ಬೆಂಗಳೂರು: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಮೇಲೆ ಪೋಲೀಸರು ಹಲ್ಲೆ ನಡೆಸಿ, ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿಸಿ ಉತ್ತರ ಪ್ರದೇಶ ಸರ್ಕಾರ ಹಾಗೂ ಪೊಲೀಸರ ಕ್ರಮವನ್ನು ಖಂಡಿಸಿ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಿಂದ ಆನಂದ್ ರಾವ್ ವೃತ್ತದ ಬಳಿ ಇವರು ಗಾಂಧಿ ಪ್ರತಿಮೆಯವರೆಗೂ ಕಾಂಗ್ರೆಸ್ ಪ್ರತಿಭಟನಾ ರ್ಯಾಲಿ ನಡೆಸಿದೆ.
ಉತ್ತರ ಪ್ರದೇಶದಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಮೃತಪಟ್ಟ ಸಂತ್ರಸ್ತೆಯ ಪೋಷಕರಿಗೆ ಸಾಂತ್ವನ ಹೇಳಲು ತೆರಳುತ್ತಿದ್ದ ವೇಳೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಉತ್ತರಪ್ರದೇಶ ಪೊಲೀಸರ ನಡುವೆ ಹೊಯ್ ಕೈ ನಡೆದಿತ್ತು. ಈ ವೇಳೆ ನಡೆದ ಲಾಠಿಚಾರ್ಜ್ ಮತ್ತು ತಳ್ಳಾಟದಿಂದಾಗಿ ರಾಹುಲ್ ಗಾಂಧಿ ಮುಗ್ಗರಿಸಿ ಬಿದ್ದಿದ್ದರು.
ಘಟನೆಯನ್ನು ರಾಜ್ಯ ಕಾಂಗ್ರೆಸ್ ಖಂಡಿಸಿದ್ದು, ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ.ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮತ್ತಿತರ ನಾಯಕರು ಇದ್ದರು.
ಕಾಂಗ್ರೆಸ್ ಭವನದಿಂದ ಆನಂದರಾವ್ ವೃತ್ತದ ಬಳಿ ಇರುವ ಗಾಂಧಿ ಪ್ರತಿಮೆವರೆಗೂ ಪಂಜಿನ ಮೆರವಣಿಗೆ ಹೊರಟ ಕಾಂಗ್ರೆಸ್ ನಾಯಕರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.