ಮೈಸೂರು: ಟಿಪ್ಪು ಜಯಂತಿ ಕಾರ್ಯಕ್ರಮವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಬಿಜೆಪಿಯವರು ರಾಜ್ಯದಲ್ಲಿ ಅಶಾಂತಿ ಮೂಡಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಚಾಮರಾಜ ವಿಧಾನಸಭಾ ಕ್ಷೇತ್ರದ ದೇವರಾಜ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಚಿಕ್ಕ ಗಡಿಯಾರ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ರಾಜ್ಯದ ಜನತೆ ಸೌಹಾರ್ದತೆಯಿಂದ ಗಲಭೆ, ಘರ್ಷಣೆಗಳಿಲ್ಲದೆ ಸಹೋದರತ್ವದಿಂದ ಬದುಕುತ್ತಿರುವುದನ್ನು ಸಹಿಸದ ಬಿಜೆಪಿ ಮುಖಂಡರು, ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ಉದ್ದೇಶಪೂರ್ವಕವಾಗಿ ಟಿಪ್ಪುಜಯಂತಿ ವಿರೋಧಿಸುವ ಹೆಸರಲ್ಲಿ ಪ್ರತಿಭಟನೆ ನಡೆಸುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿ, ಗೋವಿಂದ ಕಾರಜೋಳ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದಾಗ ಸರ್ಕಾರದ ವತಿಯಿಂದಲೇ ಟಿಪ್ಪು ಕುರಿತ ಪುಸ್ತಕ ಹೊರತಂದಿದ್ದು, ಸ್ವತಃ ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಟಿಪ್ಪುವನ್ನು ಹೊಗಳಿ ಮುನ್ನುಡಿ ಬರೆದಿದ್ದು ಬಿಜೆಪಿಯವರಿಗೆ ಮರೆತು ಹೋಗಿದೆ.
ಬಿಜೆಪಿಯಿಂದ ಹೊರಬಂದು ಕೆಜೆಪಿ ಕಟ್ಟಿದ ಯಡಿಯೂರಪ್ಪ, ಬಿಎಸ್‌ಆರ್ ಕಾಂಗ್ರೆಸ್ ಪಕ್ಷ ಕಟ್ಟಿದ ಶ್ರೀರಾಮುಲು ಅವರು ಪಕ್ಷದ ವತಿಯಿಂದ ಟಿಪ್ಪು ಜಯಂತಿ ಆಚರಿಸಿದ್ದಾರೆ. ಆಗ ಟಿಪ್ಪು ಜಯಂತಿ ಆಚರಿಸಿ, ಈಗ ಬಿಜೆಪಿಗೆ ವಾಪಸ್ಸಾದ ಬಳಿಕ ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸುತ್ತಿರುವ ಈ ನಾಯಕರ ದುರುದ್ದೇಶವನ್ನು ಜನತೆಗೆ ತಿಳಿಸಲು ಪ್ರತಿಭಟನೆ ಮಾಡುತ್ತಿರುವುದಾಗಿ ಪ್ರತಿಭಟನಾಕಾರರು ಹೇಳಿದರು.
ಪತ್ರಿಭಟನೆಯಲ್ಲಿ ಮಾಜಿ ಶಾಸಕ ವಾಸು, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಪಾಲಿಕೆ ಸದಸ್ಯರಾದ ಉಷಾ ಕುಮಾರ್, ಪುಷ್ಪಲತಾ, ಮಾಜಿ ಮೇಯರ್ ಬಿ.ಕೆ.ಪ್ರಕಾಶ್, ದೇವರಾಜ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಂದರ್ ಕುಮಾರ್ ಮೊದಲಾದವರು ಭಾಗವಹಿಸಿದ್ದರು.