ಬೆಂಗಳೂರು:ಮೇಕೆದಾಟು ಪಾದಯಾತ್ರೆ ನಿಂತರೂ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ರಾಜಕೀಯ ಮೇಲಾಟ ನಿಲ್ಲುವ ಲಕ್ಷಣಗಳು ಸದ್ಯಕ್ಕೆ ಕಾಣುತ್ತಿಲ್ಲ. ಪಾದಯಾತ್ರೆ ಸಂದರ್ಭದಲ್ಲಿ ಗೃಹ ಇಲಾಖೆ ಏಕಪಕ್ಷೀಯವಾಗಿ ನಡೆದುಕೊಂಡಿದೆ ಎಂದು ಆರೋಪಿಸಿ ಸಿಎಂ ಬಸವರಾಜ್ ಬೊಮ್ಮಾಯಿ ನಿವಾಸದ ಎದುರು ಪ್ರತಿಭಟನೆ ನಡೆಸಲು ಕಾಂಗ್ರೆಸ್ ಚಿಂತನೆ ನಡೆಸಿದೆ.
ಇದನ್ನೂ ಓದಿ:ಆಂಧ್ರಪ್ರದೇಶ-ಸಂಕ್ರಾಂತಿ ಆಚರಣೆ: ಕುಡಿದ ಅಮಲಿನಲ್ಲಿ ಮೇಕೆ ಬದಲು ಮನುಷ್ಯನ ತಲೆಯನ್ನೇ ಕಡಿದ!
ಪಾದಯಾತ್ರೆ ಸಂದರ್ಭದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಲಾಗಿದೆ ಎಂದು ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರ ವಿರುದ್ಧ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯಿದೆ ಹಾಗೂ ನಿಷೇಧಾಜ್ಞೆ ಉಲ್ಲಂಘನೆ ಮಾಡಿದ್ದಕ್ಕಾಗಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ ಕೋವಿಡ್ ಸಂದರ್ಭದಲ್ಲೇ ಬಿಜೆಪಿ ಹಲವಾರು ಕಾರ್ಯಕ್ರಮ ಹಾಗೂ ಸಮಾವೇಶ ನಡೆಸಿದೆ. ಪಕ್ಷದ ಶಾಸಕರೇ ನಿಯಮ ಉಲ್ಲಂಘಿಸಿದ್ದಾರೆ. ಅವರ ವಿರುದ್ಧವೂ ಪ್ರಕರಣ ದಾಖಲಿಸಬೇಕೆಂಬುದು ಕಾಂಗ್ರೆಸ್ ವಾದ.
ಪ್ರತಿಭಟನೆ ನಡೆಸುವ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಜತೆ ಚರ್ಚೆ ಬಳಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಸಿದ್ದರಾಮಯ್ಯ ಎರಡು ದಿನಗಳಿಂದ ಮೈಸೂರು ಪ್ರವಾಸದಲ್ಲಿದ್ದಾರೆ. ಕಾನೂನು ಹೋರಾಟವನ್ನು ನಿರ್ಧರಿಸುವುದಕ್ಕೆ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಪೊನ್ನಣ್ಣ ನೇತೃತ್ವದಲ್ಲಿ ಐವರು ಹಿರಿಯ ವಕೀಲರ ಸಮಿತಿಯನ್ನೂ ಕಾಂಗ್ರೆಸ್ ರಚಿಸಿದೆ.