Advertisement

ಹಾಲಾಡಿ ರಾಜೀನಾಮೆ ವಿರೋಧಿಸಿ ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ

12:24 PM Feb 02, 2018 | |

ಕುಂದಾಪುರ: ಕುಂದಾಪುರ ಪಕ್ಷೇತರ ಶಾಸಕರಾಗಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಅವಧಿಗೆ ಮುನ್ನವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದನ್ನು ವಿರೋಧಿಸಿ ಕುಂದಾಪುರದ ಶಾಸ್ತ್ರಿ ಸರ್ಕಲ್‌ ಬಳಿ ಗುರುವಾರ ಕಾಂಗ್ರೆಸ್‌ ವತಿಯಿಂದ ಬೃಹತ್‌ ಪ್ರತಿಭಟನೆ ನಡೆಯಿತು.

Advertisement

ಇಂಟಕ್‌ ರಾಜ್ಯಾಧ್ಯಕ್ಷ ರಾಕೇಶ್‌ ಮಲ್ಲಿ ಅವರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಬಿಜೆಪಿ ಸೇರುವ ಕಾರಣಕ್ಕೆ ಮತ ನೀಡಿ ಚುನಾಯಿಸಿದ ಜನರನ್ನು ಅವಗಣಿಸಿ, ಸ್ವಾರ್ಥ ಸಾಧನೆಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು, ಮತ ನೀಡಿ ಚುನಾಯಿಸಿದ ಕ್ಷೇತ್ರದ ಮತದಾರರಿಗೆ ಮಾಡಿರುವ ದ್ರೋಹ. ಕ್ಷೇತ್ರದ ಸಮಸ್ಯೆಗಳತ್ತ ಗಮನಹರಿಸದೆ, ಏಕಾಏಕಿ ರಾಜೀನಾಮೆ ನೀಡಿರುವುದು ನೋವಿನ ವಿಚಾರ. ಚುನಾಯಿತ ಪ್ರತಿನಿಧಿಯೋರ್ವ ವೈಯಕ್ತಿಕ ಹಿತಾಸಕ್ತಿಗಾಗಿ ಪದೇ ಪದೇ ರಾಜೀನಾಮೆ ನೀಡುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಕುಂದಾಪುರದ ಜನತೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ವಿಶ್ವಾಸದ್ರೋಹ
ಕಾಂಗ್ರೆಸ್‌ ಯುವ ನಾಯಕ ಅಮೃತ್‌ ಶೆಣೈ ಮಾತನಾಡಿ, ಜವಾಬ್ದಾರಿಯುತ ಸ್ಥಾನದಲ್ಲಿದ್ದ ಶಾಸಕರು, ಚುನಾವಣೆಗೆ ಇನ್ನೂ 3 ತಿಂಗಳು ಬಾಕಿ ಇರುವಾಗಲೇ, ಬಿಜೆಪಿ ಟಿಕೆಟು ಆಕಾಂಕ್ಷಿಗಳ ಪಟ್ಟಿಯಲ್ಲಿ ತನ್ನ ಹೆಸರಿಲ್ಲ ಎನ್ನುವ ಕಾರಣಕ್ಕೆ ತರಾತುರಿಯಲ್ಲಿ ರಾಜೀನಾಮೆ ನೀಡಿದ್ದು, ಸ್ವಾರ್ಥಕ್ಕಾಗಿ ಕುಂದಾಪುರದ ಜನರಿಗೆ ವಿಶ್ವಾಸದ್ರೋಹ ಮಾಡಿದ್ದಾರೆ. ಶ್ರೀನಿವಾಸ ಶೆಟ್ಟಿ ಅವರ ರಾಜಕೀಯ ನಾಗಲೋಟಕ್ಕೆ ಈ ಬಾರಿ ಕಾಂಗ್ರೆಸ್‌ ತಡೆ ಒಡ್ಡಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು. ಅವಧಿಗೆ ಮುಂಚಿತವಾಗಿ ರಾಜೀನಾಮೆ ನೀಡುವ ಮೂಲಕ ಕ್ಷೇತ್ರದ ಜನತೆಗೆ ವಿಶ್ವಾಸ ದ್ರೋಹ ಬಗೆದ ಶಾಸಕರಿಗೆ ಧಿಕ್ಕಾರ ಅನ್ನುವ ಘೋಷಣೆಗಳನ್ನು ಕಾಂಗ್ರೆಸ್‌ ಕಾರ್ಯಕರ್ತರು ಕೂಗಿದರು.

ಕುಂದಾಪುರ ಹಾಗೂ ಕೋಟ ಬ್ಲಾಕ್‌ ಕಾಂಗ್ರೆಸ್‌ ಸಂಯುಕ್ತ ಆಶ್ರಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಪದವೀಧರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ದಿನೇಶ್‌ ಕೆ.ಸಿ., ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಕಾಸ್‌ ಹೆಗ್ಡೆ, ಕಾಂಗ್ರೆಸ್‌ ನಾಯಕರಾದ ರೋಶನಿ ಒಲಿವೆರಾ, ಚಂದ್ರಶೇಖರ ಖಾರ್ವಿ, ಶ್ರೀಧರ ಶೇರಿಗಾರ್‌, ದೇವಕಿ, ಜ್ಯೋತಿ ಪುತ್ರನ್‌, ಕೋಟದ ಶಂಕರ ಪೂಜಾರಿ, ಇಚ್ಚಿತಾರ್ಥ್ ಶೆಟ್ಟಿ, ಮಲ್ಲಿಕಾ ಬಾಲಕೃಷ್ಣ ಪೂಜಾರಿ, ಮಲ್ಲಿಕಾ ಮತ್ತಿತರರು ಉಪಸ್ಥಿತರಿದ್ದರು. ವಿನೋದ್‌ ಕ್ರಾಸ್ತಾ ಪ್ರಸ್ತಾವನೆಗೈದರು.

Advertisement

Udayavani is now on Telegram. Click here to join our channel and stay updated with the latest news.

Next