Advertisement

ಜನರ ಕಡೆ ಕಾಂಗ್ರೆಸ್‌ ನಡಿಗೆ; ನವ ಸಂಕಲ್ಪಗಳೊಂದಿಗೆ ಜನಸಂಪರ್ಕಕ್ಕೆ ಕಾಂಗ್ರೆಸ್‌ ಸಿದ್ಧ

02:21 AM May 16, 2022 | Team Udayavani |

ಉದಯಪುರ: ಮುಂದಿನ ಸುತ್ತಿನ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗೆ ಪಕ್ಷವನ್ನು ಸನ್ನದ್ಧಗೊಳಿಸಲು ಹೊರಟಿರುವ ಕಾಂಗ್ರೆಸ್‌, ಅದಕ್ಕೂ ಮುನ್ನ “ಜನರ ಬಳಿಗೆ ಹೋಗಲು’ ತೀರ್ಮಾನಿಸಿದೆ. ರಾಜಸ್ಥಾನದ ಉದಯಪುರದಲ್ಲಿ 3 ದಿನಗಳ ಕಾಲ ಜರಗಿದ ಕಾಂಗ್ರೆಸ್‌ನ “ನವ ಸಂಕಲ್ಪ ಶಿಬಿರ’ದಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

Advertisement

ಸಂಘಟನಾತ್ಮಕ ಸುಧಾರಣೆಯ ಜತೆಗೆ ಯಾವುದೇ ಶಾರ್ಟ್‌ಕಟ್‌ ಇಲ್ಲದೆ ಜನರೊಂದಿಗಿನ ಸಂಪರ್ಕವನ್ನು ಮರುಸ್ಥಾಪಿಸಿದರೆ ಮಾತ್ರ ಪಕ್ಷದ ಪುನಃಶ್ಚೇತನ ಸಾಧ್ಯ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಈ ನಿಟ್ಟಿನಲ್ಲಿ ಅಕ್ಟೋಬರ್‌ 2ರ ಗಾಂಧಿ ಜಯಂತಿ ದಿನದಂದೇ ಕಾಶ್ಮೀರದಿಂದ ಕನ್ಯಾ ಕುಮಾರಿಯವರೆಗೆ “ಭಾರತ್‌ ಜೋಡೋ’ ಯಾತ್ರೆಯನ್ನು ಆರಂಭಿಸುವುದಾಗಿ ಕಾಂಗ್ರೆಸ್‌ ಘೋಷಿಸಿದೆ.

ಈ ಯಾತ್ರೆಯ ಮೂಲಕ ಪ್ರತಿ ಜಿಲ್ಲೆಯ 75 ಕಿ.ಮೀ. ಸಂಚರಿಸಿ ಜನರೊಂದಿಗೆ ಸಂಪರ್ಕ ಸಾಧಿಸೋಣ ಹಾಗೂ ನಾವೆಲ್ಲರೂ ಇದರಲ್ಲಿ ಭಾಗಿಯಾಗೋಣ ಎಂದು 400ಕ್ಕೂ ಅಧಿಕವಿದ್ದ ಪ್ರತಿನಿಧಿಗಳಿಗೆ ಅಧ್ಯಕ್ಷೆ ಸೋನಿಯಾ ಗಾಂಧಿ ಕರೆ ನೀಡಿದ್ದಾರೆ. ಪ್ರಸ್ತುತ ಸನ್ನಿವೇಶದಲ್ಲಿ ಒತ್ತಡಕ್ಕೆ ಸಿಲುಕಿರುವ ಸಾಮಾಜಿಕ ಸಾಮರಸ್ಯದ ಬಂಧವನ್ನು ಬಲಿಷ್ಠಗೊಳಿಸುವುದು, ಸತತ ದಾಳಿಗೆ ಒಳಗಾಗುತ್ತಿರುವ ನಮ್ಮ ಸಂವಿಧಾನದ ಮೂಲ ಆಶಯಗಳನ್ನು ಸಂರಕ್ಷಿಸುವುದು, ನಮ್ಮ ದೇಶದ ಕೋಟ್ಯಂತರ ಜನರ ದೈನಂದಿನ ಕಳವಳ ಹಾಗೂ ಸಂಕಷ್ಟಗಳನ್ನು ತಿಳಿಸುವುದೇ ಈ ಯಾತ್ರೆಯ ಉದ್ದೇಶವಾಗಿದೆ ಎಂದೂ ಹೇಳಿದ್ದಾರೆ.

