದ್ದಾರೆ. ಎಂಟು ಜನರಲ್ಲಿ ಇಬ್ಬರು ಪಕ್ಷೇತರ ಸದಸ್ಯರು ಹಾಜರಾಗಿರಲಿಲ್ಲ ಎಂದು ತಿಳಿದು ಬಂದಿದೆ. ಏಳುಮಲೈ, ಆನಂದ, ಚಂದ್ರಪ್ಪ ರೆಡ್ಡಿ, ರಮೇಶ್, ಗಾಯತ್ರಿ ಹಾಗೂ ಲಕ್ಷ್ಮೀ ನಾರಾಯಣ ಸಭೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದ್ದು, ಮಮತಾ ಶರವಣ ಹಾಗೂ ಮುಜಾಯಿದ್ ಪಾಷಾ ಗೈರು ಹಾಜರಾಗಿದ್ದರು.
ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಪರಮೇಶ್ವರ್ ಅವರನ್ನು ಈ ಸಭೆಯಿಂದ ದೂರ ಇಡುವ ಮೂಲಕ ನಗರ ಶಾಸಕರು ತಾವು ಬಯಸಿದವರನ್ನು ಬಿಬಿಎಂಪಿ ಮೇಯರ್ ಮಾಡಲು ಕಸರತ್ತು ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಕೆ.ಜೆ. ಜಾರ್ಜ್, ಪಕ್ಷೇತರ ಶಾಸಕರು ಬಿಜೆಪಿ ಸೇರುತ್ತಾರೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಮೂರು ವರ್ಷ ಅವರು ನಮ್ಮೊಂದಿಗೆ ಇದ್ದಾರೆ. ಮುಂದೆಯೂ ನಮ್ಮ ಜೊತೆಯೇ ಇರುತ್ತಾರೆ ಎಂದು ಹೇಳಿದರು.
* ವೆಂ.ಸುನೀಲ್‌ಕುಮಾರ್