ತುಮಕೂರು: ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಜನಪರವಾಗಿ ಕೆಲಸ ಮಾಡುತ್ತಿದ್ದರೂ ಇದನ್ನು ಸಹಿಸದ ಬಿಜೆಪಿ ಮುಖಂಡರು ಆಪರೇಷನ್ ಕಮಲದ ಮೂಲಕ ಶಾಸಕರನ್ನು ಖರೀದಿ ಮಾಡಲು ಹೊರಟಿರುವುದನ್ನು ಖಂಡಿಸಿ, ಶನಿವಾರ ಕಾಂಗ್ರೆಸ್ ಭವನದ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ನಾಯಕರ ಧೋರಣೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಬಿಜೆಪಿ ನಾಯಕರ ವಿರುದ್ಧ ಧಿಕ್ಕಾರ ಕೂಗಿ, ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದರು.
ಆಮಿಷ ಒಡ್ಡುತ್ತಿರುವ ಬಿಜೆಪಿ: ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ರಾಜ್ಯದಲ್ಲಿ ರಚನೆಯಾದ ಸಮ್ಮಿಶ್ರ ಸರ್ಕಾರವನ್ನು ದಿನದಿಂದ ದಿನಕ್ಕೆ ಬಿಜೆಪಿ ಪಕ್ಷವು ಕಾಡುತ್ತಾ, ಅವರಿಗೆ ಅಧಿಕಾರ ಮಾಡಲು ಬಿಡದೆ, ಪದೇ ಪದೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಸೆಳೆಯಲು ಹಣ, ಮಂತ್ರಿ ಸ್ಥಾನ ಸೇರಿದಂತೆ ಹಲವು ಆಮಿಷಗಳನ್ನು ಒಡ್ಡುತ್ತಿರುವ ಬಿಜೆಪಿ ಪಕ್ಷದ ಮುಖಂಡರು ಸರ್ಕಾರಕ್ಕೆ ತೀವ್ರ ತೊಂದರೆ ನೀಡು ತ್ತಿದ್ದಾರೆ ಎಂದು ತಿಳಿಸಿದರು.
ಬಿಎಸ್‌ವೈ ರಾಜೀನಾಮೆ ನೀಡಲಿ: ಸ್ವತಃ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರೇ ಆಪರೇಷನ್ ಕಮಲಕ್ಕೆ ಇಳಿ ದಿದ್ದು, ಕೂಡಲೇ ಅವರು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಬಿಜೆಪಿ ಧೋರಣೆ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ತಾಲೂಕು, ಹೋಬಳಿ ಮಟ್ಟದಲ್ಲಿಯೂ ಬಿಜೆಪಿ ಪಕ್ಷದ ವಿರುದ್ಧ ಪ್ರತಿಭಟನೆ ರೂಪಿಸಲಿದೆ ಎಂದು ಎಚ್ಚರಿಸಿದರು.
ಅಸ್ಥಿರಗೊಳಿಸುವು ಯತ್ನ: ಕಾಂಗ್ರೆಸ್ ಮಾಜಿ ಶಾಸಕ ಡಾ.ರಫೀಕ್ ಅಹಮದ್ ಮಾತನಾಡಿ, ಸಮ್ಮಿಶ್ರ ಸರ್ಕಾರ ಮಂಡಿಸಿರುವ ಉತ್ತಮ ಬಜೆಟ್ನಿಂದ ಕಂಗಾಲಾಗಿರುವ ಬಿಜೆಪಿ, ಆಪರೇಷನ್ ಕಮಲದ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾಗಿದೆ. ಇದು ಪ್ರಜಾಪ್ರಭುತ್ವದ ಲಕ್ಷಣವಲ್ಲ. ಬಿಜೆಪಿ ರಾಜ್ಯಾಧ್ಯಕ್ಷರೇ ಹೇಳಿರುವಂತೆ ಶಾಸಕರಿಗೆ, ಸ್ಪೀಕರಗೆ ನೀಡಲು ಹೊರಟಿರುವ ಕೋಟಿ, ಕೋಟಿ ಹಣ ಎಲ್ಲಿಯದು ಎಂಬುದನ್ನು ಬಹಿರಂಗ ಪಡಿಸಬೇಕು. ಹಾಗೆಯೇ ಆಪರೇಷನ್ ಕಮಲ ಮಾಡಲು ಹೋಗಿ ಸಿಕ್ಕಿಬಿದ್ದಿರುವ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿ, ರಾಜಕೀಯ ನಿವೃತ್ತಿ ಪಡೆಯ ಬೇಕೆಂದು ಒತ್ತಾಯಿಸಿದರು.
ಬಿಜೆಪಿ ಪಕ್ಷದ ವತಿಯಿಂದ ಬಿಲ್ ಪಾವತಿ: ಕೆಪಿಸಿಸಿ ವಕ್ತಾರ ಮುರಳೀಧರ ಹಾಲಪ್ಪ ಮಾತನಾಡಿ, ರಾಜ್ಯಾದ್ಯಂತ ಬಿಜೆಪಿ ಪಕ್ಷದ ಹೊಲಸು ರಾಜಕೀಯ ನಡೆ ವಿರೋಧಿಸಿ ಕಾಂಗ್ರೆಸ್ ಪಕ್ಷದ ಹಿರಿಯರ ಜೊತೆ, ಎನ್‌ಎಸ್‌ಯುಐ, ಯುವ ಕಾಂಗ್ರೆಸ್, ಮಹಿಳಾ ಘಟಕ ಸೇರಿದಂತೆ ಎಲ್ಲರೂ ಬೀದಿಗಿಳಿದು ಪ್ರತಿಭಟನೆ ಮಾಡಲಾಗುತ್ತಿದೆ. ಬಿಜೆಪಿ ಧರ್ಮದ ಹೆಸರಿನಲ್ಲಿ ಗುಂಡೂರಾವ್ ಕುಟುಂಬ ಒಡೆಯಲು ಹೋಗಿ ವಿಫಲವಾಗಿದೆ. ಅಲ್ಲದೇ ಕಳೆದ ಒಂದು ತಿಂಗಳಿನಿಂದ ಮುಂಬೈನ ಅನೇಕ ಐಷಾರಾಮಿ ಹೋಟೆಲ್‌ಗಳ ಬಿಲ್ಲುಗಳನ್ನು ಬಿಜೆಪಿ ಪಕ್ಷದ ವತಿಯಿಂದ ಪಾವತಿಸಲಾಗುತ್ತಿದೆ ಎಂದು ಆಪಾದಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಮಾಜಿ ಶಾಸಕರು, ಪಾಲಿಕೆ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡು, ಬಿಜೆಪಿ ಪಕ್ಷದ ವಿರುದ್ಧ ಘೋಷಣೆ ಗಳನ್ನು ಕೂಗಿದರು. ಪ್ರತಿಭಟನೆಯಲ್ಲಿ ಜಿಪಂ ಸದಸ್ಯ ಕೆಂಚಮಾರಯ್ಯ, ಪಾಲಿಕೆ ಸದಸ್ಯರಾದ ಸೈಯದ್ ನಯಾಜ್, ಇಲಿಯಾಜ್, ಕುಮಾರ್, ಮಾಜಿ ಸದಸ್ಯೆ ಗೀತಾ ರುದ್ರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆಟೋ ರಾಜು, ಮೆಹಬೂಬ್,ಉಪಾಧ್ಯಕ್ಷೆ ಮರಿಚನ್ನಮ್ಮ, ತರುಣೇಶ್ ಸೇರಿದಂತೆ ಹಲವರು ಇದ್ದರು.