ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಇದರಿಂದ ಸಾರ್ವಜನಿಕರು ಮತ್ತಷ್ಟು ಗಾಬರಿಗೊಂಡಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಜಿಲ್ಲೆಯಲ್ಲಿ ಪ್ರತಿ ದಿನ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಇದರಿಂದ ಸಾವಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಆಸ್ಪತ್ರೆಯಲ್ಲಿ ವೆಂಟಿಲೇಟರ್ ಇಲ್ಲ. ಆಕ್ಸಿಜನ್, ಮಾಸ್ಕ್, ಸ್ಯಾನಿಟೈಜರ್ ಇಲ್ಲ. ದಾದಿಯರೂ ಇಲ್ಲ. ಅಷ್ಟೇ ಅಲ್ಲದೆ ಅಗತ್ಯವಿರುವಷ್ಟು ಡಾಕ್ಟರ್‌ಗಳೂ ಇಲ್ಲ. ಈ ಎಲ್ಲ ಇಲ್ಲಗಳ ನಡುವೆ ಮೆಗ್ಗಾನ್ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಇಲ್ಲಿ ವೈದ್ಯರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರವೇ ಹೊಣೆಯಾಗಿದೆ. ಖಾಸಗಿ ಆಸ್ಪತ್ರೆಗಳ ಮೇಲೆ ಸರ್ಕಾರದ ನಿಯಂತ್ರಣ ತಪ್ಪಿದೆ ಮತ್ತು ಕೊರೊನಾ ಪರೀಕ್ಷೆ ತುಂಬಾ ವಿಳಂಬವಾಗುತ್ತಿದೆ. ಗಂಟಲು ದ್ರವ ಪರೀಕ್ಷೆಯ ವರದಿ ಒಂದು ಗಂಟೆ ಯೊಳಗೆ ಪ್ರಕಟವಾಗುವಂತಿರಬೇಕು. ಇದಲ್ಲದೆ ಕೋವಿಡ್ ನೆಪದಲ್ಲಿ ಸಾಮಾನ್ಯ ಕಾಯಿಲೆಗಳಿಂದ ಬರುವ ವೃದ್ಧರು, ಹೊರರೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ದೂರಿದರು. ಸರಕಾರ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುವ ಪ್ರಕ್ರಿಯೆಯಲ್ಲಿ ತಲ್ಲೀನವಾಗಿದೆ ಹೊರತು ಮೆಗ್ಗಾನ್ ಆಸ್ಪತ್ರೆಯಲ್ಲಿ ಏನಿದೆ, ಎನಿಲ್ಲ ಎಂದು ನೋಡುತ್ತಿಲ್ಲ. ಸಚಿವರು ಪತ್ರಿಕಾ ಹೇಳಿಕೆಯಲ್ಲಿಯೇ ಮುಳುಗಿದ್ದು, ಇಡೀ ಜಿಲ್ಲೆಯನ್ನು ಮರೆತಿದ್ದಾರೆ. ಅವರು ಕೋವಿಡ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅವರ ವಿರುದ್ಧ ಕಾಂಗ್ರೆಸ್ ಚಳವಳಿ ಹಮ್ಮಿಕೊಳ್ಳುತ್ತದೆ ಎಂದು ಎಚ್ಚರಿಸಿದರು.
ಕೋವಿಡ್ ಕೇರ್ ಸೆಂಟರ್‌ಗಳನ್ನು ಹೆಚ್ಚಿಸಬೇಕು. ಸೋಂಕಿನ ಕಡಿಮೆ ಲಕ್ಷಣ ಮತ್ತು ಹೆಚ್ಚಿನ ಲಕ್ಷಣ ಇರುವವರಿಗೆ ಪ್ರತ್ಯೇಕ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಬೇಕು. ರೋಗಿಗಳ ಸಂಖ್ಯೆಗೆ ಅನುಗುಣವಾಗಿ ತಕ್ಷಣವೇ ವೈದ್ಯರ ಸಂಖ್ಯೆ ಹೆಚ್ಚಿಸಬೇಕು. ಕೊರೊನಾವನ್ನು ತಕ್ಷಣವೇ ಹತೋಟಿಗೆ ತರಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಅಧ್ಯಕ್ಷ ಎಚ್.ಎಸ್.ಸುಂದರೇಶ್, ಕೆ.ಬಿ. ಪ್ರಸನ್ನಕುಮಾರ್, ಎಚ್.ಸಿ.ಯೋಗೀಶ್, ಎನ್. ರಮೇಶ್, ಕಾಶಿ ವಿಶ್ವನಾಥ್, ವೈ. ಎಚ್.ನಾಗರಾಜ್, ಕೆ.ರಂಗನಾಥ್, ಚೇತನ್, ಸಿ.ಜಿ.ಮಧುಸೂದನ…, ಎಚ್.ಪಿ.ಗಿರೀಶ್, ರವಿ ಮತ್ತಿತರರು ಇದ್ದರು.