ಜತೆಗೆ, ಈ ಹಿಂದೆಯೇ ಆರಂಭಿಸಲಾದ ಜಿಲ್ಲಾ ಮಟ್ಟದ ಜನ ಜಾಗರಣ ಅಭಿಯಾನದ 2ನೇ ಹಂತವನ್ನು ಜೂನ್‌ 15ರಿಂದ ಪುನರಾರಂಭಿಸುವುದಾಗಿಯೂ ಸೋನಿಯಾ ಘೋಷಿಸಿದ್ದಾರೆ. ನಿರುದ್ಯೋಗ ಸಮಸ್ಯೆಯಂಥ ಆರ್ಥಿಕ ವಿಚಾರಗಳು, ಜೀವನೋಪಾಯಗಳನ್ನೇ ನಾಶ ಮಾಡುತ್ತಿರುವ ಬೆಲೆಯೇರಿಕೆ ಸಮಸ್ಯೆಗಳನ್ನೇ ಕೇಂದ್ರೀಕರಿಸಿ ಕೊಂಡು ಈ ಅಭಿಯಾನ ನಡೆಸಲಾಗುತ್ತಿದೆ.

ಸುಧಾರಣೆಗೆ ಸಮ್ಮತಿ
ಚಿಂತನ ಶಿಬಿರದಲ್ಲಿ ಚರ್ಚೆಯಾಗಿರುವ ವ್ಯಾಪಕ ಸಂಘಟನಾತ್ಮಕ ಸುಧಾರಣ ಕ್ರಮಗಳಿಗೆ ಒಕ್ಕೊರಲ ಸಮ್ಮತಿ ಸಿಕ್ಕಿದೆ. 50 ವರ್ಷದೊಳಗಿನವರಿಗೆ ಹೆಚ್ಚಿನ ಆದ್ಯತೆ, ಒಂದು ಕುಟುಂಬ-ಒಂದು ಟಿಕೆಟ್‌, ಒಂದು ಕುಟುಂಬ-ಒಂದು ಹುದ್ದೆ ನಿಯಮ ಜಾರಿಗೊಳಿಸಲೂ ಒಪ್ಪಿಗೆ ನೀಡಲಾಗಿದೆ. ಸಾರ್ವಜನಿಕ ಒಳನೋಟ, ಚುನಾವಣ ನಿರ್ವಹಣೆ ಮತ್ತು ರಾಷ್ಟ್ರೀಯ ತರಬೇತಿ ಎಂಬ 3 ಹೊಸ ವಿಭಾಗಗಳನ್ನು ಆರಂಭಿಸುವ ಕುರಿತೂ ನಿರ್ಣಯ ಕೈಗೊಳ್ಳಲಾಗಿದೆ. ಆದರೆ ಕಾಂಗ್ರೆಸ್‌ನ ಬಂಡಾಯ ನಾಯಕರ (ಜಿ23) ಪ್ರಮುಖ ಬೇಡಿಕೆಗಳಲ್ಲಿ ಒಂದಾದ ಸಂಸದೀಯ ಮಂಡಳಿ ರಚನೆ ಪ್ರಸ್ತಾವವನ್ನು ನಿರಾಕರಿಸಲಾಗಿದೆ. ಸಂಸದೀಯ ಮಂಡಳಿ ಬದಲಾಗಿ ಪ್ರತಿ ರಾಜ್ಯ ಮತ್ತು ಕೇಂದ್ರದಲ್ಲಿ “ರಾಜಕೀಯ ವ್ಯವಹಾರಗಳ ಸಮಿತಿ’ಯನ್ನು ರಚಿಸಲು ನಿರ್ಧರಿಸಲಾಗಿದೆ.

