ಸಾಗರ: ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ವಿರುದ್ಧ ದೂರು ದಾಖಲಿಸಿರುವ ಉಪ ವಿಭಾಗೀಯ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ಪ್ರಕಾಶ್ ಬೋಸ್ಲೆ ಅವರನ್ನು ಅಮಾನತು ಮಾಡಬೇಕು ಹಾಗೂ ದೂರನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಗುರುವಾರ ಯುವ ಕಾಂಗ್ರೆಸ್, ಜಾತ್ಯಾತೀತ ಜನತಾದಳ, ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳ ಒಕ್ಕೂಟ, ರೈತ ಹಾಗೂ ಕೂಲಿ ಕಾರ್ಮಿಕರ ಹಿತರಕ್ಷಣಾ ವೇದಿಕೆ, ಕರ್ನಾಟಕ ಕ್ರಾಂತಿರಂಗ, ದಲಿತ ಸಂಘರ್ಷ ಸಮಿತಿ, ಆರ್ಯ ಈಡಿಗ ಯುವ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಗುರುವಾರ ಉಪ ವಿಭಾಗೀಯ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ತುಮರಿ ಗ್ರಾಪಂ ಅಧ್ಯಕ್ಷ ಜಿ.ಟಿ. ಸತ್ಯನಾರಾಯಣ್, ಸುಳ್ಳು ದೂರನ್ನು ಜನಪ್ರತಿನಿಧಿಯ ವಿರುದ್ಧ ದಾಖಲಿಸುವ ಸರ್ಕಾರಿ ಅಧಿಕಾರಿ ಆ ಮೂಲಕ ಸಮಾಜಕ್ಕೆ ಹೇಳುವ ಸಂದೇಶವನ್ನು ನಾವು ಗ್ರಹಿಸಬೇಕಾಗಿದೆ. ಉಪ ವಿಭಾಗೀಯ ಪ್ರಮುಖರಾದ ಎಸಿ ಅವರ ರಾಜಿ ಮಾತುಕತೆಯ ನಂತರವೂ ದೂರು ದಾಖಲಿಸುವ ಪುಡಿ ರಾಜಕಾರಣದ ಕೆಲಸ ನಡೆದಿದೆ. ಸರ್ಕಾರಿ ಅಧಿಕಾರಿಗಳ ವಿರುದ್ಧ ಜನಪ್ರತಿನಿಧಿಗಳಿದ್ದಾರೆ ಎಂಬುದನ್ನು ಬಿಂಬಿಸುವ ಪ್ರಯತ್ನ ನಡೆದಿದೆ. ಭ್ರಷ್ಟ, ಜನ ವಿರೋಧಿ ಅಧಿಕಾರಿಗಳ ವಿರುದ್ಧ ಧ್ವನಿ ಎತ್ತಿದರೆ ಪ್ರಜಾಪ್ರಭುತ್ವದ ಮೂಲ ತತ್ವವನ್ನೇ ಬುಡಮೇಲು ಮಾಡುವಂತೆ ಕಾನೂನಿನ ದುರ್ಬಳಕೆ ನಡೆದಿದೆ ಎಂದು ಆರೋಪಿಸಿದರು.
ತಾಪಂ ಸದಸ್ಯ ಅಶೋಕ್ ಬರಗಿ ಮಾತನಾಡಿ, ಜನರನ್ನು, ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ನಂಬಿಸುವ ಕೆಲಸವನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗೆ ತಾನು ಅನಿವಾರ್ಯ ಎನ್ನುವ ವಾತಾವರಣ ನಿರ್ಮಿಸುವ ಮೂಲಕ ದೊಡ್ಡಮಟ್ಟದ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಉತ್ತಮ ವೈದ್ಯರಿಗೆ ತೊಂದರೆ ಕೊಡುವ ಕೆಲಸ ಬೋಸ್ಲೆ ಮಾಡುತ್ತಿದ್ದಾರೆ. ಡಾ| ಮಧುಸೂಧನ್ ಎಂಬ ವೈದ್ಯರು ಉತ್ತಮ ಕೆಲಸ ಮಾಡಲು ಬಂದಿದ್ದರು. ಬೋಸ್ಲೆ ಅವರಿಗೆ ಕಣ್ಣೀರು ಹಾಕಿಸಿ ವರ್ಗಾವಣೆ ಯಾಗುವಂತಹ ವಾತಾವರಣ ಸೃಷ್ಟಿಸಿದ್ದರು. ನನ್ನ ಮೇಲೆ ಸಹ ರೋಗಿಗಳ ಪರ ಮಾತನಾಡಿದ್ದಕ್ಕೆ ಸುಳ್ಳು ದೂರು ದಾಖಲು ಮಾಡಿದ್ದರು. ಗುತ್ತಿಗೆ ಕಾರ್ಮಿಕರನ್ನು ತಮ್ಮ ಜೀತದಾಳುಗಳಂತೆ ಬೋಸ್ಲೆ ನಡೆಸಿಕೊಂಡಿದ್ದಾರೆ. ಡಾ| ಪ್ರಕಾಶ್ ಬೋಸ್ಲೆಗೆ ಆಡಳಿತಾಧಿಕಾರಿಯಾಗಿ ಕೆಲಸ ಮಾಡುವ ಯಾವ ಅರ್ಹತೆಯೂ ಇಲ್ಲ. ತಕ್ಷಣ ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಭೀಮನೇರಿ ಗ್ರಾಪಂ ಮಾಜಿ ಅಧ್ಯಕ್ಷ ತುಕಾರಾಮ ಶಿರವಾಳ ಮಾತನಾಡಿ, ಆರೋಗ್ಯ ರಕ್ಷಾ ಸಮಿತಿಯ ಆಡಳಿತವನ್ನು ಮೂಲೆಗುಂಪು ಮಾಡಿ, ಇಡೀ ಆಸ್ಪತ್ರೆ ವ್ಯವಸ್ಥೆಯನ್ನು ತಮ್ಮ ಕಪಿಮುಷ್ಟಿಯಲ್ಲಿ ಇರಿಸಿಕೊಂಡಿರುವ ಬೋಸ್ಲೆ ಅವರನ್ನು ಮೊದಲು ಇಲ್ಲಿಂದ ಎತ್ತಂಗಡಿ ಮಾಡಿಸಬೇಕು. ಡಾ| ಬೋಸ್ಲೆ ಆಡಳಿತಾಧಿಕಾರಿಯಾದ ನಂತರ ಆಸ್ಪತ್ರೆಯಲ್ಲಿ ನಡೆದ ಎಲ್ಲ ಅವ್ಯವಹಾರಗಳ ತನಿಖೆ ನಡೆಸಬೇಕು. ಈ ಸಂಬಂಧ ಅಗತ್ಯ ದಾಖಲೆಗಳನ್ನು ಸಂಗ್ರಹಿಸುತ್ತಿದ್ದು, ಶೀಘ್ರದಲ್ಲಿ ಇನ್ನೊಂದು ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಮನವಿ ನೀಡಿ, ಡಾ| ಪ್ರಕಾಶ್ ಬೋಸ್ಲೆ ಮೇಲೆ ಜಾತಿನಿಂದನೆ ಕೇಸು ದಾಖಲು ಆಗಿರುವುದರಿಂದ ತಕ್ಷಣ ಅವರನ್ನು ಅಮಾನತಿನಲ್ಲಿಟ್ಟು ಬಂಧಿಸಬೇಕು. ತಾಪಂ ಅಧ್ಯಕ್ಷರ ಮೇಲೆ ಹಾಕಿರುವ ಸುಳ್ಳು ದೂರನ್ನು ವಾಪಸ್ ಪಡೆಯಬೇಕು. ಕೆಲಸದಿಂದ ವಜಾ ಮಾಡಿರುವ 13 ನೌಕರರನ್ನು ಪುನಃ ಸೇವೆಗೆ ಸೇರಿಸಿಕೊಳ್ಳಬೇಕು. ಶಿರವಾಳ ಗ್ರಾಮದಲ್ಲಿ ಡಾ| ಪ್ರಕಾಶ್ ಬೋಸ್ಲೆ ಅಕ್ರಮವಾಗಿ ನಿರ್ಮಿಸಿರುವ ಮನೆ ಹಾಗೂ ಸರ್ಕಾರಿ ಜಾಗ ಒತ್ತುವರಿಯನ್ನು ತೆರವುಗೊಳಿಸಬೇಕು. ಬೋಸ್ಲೆಯವರ ಅಕ್ರಮ ಆಸ್ತಿ ತನಿಖೆಯಾಗಬೇಕು. ಕೂಡಲೇ ಬೋಸ್ಲೆ ಅವರನ್ನು ಇಲ್ಲಿಂದ ವರ್ಗಾವಣೆ ಮಾಡಬೇಕು. ಉಪ ವಿಭಾಗೀಯ ಆಸ್ಪತ್ರೆಗೆ ಕೆಎಎಸ್ ಅಥವಾ ಐಎಎಸ್ ಗ್ರೇಡಿನ ಅಧಿಕಾರಿಯನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಸುಧಾಕರ ಕುಗ್ವೆ, ಸುವರ್ಣ ಟೀಕಪ್ಪ, ರವಿಕುಮಾರ್ ಹುಣಾಲಮಡಿಕೆ, ಅಣ್ಣಪ್ಪ ಭೀಮನೇರಿ, ಕೆ. ಹೊಳೆಯಪ್ಪ, ಗಿರೀಶ್ ಕೋವಿ, ಗಣಪತಿ ಹೆನಗೆರೆ, ಆನಂದ್ ಭೀಮನೇರಿ, ಬಸವರಾಜ್, ಪರಮೇಶ್ವರ ದೂಗೂರು, ಷಣ್ಮುಖ ಸೂರನಗದ್ದೆ, ಬಿ.ಎ. ಇಂದೂಧರ ಬೇಸೂರು, ವೀರೇಶ್ ಬರೂರು, ಹುಚ್ಚಪ್ಪ ಮಂಡಗಳಲೆ, ಎನ್. ಲಲಿತಮ್ಮ, ಪ್ರಭಾವತಿ ಚಂದ್ರಕಾಂತ್, ಸ್ವಾಮಿರಾರ್, ಚಂದ್ರಶೇಖರ ಗೂರಲಕೆರೆ, ಸುವರ್ಣ ಟೀಕಪ್ಪ, ಎಂ.ಡಿ. ರಾಮಚಂದ್ರ ಇನ್ನಿತರರು ಇದ್ದರು.