Advertisement

ಗ್ರಾ.ಪಂ. ಚುನಾವಣೆ ಎದುರಿಸಲು ಕಾಂಗ್ರೆಸ್‌ ಸಜ್ಜು

04:49 PM Dec 06, 2020 | Suhan S |

ಶಿವಮೊಗ್ಗ: ಗ್ರಾ.ಪಂ. ಚುನಾವಣೆಗೆ ಜಿಲ್ಲಾ ಕಾಂಗ್ರೆಸ್‌ ಸಮಿತಿ ಸಜ್ಜಾಗಿದ್ದು,ಈಗಾಗಲೇ ಮೇಲ್ವಿಚಾರಣಾ ಸಮಿತಿಗಳನ್ನುನೇಮಿಸಲಾಗಿದೆ ಎಂದು ಅಧ್ಯಕ್ಷ ಎಚ್‌.ಎಸ್‌. ಸುಂದರೇಶ್‌ ಹೇಳಿದರು.

Advertisement

ಅವರು ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ,ಗ್ರಾ.ಪಂ. ಚುನಾವಣೆಯನ್ನು ಕಾಂಗ್ರೆಸ್‌ ಪ್ರತಿಷ್ಠೆಯಾಗಿ ಪರಿಗಣಿಸಿದೆ. ಕೇಂದ್ರ ಮತ್ತು ರಾಜ್ಯಸರ್ಕಾರಗಳ ವೈಫಲ್ಯ ಹಾಗೂ ಈ ಹಿಂದೆ ಕಾಂಗ್ರೆಸ್‌ ಸರಕಾರ ಜಾರಿಗೆ ತಂದ ಜನಪರ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆಮಾಡಿಕೊಡುವ ಮೂಲಕ ಚುನಾವಣೆ ಎದುರಿಸಲಾಗುವುದು ಎಂದರು.

ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ, ವಿಧಾನಸಭಾಕ್ಷೇತ್ರ ಮಟ್ಟದ ವೀಕ್ಷಕರ ಸಮಿತಿ, ಬ್ಲಾಕ್‌ ಮಟ್ಟದ ವೀಕ್ಷಕರ ಸಮಿತಿ, ತಾಲೂಕುಗಳ ಗ್ರಾಮಾಂತರ ಮಟ್ಟದ ಮೇಲ್ವಿಚಾರಣಾ ಸಮಿತಿಗಳನ್ನು ರಚಿಸಲಾಗಿದೆ.ಈ ಸಮಿತಿಗಳಲ್ಲಿ ಜಿಲ್ಲೆಯ ಎಲ್ಲ ಕಾಂಗ್ರೆಸ್‌ ಮುಖಂಡರು, ಮಾಜಿ ಸಚಿವರು, ಮಾಜಿ ಶಾಸಕರು, ಹಾಲಿ ಶಾಸಕರು, ಕೆಪಿಸಿಸಿ ಪದಾ ಧಿಕಾರಿಗಳು, ಜಿ.ಪಂ., ತಾ.ಪಂ. ಹಾಲಿ-ಮಾಜಿ ಸದಸ್ಯರು, ಮಹಾನಗರಪಾಲಿಕೆ ಸದಸ್ಯರು, ಕಾಂಗ್ರೆಸ್‌ನ ಹಿರಿಯ ನಾಯಕರು, ವಿಧಾನಪರಿಷತ್‌ ಸದಸ್ಯರು, ವಿವಿಧ ನಿಗಮ ಮಂಡಳಿಗಳ ಮಾಜಿ ಅಧ್ಯಕ್ಷರು ಎಲ್ಲರೂ ಇರಲಿದ್ದಾರೆ ಎಂದರು.

ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್‌, ಆರ್‌.ಪ್ರಸನ್ನಕುಮಾರ್‌, ಮಂಜುನಾಥ ಭಂಡಾರಿ, ಬೇಳೂರುಗೋಪಾಲಕೃಷ್ಣ, ಬಿ.ಕೆ. ಸಂಗಮೇಶ್ವರ್‌, ಕೆ.ಬಿ. ಪ್ರಸನ್ನಕುಮಾರ್‌ ಸೇರಿದಂತೆ ಹಲವು ಕಾಂಗ್ರೆಸ್‌ ಮುಖಂಡರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನವಿರೋಧಿ  ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಜನರಿಂದ ದೂರವಿದೆ. ಅ ಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿರುವ ಬಿಜೆಪಿ ಭೃಷ್ಟಾಚಾರದಕೂಪದಲ್ಲಿದೆ. ಭೃಷ್ಟಾಚಾರದ ಹಣದಿಂದ ಶಾಸಕರನ್ನೇ ಖರೀದಿ ಮಾಡಲಾಗುತ್ತಿದೆ. ಕಾರ್ಪೋರೇಟ್‌ ಕಂಪೆನಿಗಳಿಗೆ ಮಣೆ ಹಾಕುವ ಮೂಲಕ ಕಿಕ್‌ಬ್ಯಾಕ್‌ ಪಡೆದು ಆ ಹಣವನ್ನು ರಾಜಕಾರಣಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.

