ಪಡುಬಿದ್ರಿ: ರವಿ ಶೆಟ್ಟಿ ಅಧ್ಯಕ್ಷತೆಯಲ್ಲಿನ ಬಿಜೆಪಿ ಬೆಂಬಲಿತ ಗ್ರಾ. ಪಂ. ನ ದುರಾಡಳಿತ ಹಾಗೂ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ಗ್ರಾ. ಪಂ. ಎದುರು ಮಾಜಿ ಸಚಿವ ವಿನಯಕುಮಾರ್ ಸೊರಕೆ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಪ್ರತಿಭಟನೆಯನ್ನು ಫೆ. 8ರಂದು ನಡೆಸಿತು.
ಸದಸ್ಯರನ್ನು ಅಧ್ಯಕ್ಷರು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಮನೆ ನಿವೇಶನಗಳು ಬಡವರಿಗೆ ಸಿಗುತ್ತಿಲ್ಲ. ನಿವೇಶನ ಹಕ್ಕುಪತ್ರ ನೀಡುತ್ತಿಲ್ಲ. ಕಸ ವಿಲೇವಾರಿಯನ್ನು ಸಮರ್ಪಕವಾಗಿ ಮಾಡಲಾಗುತ್ತಿಲ್ಲ. ಪಂಚಾಯತ್ ಎದುರು ಕಸದ ರಾಶಿಯನ್ನು ಹಾಕಲಾಗಿದೆ. ಸದಸ್ಯರ ಕಾನೂನಬದ್ಧ ಹಕ್ಕನ್ನು ಕಸಿದು ಕೊಳ್ಳಲಾಗುತ್ತಿದೆ. ಜಲಜೀವನ್ ಮಿಶನ್ ಯೋಜನೆಯಲ್ಲಿ ತಾರತಮ್ಯ, ಸದಸ್ಯರಿಗೆ ತಿಳಿಸದೇ ಅಧ್ಯಕ್ಷರು ತಾವಾಗಿಯೇ ಸಭೆಯನ್ನು ಕರೆಯುತ್ತಿರುವುದು, ಪಂಚಾಯತ್ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಳ್ಳದೆ ಗ್ರಾ. ಪಂ. ಎದುರು ವಾಣಿಜ್ಯ ಕಟ್ಟಡ ನಿರ್ಮಾಣ, ಕ್ರಿಯಾ ಯೋಜನೆಯಲ್ಲಿರಿಸದೇ ಪಂಚಾಯತ್ ನಿಧಿಯ ದುರ್ಬಳಕೆ ಮುಂತಾದ ವಿಚಾರಗಳ ಬಗೆಗೆ ಮಾಜಿ ಸಚಿವ ಸೊರಕೆ, ಶೇಖರ ಹೆಜಮಾಡಿ, ನವೀನ್. ಎನ್. ಶೆಟ್ಟಿ, ಗಣೇಶ್ ಕೋಟ್ಯಾನ್, ಸ್ಥಾನೀಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕರುಣಾಕರ ಪೂಜಾರಿ ಸಾರ್ವಜನಿಕರ ಗಮನ ಸೆಳೆದರು.
ಸ್ಥಳಕ್ಕಾಗಮಿಸಿದ ಕಾಪು ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಶಿವಪ್ರಸಾದ್ ಅವರೊಂದಿಗೆ ಮಾಜಿ ಶಾಸಕ ವಿನಯಕುಮಾರ್ ಸೊರಕೆ ಅವರು, ಈ ಬಾರಿ ಸಾಂಕೇತಿಕ ಪ್ರತಿಭಟನೆಯನ್ನು ನಡೆಸಿದ್ದೇವೆ. ಮುಂದೆ ಸದಸ್ಯರ , ಸಾರ್ವಜನಿಕರ ಬೇಡಿಕೆಗಳು ಈಡೇರದಿದ್ದಲ್ಲಿ ತೀವ್ರ ಪ್ರತಿಭಟನೆಯೊಂದಿಗೆ ಗ್ರಾ. ಪಂ. ಗೆ ಮುತ್ತಿಗೆಯನ್ನು ಹಾಕಲಿರುವುದಾಗಿ ಹೇಳಿದರು.
ಪ್ರತಿಭಟನಕಾರರ ಪರ ಮನವಿ ಪತ್ರವನ್ನು ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಅವರಿಗೆ ನೀಡಲಾಯಿತು.
ಗ್ರಾ. ಪಂ. ಪಿಡಿಒ ಪಂಚಾಕ್ಷರಿ ಸ್ವಾಮಿ, ಮಾಜಿ ಉಪಾಧ್ಯಕ್ಷ ವೈ. ಸುಕುಮಾರ್, ಮಾಜಿ ತಾ. ಪಂ. ಸದಸ್ಯರಾದ ನವೀನ್ ಚಂದ್ರ ಶೆಟ್ಟಿ, ದಿನೇಶ್ ಕೋಟ್ಯಾನ್, ಭಾಸ್ಕರ ಪಡುಬಿದ್ರಿ, ರಾಜೇಶ್ ಶೇರಿಗಾರ್, ಜ್ಯೋತಿ ಮೆನನ್, ಸುಚರಿತಾ, ಕಾಪು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಾ, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೈನ್, ಬ್ಲಾಕ್ ಎಸ್ ಸಿ/ ಎಸ್ಟಿ ಮೋರ್ಚಾ ಅಧ್ಯಕ್ಷ ಸುಧಾಕರ್ ಮತ್ತಿತರರಿದ್ದರು.