Advertisement

ಕಾಂಗ್ರೆಸ್‌ ರೇಸ್‌ ಕಮಲದ ಚೇಸ್‌: ಕೈ ಪಾಳಯದ ಸನಿಹಕ್ಕೆ ಬಿಜೆಪಿ

06:00 AM Jan 29, 2018 | |

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದ್ದು, ಬಹುತೇಕ ಜೆಡಿಎಸ್‌ ಕಿಂಗ್‌ಮೇಕರ್‌ ಸೀಟಿನಲ್ಲಿ ಕುಳಿತುಕೊಳ್ಳಲಿದೆ. ಆಡಳಿತಾರೂಢ ಕಾಂಗ್ರೆಸ್‌ ಮತ್ತು ಪ್ರತಿಪಕ್ಷ ಬಿಜೆಪಿ ಪ್ರಸ್ತುತ ಸಂದರ್ಭದಲ್ಲಿ ಸಮಬಲದ ಪ್ರದರ್ಶನ ತೋರಿಸುತ್ತಿವೆ.

Advertisement

ಇದು ಯಾವುದೇ ಖಾಸಗಿ ಸಂಸ್ಥೆ ಕೈಗೊಂಡ ಸಮೀಕ್ಷೆ ಅಲ್ಲ. ರಾಜ್ಯ ಸರ್ಕಾರ ತರಿಸಿಕೊಂಡ ಗುಪ್ತಚರ ಇಲಾಖೆಯ ಆಂತರಿಕ ವರದಿ. ಉನ್ನತ ಮೂಲಗಳ ಪ್ರಕಾರ, ಸದ್ಯದ ಮಟ್ಟಿಗೆ ಕಾಂಗ್ರೆಸ್‌ ಬಿಜೆಪಿಗಿಂತ ಒಂದು ಕೈ ಮೇಲಿದ್ದರೂ, ಯಾವುದೇ ಕ್ಷಣದಲ್ಲಿ ಬಿಜೆಪಿ ಪುಟಿದೇಳುವ ಸಾಧ್ಯತೆ ಇದೆ ಎನ್ನುತ್ತದೆ ಆ ವರದಿ.

ಗುಪ್ತಚರ ಮಾಹಿತಿ ಪ್ರಕಾರ, ತಕ್ಷಣ ಚುನಾವಣೆ ನಡೆದರೆ, ಕಾಂಗ್ರೆಸ್‌ 95 ರಿಂದ 100, ಬಿಜೆಪಿ 90ರಿಂದ 95 ಹಾಗೂ ಜೆಡಿಎಸ್‌ 30ರಿಂದ 40 ಸಂಖ್ಯೆಯ ಶಾಸಕರನ್ನು ಹೊಂದುವ ಸಾಧ್ಯತೆ ಇದೆ. ಜೆಡಿಎಸ್‌ ಅದರ ಅಧಿನಾಯಕ ದೇವೇಗೌಡರ ತಂತ್ರ ಮತ್ತು ಎಚ್‌.ಡಿ.ಕುಮಾರಸ್ವಾಮಿ ಅವರ ಜನಪ್ರಿಯತೆಯನ್ನು ಆಧರಿಸಿದೆ ಎಂದು ವರದಿ ತಿಳಿಸಿದೆ.

ಆರು ತಿಂಗಳ ಹಿಂದೆ ಜನರ ಒಟ್ಟಾರೆ ಅಭಿಪ್ರಾಯ ಬಿಜೆಪಿ ಪರವಾಗಿದ್ದು, ಕಾಂಗ್ರೆಸ್‌ ತನ್ನ ಆಂತರಿಕ ಸಮೀಕ್ಷೆಯ ಮಾಹಿತಿ ಕಂಡು ಆತಂಕಗೊಂಡಿತ್ತು. 40 ಸಂಖ್ಯೆ ದಾಟಲೂ ಕಷ್ಟ ಎಂಬ ಚಿತ್ರಣ ಈಗ ಬದಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಿರುಸಿನ ಸಾಧನಾ “ಯಾತ್ರೆ’ಗಳು; ಲಿಂಗಾಯತ ಧರ್ಮ,  ಕನ್ನಡ ಧ್ವಜ, ಮಹಾದಾಯಿ ವಿಚಾರಗಳಲ್ಲಿ  ಅವರು ತೋರಿಸಿದ ರಾಜಕೀಯ ಪಟ್ಟುಗಳು ಕಾಂಗ್ರೆಸ್‌ ಪಕ್ಷಕ್ಕೆ ಜೀವದಾನ ನೀಡಲಿವೆ ಎಂಬ ಬಗ್ಗೆ ವರದಿಯಲ್ಲಿ ತಿಳಿಸಲಾಗಿದೆ.