Advertisement

ಈ ಎಲ್ಲ ಅಂಶಗಳನ್ನು ಮತದಾರರಿಗೆ ಮನವರಿಕೆ ಮಾಡುವ ಮೂಲಕ ಕಾಂಗ್ರೆಸ್‌ ಚುನಾವಣೆ ಸೂತ್ರವನ್ನು ಹೆಣೆಯುತ್ತಿದೆ. ಈ ಬಾರಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳನ್ನು ಮತದಾರರು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಮುಖ್ಯಮಂತ್ರಿಗಳು ಶಿವಮೊಗ್ಗದ ಅಭಿವೃದ್ಧಿಯನ್ನು ಮರೆತಿದ್ದಾರೆ. ಎಲ್ಲವೂ ಕೇವಲ ಘೋಷಣೆಗಷ್ಟೇ ಸೀಮಿತವಾಗಿದೆ. ಸ್ಮಾರ್ಟ್‌ಸಿಟಿ ಹೆಸರಲ್ಲಿ ಹಣ ಲೂಟಿಯಾಗುತ್ತಿದೆ. ಸ್ಥಳೀಯ ಚುನಾವಣೆಗಳಲ್ಲೂ ಸಹ ಗೆದ್ದ ಅಭ್ಯರ್ಥಿಗಳನ್ನು ಖರೀದಿ ಮಾಡುವ ಹೀನಕೆಲಸಕ್ಕೆ ಬಿಜೆಪಿಯವರು ಮುಂದಾಗಿದ್ದಾರೆ. ಮುಖ್ಯಮಂತ್ರಿಗಳ ತವರು ಕ್ಷೇತ್ರ ಎಂದು ಹೇಳಲು ನಾಚಿಕೆಯಾಗುತ್ತದೆ ಎಂದು ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರಾಮೇಗೌಡ, ಸಿ.ಎಸ್‌. ಚಂದ್ರಭೂಪಾಲ್‌, ಬಾಬು, ಚಂದನ್‌, ಸೌಗಂಧಿಕ, ತಿಮ್ಮಣ್ಣ, ಪ್ರವೀಣ್‌, ಸುರೇಂದ್ರ ಸೇರಿದಂತೆ ಹಲವರಿದ್ದರು.

ಗಲಾಟೆಯ ಹಿಂದೆ ಬಿಜೆಪಿ ಹಸ್ತಕ್ಷೇಪ :

ಶಿವಮೊಗ್ಗದಲ್ಲಿ ನಡೆದಿರುವುದು ಕೋಮು ಗಲಭೆಯಲ್ಲ. ಸಣ್ಣದರಲ್ಲಿ ಚಿವುಟಿ ಹಾಕಬೇಕಾದ್ದನ್ನು ಬಿಜೆಪಿ ನಾಯಕರು ದೊಡ್ಡದಾಗಿ ಮಾಡಿದ್ದಾರೆ. ಇದರ ಹಿಂದೆ ರಾಜಕೀಯ ಹಸ್ತಕ್ಷೇಪವಿದೆ ಎಂದು ಸುಂದರೇಶ್‌ ಆರೋಪಿಸಿದರು. ಧೈರ್ಯ ತುಂಬುವ ಕೆಲಸ ಮಾಡಬೇಕಾದ ಬಿಜೆಪಿ ನಾಯಕರು ಗಾಯದ ಮೇಲೆ ಉಪ್ಪು ಸುರಿದಿದ್ದಾರೆ. ಶಿವಮೊಗ್ಗ ನಗರವನ್ನು ಮತ್ತಷ್ಟು ಭಯದ ಕೂಪಕ್ಕೆ ತಳ್ಳಿದ್ದಾರೆ. ಸಚಿವರು, ಸಂಸದರು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಮುಗ್ಧ ಜನರನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು. ಆದರೆ ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ. ಗಲಾಟೆಯನ್ನು ಹದ್ದುಬಸ್ತಿಗೆ ತಂದಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next