Advertisement

ಸಲಹಾ ಸಮಿತಿ
ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸದಸ್ಯರ ಪೈಕಿಯೇ ಕೆಲವರನ್ನು ಆಯ್ಕೆ ಮಾಡಿ ಸಲಹಾ ಸಮಿತಿ ರಚಿಸುವುದಾಗಿ ಸೋನಿಯಾ ಘೋಷಿಸಿದ್ದಾರೆ. ಈ ಸಮಿತಿಯು ನಿಯಮಿತವಾಗಿ ಸಭೆ ನಡೆಸಿ, ರಾಜಕೀಯ ವಿಚಾರಗಳ ಕುರಿತು ಚರ್ಚಿಸಬೇಕು. ಆದರೆ ಇದು “ಸಾಮೂಹಿಕ ನಿರ್ಧಾರ ಕೈಗೊಳ್ಳುವ ಸಮಿತಿ’ಯಾಗಿ ಕಾರ್ಯನಿರ್ವಹಿಸುವುದಿಲ್ಲ. ಬದಲಿಗೆ ಪಕ್ಷಕ್ಕೆ ಸಲಹೆಗಳನ್ನು ನೀಡಲಿದೆ. ಈ ಹಿರಿಯ ಸಹೋದ್ಯೋಗಿಗಳ ವ್ಯಾಪಕ ಅನುಭವವು ನಮಗೆ ನೆರವಾಗಲಿದೆ ಎಂದು ಸೋನಿಯಾ ಹೇಳಿದ್ದಾರೆ.

ಸುಧಾರಣೆಗಾಗಿ
ಕಾರ್ಯಪಡೆ: ಸೋನಿಯಾ
ಪಕ್ಷದ ಆಂತರಿಕ ಸುಧಾರಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಸಲುವಾಗಿ ಕಾರ್ಯಪಡೆಯೊಂದನ್ನು ರಚಿಸಲು ಪಕ್ಷ ನಿರ್ಧರಿಸಿದೆ. 2024ರ ಲೋಕಸಭೆ ಚುನಾ ವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಕ್ಷದ ಸಂಘ ಟನೆಯೊಳಗಿನ ಎಲ್ಲ ಅಂಶಗಳನ್ನೂ ಗಣನೆಗೆ ತೆಗೆದು ಕೊಂಡು ಈ ಟಾಸ್ಕ್ಫೋರ್ಸ್‌ ಆಂತರಿಕ ಸುಧಾ ರಣೆಗಳನ್ನು ಜಾರಿ ಮಾಡಬೇಕು. ಪಕ್ಷದ ಹುದ್ದೆಗಳಿಗೆ ನೇಮಕ ಸಂಬಂಧಿಸಿದ ನಿಯಮಗಳು, ಸಂವಹನ ಮತ್ತು ಪ್ರಚಾರ, ಜನಸಂಪರ್ಕ ಕಾರ್ಯಕ್ರಮ, ಹಣಕಾಸು ಮತ್ತು ಚುನಾವಣ ನಿರ್ವಹಣೆ ಸಹಿತ ಎಲ್ಲ ಅಂಶಗಳನ್ನೂ ಈ ಕಾರ್ಯಪಡೆ ನೋಡಿಕೊಳ್ಳಬೇಕು ಎಂದು ಸೋನಿಯಾ ಹೇಳಿದ್ದಾರೆ. 2-3 ದಿನಗಳಲ್ಲೇ ಟಾಸ್ಕ್ಫೋರ್ಸ್‌ ರಚನೆಯ ವಿವರಗಳನ್ನು ಘೋಷಿಸಲಾಗುವುದು ಎಂದೂ ಹೇಳಿದ್ದಾರೆ.

ಈಗಲೂ ಧ್ವನಿ ಎತ್ತದಿದ್ದರೆ
ಅಪಾಯ ಖಚಿತ: ಸಿದ್ದು
ಬೆಂಗಳೂರು: ದೇಶವು ಈಗ ಎದುರಿಸುತ್ತಿರುವ ಕೆಟ್ಟ ಆರ್ಥಿಕ ಸ್ಥಿತಿಯ ವಿರುದ್ಧ ಧ್ವನಿ ಎತ್ತದಿದ್ದರೆ ಮತ್ತೆಂದೂ ದೇಶ ಚೇತರಿಸಿಕೊಳ್ಳುವ ಸಾಧ್ಯತೆಗಳೇ ಇಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ. ಉದಯಪುರದ ಚಿಂತನ ಶಿಬಿರದಲ್ಲಿ ರವಿವಾರ ಮಾತನಾಡಿದ ಅವರು, ಆರ್ಥಿಕತೆ ದಿನದಿಂದ ದಿನಕ್ಕೆ ನಿರಾಶಾದಾಯಕ ಸ್ಥಿತಿಯತ್ತ ತಲುಪುತ್ತಿದೆ. ಜನರಿಗೆ ವಾಸ್ತವಾಂಶಗಳು ತಿಳಿಯಬಾರದೆಂದು ಅಂಕಿ ಅಂಶಗಳನ್ನು ತಿರುಚುವ ಕೆಟ್ಟ ಸಾಹಸಕ್ಕೆ ಸರಕಾರ ಮುಂದಾಗಿದೆ. ಯೋಜನಾ ಆಯೋಗವನ್ನು ರದ್ದು ಮಾಡಿ ನೀತಿ ಆಯೋಗ ರಚಿಸಲಾಯಿತು ಎಂದರು.