ಸಿದ್ದರಾಮಯ್ಯ ಅವರ ಜನಪ್ರಿಯ ಯೋಜನೆಗಳಾದ ಇಂದಿರಾ ಕ್ಯಾಂಟೀನ್‌, ಹಲವು “ಭಾಗ್ಯ’ ಯೋಜನೆಗಳು “ಕೈ’ ಹಿಡಿಯುವ ಅವಕಾಶಗಳನ್ನು ಹೆಚ್ಚಿಸಿದೆ. ಆದರೆ, ಇತ್ತ ಕಡೆ  ಬಿಜೆಪಿಯ ರಾಜ್ಯ ನಾಯಕರ ಆಂತರಿಕ ಕಚ್ಚಾಟ ನಡುವೆಯೂ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ಪಕ್ಷಕ್ಕೆ ವರದಾನವಾಗಿದೆ. ಜತೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರ “ಕರ್ನಾಟಕ ಪ್ರವೇಶ’ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿರುವುದು ಆ ಪಕ್ಷದ ಮುನ್ನಡೆಗೆ ಕಾರಣವಾಗಲಿದೆ ಎಂದು ವರದಿಯಲ್ಲಿ ಬೊಟ್ಟುಮಾಡಲಾಗಿದೆ.

Advertisement

ಮೋದಿಯವರ ಜನಪ್ರಿಯತೆಯ ಜೇನುಗೂಡಿಗೆ ಕೈಹಾಕದೆ ರಾಜ್ಯ ಬಿಜೆಪಿ ನಾಯಕರ ಅಂತಃಕಲಹವನ್ನೇ ಅಸ್ತ್ರವಾಗಿಸುವದರಲ್ಲಿ ಸಿದ್ದರಾಮಯ್ಯ ಸಿದ್ಧಹಸ್ತರಾಗಿರುವುದು ಕಾಂಗ್ರೆಸ್‌ಗೆ ಆಶಾದಾಯಕ ಬೆಳವಣಿಗೆ ಎನ್ನಲಾಗಿದೆ. ಇಂದಿರಾ ಕ್ಯಾಂಟೀನ್‌ ಮತ್ತು  ಸರ್ಕಾರದ ವಿವಿಧ “ಭಾಗ್ಯ’ಗಳು  ಒಂದುಮಟ್ಟಿಗೆ ಸಹಕಾರಿಯಾಗಿವೆ ಎಂದೂ ಉಲ್ಲೇಖೀಸಲಾಗಿದೆ.

ಒಂದು ತಿಂಗಳ ಹಿಂದೆ ಗುಪ್ತಚರ ವರದಿಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಬಹುತೇಕ ಬಹುಮತ ಎಂಬ ಬಗ್ಗೆ ಮಾಹಿತಿಯಿತ್ತು. ಆದರೆ, ಪ್ರಸ್ತುತ ವರದಿಯಲ್ಲಿ ಬಿಜೆಪಿ, ಕಾಂಗ್ರೆಸ್‌ ಸಮಬಲಕ್ಕೆ ಬಂದಿದೆ ಎಂದು ತಿಳಿಸಲಾಗಿದೆ. ಪರ್ಯಾಯ ಮಾರ್ಗಗಳನ್ನು ಹುಡುಕದೇ ಇದ್ದಲ್ಲಿ ಬಿಜೆಪಿ ಕಾಂಗ್ರೆಸ್‌ ಪಕ್ಷವನ್ನು ಹಿಂದಿಕ್ಕುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಲಾಗಿದೆ ಎಂದು ಗುಪ್ತಚರ ಇಲಾಖೆಯ ರಾಜಕೀಯ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯಾರಿಗೆ ಎಷ್ಟು ಸ್ಥಾನ?
ಕಾಂಗ್ರೆಸ್‌ – 95-100
ಬಿಜೆಪಿ – 90-95
ಜೆಡಿಎಸ್‌ – 30-40
ಒಟ್ಟು ಸ್ಥಾನ – 225

ಟರ್ನಿಂಗ್‌ ಪಾಯಿಂಟ್‌
ಸಿಎಂ ಸಿದ್ದರಾಮಯ್ಯರ ಬಿರುಸಿನ ಸಾಧನಾ “ಯಾತ್ರೆ’ಗಳು, ಲಿಂಗಾಯತ ಧರ್ಮ,  ಕನ್ನಡ ಧ್ವಜ, ಮಹದಾಯಿ ವಿಚಾರ, ಇಂದಿರಾ ಕ್ಯಾಂಟೀನ್‌ ಮತ್ತು “ಭಾಗ್ಯ’ಗಳು

– ನವೀನ್‌ ಅಮ್ಮೆಂಬಳ

Advertisement

Udayavani is now on Telegram. Click here to join our channel and stay updated with the latest news.

Next