ಮಂಗಳೂರು: ವಿಜಯ ಬ್ಯಾಂಕ್ ಉಳಿಸುವ ನಿಟ್ಟಿನಲ್ಲಿ ಬಿಜೆಪಿ ಸಂಸದರು, ಶಾಸಕರು ಮೌನ ತಾಳಿದ್ದಾರೆ ಎಂದು ಮಾಜಿ ಶಾಸಕ ಜೆ.ಆರ್. ಲೋಬೋ ಆರೋಪಿಸಿದ್ದಾರೆ. ನಗರದ ಜ್ಯೋತಿ ಚಿತ್ರಮಂದಿರ ಬಳಿ ಇರುವ ವಿಜಯ ಬ್ಯಾಂಕ್ ಸಂಸ್ಥಾಪಕರ ಶಾಖೆ ಎದುರು ಗುರುವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಅವರು ಮಾತನಾಡಿದರು.
ಎನ್‌ಡಿಎ ಸರಕಾರ ವಿಲೀನ ನಿರ್ಣಯಕ್ಕೆ ಬಂದಿರುವುದು ವಿಜಯ ಬ್ಯಾಂಕ್ ಮತ್ತು ಜಿಲ್ಲೆಗೆ ಮಾಡಿದ ಅವಮಾನ. ಸಂಸದರು ಇದನ್ನು ತಡೆಯುವ ಪ್ರಯತ್ನ ಮಾಡಲಿಲ್ಲ. ವಿಲೀನ ನಿರ್ಣಯ ಕೈ ಬಿಡದಿದ್ದರೆ ಮುಂದೆ ಮತ್ತಷ್ಟು ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಈ ಹಿಂದೆ ಇಂದಿರಾ ಗಾಂಧಿ ಅವಧಿಯಲ್ಲಿ ಬ್ಯಾಂಕ್ ರಾಷ್ಟ್ರೀ ಕರಣಗೊಂಡರೂ ಬ್ಯಾಂಕ್‌ಗಳ ಹೆಸರು ಮಾತ್ರ ಬದಲಾಗಿರಲಿಲ್ಲ ಎಂದರು. ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ವಿಲೀನ ಪ್ರಕ್ರಿಯೆ ಕೂಡಲೇ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು. ವಿಜಯ ಬ್ಯಾಂಕ್ ನಿವೃತ್ತ ಉದ್ಯೋಗಿ ವಿಮಲಾ ರೈ ಮಾತನಾಡಿ, ಮೂಲ್ಕಿ ಸುಂದರ ರಾಮ ಶೆಟ್ಟಿ ಅವರ ಋಣವನ್ನು ಈ ಜನ್ಮದಲ್ಲಿ ತೀರಿಸಲಾಗದು ಎಂದರು. ಎ.ಸಿ. ವಿನಯ ರಾಜ್, ನವೀನ್ ಡಿ’ಸೋಜಾ, ಪ್ರವೀಣ್ ಆಳ್ವ, ಆಶಾ ಡಿಸಿಲ್ವ, ಅಪ್ಪಿ, ಕಳ್ಳಿಗೆ ತಾರಾನಾಥ ಶೆಟ್ಟಿ, ವಿಶ್ವಾಸ್‌ದಾಸ್, ಸಲೀಮ್, ಟಿ.ಕೆ. ಸುಧೀರ್, ನೀರಜ್ ಪಾಲ್, ಶುಭೋದಯ್ ಆಳ್ವ, ಶಶಿರಾಜ್ ಅಂಬಟ್, ಮರಿಯಮ್ಮ ಥಾಮಸ್, ಭಾರತಿ ಬಿ.ಎಂ., ಮರಿಲ್ ರೇಗೊ, ರಮಾನಂದ ಪೂಜಾರಿ, ಆಶಿತ್ ಪೆರೇರಾ ಇದ್ದರು.
ರಸ್ತೆ ವಿಚಾರದಲ್ಲಿ ವಿರೋಧಿಸಿದ್ದ ಬಿಜೆಪಿ ಈಗೆಲ್ಲಿ?
ಮಾಜಿ ಶಾಸಕ ಜೆ.ಆರ್. ಲೋಬೊ ಮಾತನಾಡಿ, ವರ್ಷದ ಹಿಂದೆ ಬಿಜೆಪಿ ನಾಯಕರು ಮೂಲ್ಕಿ ಸುಂದರ ರಾಮ ಶೆಟ್ಟಿ ರಸ್ತೆ ವಿಚಾರದಲ್ಲಿ ರಾಜಕೀಯ ನಡೆಸಿದ್ದರು. ಕಾಂಗ್ರೆಸ್‌ನವರನ್ನು ಬಂಟ ಸಮುದಾಯದ ವಿರೋಧಿಗಳು ಎಂದಿದ್ದರು. ವಿಜಯ ಬ್ಯಾಂಕ್ ಎ.ಬಿ. ಶೆಟ್ಟಿ ಮತ್ತು ಮೂಲ್ಕಿ ಸುಂದರರಾಮ ಶೆಟ್ಟಿ ಅವರ ಕನಸಿನ ಕೂಸು. ಆದರೆ ಅವರದೇ ಸಮುದಾಯಕ್ಕೆ ಸೇರಿದ ಸಂಸದ ನಳಿನ್ ಕೇಂದ್ರ ಸರಕಾರದ ಈ ಕ್ರಮನ್ನು ತಡೆಯುವ ಪ್ರಯತ್ನ ನಡೆಸಲಿಲ್ಲ ಎಂದರು. ಮೂಲ್ಕಿ ಸುಂದರ ರಾಮ ಶೆಟ್ಟಿ ಹೆಸರು ಬಳಸಿ ಚುನಾವಣೆಯಲ್ಲಿ ಗೆದ್ದ ಬಿಜೆಪಿ ಈಗ ವಿಜಯ ಬ್ಯಾಂಕ್ ಅಸ್ತಿತ್ವ ಅಳಿಸಲು ಮುಂದಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಹೇಳಿದರು.
ಕಪ್ಪು ಪಟ್ಟಿ ಪ್ರತಿಭಟನೆ
ಸೇರಿದ ಮಂದಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿದರು. ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.