ಸಂಕಲ್ಪಗಳೇನು?
01 ಒಂದು ಕುಟುಂಬ, ಒಂದು ಟಿಕೆಟ್‌: ಒಂದು ಕುಟುಂಬಕ್ಕೆ ಒಂದೇ ಟಿಕೆಟ್‌ ನೀಡುವುದು. ಒಂದು ವೇಳೆ ಯಾವುದಾದರೂ ವ್ಯಕ್ತಿ 5 ವರ್ಷಗಳ ಕಾಲ ಪಕ್ಷಕ್ಕಾಗಿ ಉತ್ತಮ ಸೇವೆ ಸಲ್ಲಿಸಿದ್ದರೆ ಅಂಥವರಿಗೆ ಈ ನಿಯಮದಿಂದ ವಿನಾಯಿತಿ.
02ನಿಗದಿತ ಅವಧಿ: ಎಐಸಿಸಿ, ಜಿಲ್ಲಾ ಮತ್ತು ಬ್ಲಾಕ್‌ ಸಮಿತಿ, ವಿವಿಧ ವಿಭಾಗಗಳು ಮತ್ತು ಘಟಕಗಳ ಎಲ್ಲ ಪದಾಧಿಕಾರಿಗಳ ಅಧಿಕಾರಾ ವಧಿಯನ್ನೂ 5 ವರ್ಷ ಎಂದು ನಿಗದಿ ಮಾಡುವುದು.
03 ಐವತ್ತು ವರ್ಷದೊಳಗಿನವರಿಗೆ ಆದ್ಯತೆ: ಎಲ್ಲ ಸಮಿತಿಗಳ ಶೇ.50ರಷ್ಟು ಸದಸ್ಯರು 50 ವರ್ಷದೊಳಗಿನವರಾಗಿರಬೇಕು.
04 ಸಾರ್ವಜನಿಕ ಸಂಪರ್ಕ ಕಾರ್ಯಕ್ರಮ: ಜನರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಬಿಜೆಪಿಯನ್ನು ಎದುರಿ ಸಲು ಪಾದಯಾತ್ರೆ, ಜನತಾ ದರ್ಬಾರ್‌ನಂಥ ಕಾರ್ಯಕ್ರಮ ಆಯೋಜನೆ.
05 ಮೂರು ಹೊಸ ವಿಭಾಗ: ಸಾರ್ವಜನಿಕ ಒಳನೋಟ, ಚುನಾವಣ ನಿರ್ವಹಣೆ ಮತ್ತು ಕೇಡರ್‌ ತರಬೇತಿ ಎಂಬ 3 ವಿಭಾಗಗಳನ್ನು ರಚಿಸಿ, ಪಕ್ಷವನ್ನು ಚುನಾವಣೆಗೆ ಸನ್ನದ್ಧಗೊಳಿಸುವುದು.

ಸಂಪರ್ಕ ಪುನಃಸ್ಥಾಪನೆ ಅಗತ್ಯ
ದೇಶದ ಜನರೊಂದಿಗಿನ ಕಾಂಗ್ರೆಸ್‌ನ ಸಂಪರ್ಕ ಕಡಿತಗೊಂಡಿದ್ದು, ಅದನ್ನು ಪುನಃಸ್ಥಾಪನೆಗೊಳಿಸಬೇಕಾದ ಅಗತ್ಯವಿದೆ. ಅದೇ ಕಾರಣಕ್ಕಾಗಿ ಅಕ್ಟೋಬರ್‌ನಲ್ಲಿ ಯಾತ್ರೆ ನಡೆಸಲು ನಿರ್ಧರಿಸಿದ್ದೇವೆ. ನಮ್ಮದು ಸಿದ್ಧಾಂತ ಕ್ಕಾಗಿರುವ ಹೋರಾಟ. ನಾವು ಜನರ ಬಳಿ ಹೋಗಬೇಕು, ಅವರೊಂದಿಗೆ ಕುಳಿತು ಮಾತನಾಡಬೇಕು.
-ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next