Advertisement

ಬಿಜೆಪಿ ಸರ್ಕಾರದ ಪೆಟ್ರೋಲ್ ಪಿಕ್ ಪಾಕೆಟ್ ಖಂಡಿಸಿ ‘100 ನಾಟೌಟ್’ಆಂದೋಲನ: ಡಿ.ಕೆ ಶಿವಕುಮಾರ್

05:07 PM Jun 09, 2021 | Team Udayavani |

ಬೆಂಗಳೂರು: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆ ಏರಿಕೆ ಮೂಲಕ ಜನರ ಜೇಬು ಲೂಟಿ ಮಾಡುತ್ತಿದೆ. ಇದನ್ನು ಖಂಡಿಸಿ ರಾಜ್ಯದಲ್ಲಿ ಐದು ದಿನಗಳ ಕಾಲ 5 ಸಾವಿರ ಪೆಟ್ರೋಲ್ ಬಂಕ್ ಗಳಲ್ಲಿ ‘100 ನಾಟೌಟ್’ ಅಭಿಯಾನ ಆರಂಭಿಸುತ್ತಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ದೇಶದ ಇತಿಹಾಸ ಪುಟಕ್ಕೆ ನಾವೆಲ್ಲ ಸಾಕ್ಷಿಯಾಗುತ್ತಿದ್ದೇವೆ. ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ, ದಾಖಲೆಗಳನ್ನು ಮುರಿಯುತ್ತಿದೆ. ಪೆಟ್ರೋಲ್ ಬೆಲೆ ₹100 ಗಡಿ ದಾಟಿದೆ. ಇದನ್ನು ಖಂಡಿಸಿ ಆಂದೋಲನ ಹಮ್ಮಿಕೊಂಡಿದ್ದೇವೆ. ಈ ಪ್ರತಿಭಟನೆ ಇದೇ ತಿಂಗಳು 11ರಿಂದ 15 ರವರೆಗೂ ಐದು ದಿನಗಳ ಕಾಲ ನಡೆಯಲಿದೆ ಎಂದರು.

ನಮ್ಮ ಎಲ್ಲ ಘಟಕಗಳಾದ ಯೂತ್ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಎಂಎಸ್ ಯುಐ, ರೈತ ಘಟಕ, ಹಿಂದುಳಿದ, ಅಲ್ಪಸಂಖ್ಯಾತ ಘಟಕ, ಬ್ಲಾಕ್, ಜಿಲ್ಲಾ ಕಾಂಗ್ರೆಸ್ ಸದಸ್ಯರು ಈ ಐದು ಸಾವಿರ ಪೆಟ್ರೋಲ್ ಬಂಕ್ ಗಳಲ್ಲಿ ಬೆಳಗ್ಗೆ 11 ರಿಂದ 12 ರವರೆಗೂ ಒಂದು ಗಂಟೆಗಳ ಕಾಲ ಪ್ರತಿಭಟನೆ ಮಾಡುತ್ತಿದ್ದಾರೆ.

ಎಲ್ಲ ಜಿಲ್ಲೆಗಳ ಉಸ್ತುವಾರಿಗೆ ಒಬ್ಬೊಬ್ಬ ನಾಯಕರನ್ನು ನೇಮಿಸಲಾಗುತ್ತಿದೆ. ಕೊರೊನಾ ಭ್ರಷ್ಟಾಚಾರ ವಿಚಾರವಾಗಿ ನಮ್ಮ ನಾಯಕರು ಪ್ರತಿ ಜಿಲ್ಲೆಗೆ ಹೋಗಿ ಪತ್ರಿಕಾಗೋಷ್ಠಿ ಮಾಡಿದಂತೆ, ಈಗಲೂ ಪ್ರತಿಭಟನೆ ನೇತೃತ್ವಕ್ಕೆ ನಾಯಕರನ್ನು ನೇಮಕ ಮಾಡಲಾಗುವುದು. ಈ ಉಸ್ತುವಾರಿ ಹೊತ್ತಿರುವ ನಾಯಕರು ಜೂಮ್ ಮೂಲಕ ಪ್ರತಿಭಟನೆ ವೀಕ್ಷಿಸಬೇಕು.

ಈ ಪ್ರತಿಭಟನೆಯ 1 ನಿಮಿಷ ವಿಡಿಯೋ ಮಾಡಿ, ಪಕ್ಷದ ಐಟಿ ಸೆಲ್ ಹಾಗೂ ಸಾಮಾಜಿಕ ಜಾಲತಾಣ ವಿಭಾಗಕ್ಕೆ ಕಳುಹಿಸಬೇಕು. ಅದನ್ನು ಎಐಸಿಸಿಗೂ ಕಳುಹಿಸಲಾಗುವುದು. ನಾನು, ನಮ್ಮ ಶಾಸಕರು, ಮಾಜಿ ಶಾಸಕರು, ಪಂಚಾಯ್ತಿ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸುತ್ತೇವೆ. ಕೋವಿಡ್ ನಿಯಮಾವಳಿ ಪಾಲಿಸಿ ಈ ಪ್ರತಿಭಟನೆ ಮಾಡಲಾಗುತ್ತಿದೆ ಎಂದರು.

Advertisement

ಉಚಿತ ಲಸಿಕೆ ನಮ್ಮ ಹೋರಾಟದ ಫಲ:

ನಾವು ಹೋರಾಟ ಮಾಡಿದ್ದರಿಂದ ಕೇಂದ್ರ ಸರ್ಕಾರ ದೇಶದಾದ್ಯಂತ ಇಂದು ಉಚಿತ ಲಸಿಕೆ ಘೋಷಿಸಿದೆ. ಎಲ್ಲ ರಾಜ್ಯಗಳಲ್ಲಿ ನಮ್ಮ ಪಕ್ಷ ರಾಜ್ಯಪಾಲರನ್ನು ಭೇಟಿ ಮಾಡಿ, ಉಚಿತ ಲಸಿಕೆಗೆ ಆಗ್ರಹಿಸಿದ್ದರು. ನಂತರ ನಾವು ನಮ್ಮ ಶಾಸಕರ ನಿಧಿಯಿಂದ ಲಸಿಕೆ ನೀಡಲು ಅನುಮತಿ ಕೋರಿದ್ದೆವು. ಆದರೆ ಸರ್ಕಾರ ಅದನ್ನು ನಿರಾಕರಿಸಿದ್ದು, ಜನರ ಜೀವ ರಕ್ಷಿಸಲು ನಿರಾಕರಿಸಿದೆ.

ಈ ವಿಚಾರದಲ್ಲಿ ಕೇಂದ್ರ ಸರ್ಕಾರದಷ್ಟೇ ರಾಜ್ಯ ಸರ್ಕಾರ ಕೂಡ ವಿಫಲವಾಗಿದೆ. ಸುಪ್ರೀಂಕೋರ್ಟ್ ಚಾಟಿ ಬೀಸಿದ ನಂತರ ಸರ್ಕಾರ ಎಚ್ಚೆತ್ತುಕೊಂಡಿದೆ. ಮಾಧ್ಯಮಗಳು ಜನರ ಪರವಾಗಿ ನಿಂತಿದ್ದು, ನ್ಯಾಯಾಲಯದ ಜತೆ ಮಾಧ್ಯಮಗಳಿಗೂ ಅಭಿನಂದನೆ ತಿಳಿಸುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next