ಹುಬ್ಬಳ್ಳಿ: ಕುಡಿಯುವ ನೀರಿನ ಕರ ಬಾಕಿ ಮನ್ನಾ ಹಾಗೂ ನೀರು ಸರಬರಾಜು ನಿರ್ವಹಣೆಯನ್ನು ಖಾಸಗಿ ಕಂಪನಿಗೆ ನೀಡಿರುವುದನ್ನು ವಿರೋಧಿಸಿ ಮಹಾನಗರ ಕಾಂಗ್ರೆಸ್ ವತಿಯಿಂದ ಅಕ್ಷಯ ಪಾರ್ಕ್‌ನ ಇಂದ್ರಪ್ರಸ್ಥದಲ್ಲಿರುವ ಶಾಸಕ ಅರವಿಂದ ಬೆಲ್ಲದ ಅವರ ನಿವಾಸದ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಶ್ರೀ ಸಿದ್ಧಾರೂಢಸ್ವಾಮಿ ಮಠದಿಂದ ಪಾದಯಾತ್ರೆ ಮೂಲಕ ಶಾಸಕ ಅರವಿಂದ ಬೆಲ್ಲದ ಅವರ ನಿವಾಸಕ್ಕೆ ಆಗಮಿಸಿದ ಕಾಂಗ್ರೆಸ್‌ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರು ಮಾತನಾಡಿ, ಸಮಪರ್ಕವಾಗಿನೀರು ನೀಡದಿದ್ದರೂ ದೊಡ್ಡ ಮೊತ್ತದ ಬಿಲ್ ನೀಡಲಾಗುತ್ತಿದೆ. ಕೆಲವರಿಗೆ ಲಕ್ಷಾಂತರ ರೂ.ಕರ ಪಾವತಿ ಮಾಡುವಂತೆ ಬಿಲ್ ನೀಡಲಾಗಿದೆ.ನಾಲ್ಕೈದು ವರ್ಷಗಳಿಗೊಮ್ಮೆ ಬಿಲ್ ನೀಡಿಸಾವಿರಾರು ರೂ. ನೀಡಲು ಬಡವರಿಗೆಅಸಾಧ್ಯವಾಗಿದೆ. ಕೂಡಲೇ ಬಾಕಿ ಕರ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಶಾಸಕ ಅರವಿಂದ ಬೆಲ್ಲದ ಪ್ರತಿಭಟನೆ ವೇಳೆ ಆಗಮಿಸಿ ಮಾತನಾಡಿ, ಈ ಹಿಂದೆ ನೀರಿಗಿಂತ ಗಾಳಿಯೇ ಹೆಚ್ಚಾಗಿ ಬರುತ್ತಿತ್ತು. ಇದರಿಂದ ಕೆಲವೆಡೆ ಬಿಲ್ ಹೆಚ್ಚಾಗಿರುವುದು ದೃಢಪಟ್ಟಿತ್ತು. ಇದನ್ನು ಸರಿಪಡಿಸುವಂತೆ ಹಿಂದೆಯೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ನೀರಿನ ಬಾಕಿ ಕರ ಮನ್ನಾ ಮಾಡುವ ಕುರಿತು ಜಿಲ್ಲಾ ಉಸ್ತುವಾರಿಸಚಿವರ ಗಮನಕ್ಕೆ ತಂದು ಸರಕಾರದ ಹಂತದಲ್ಲಿ ಪರಿಹಾರ ಕಲ್ಪಿಸುವ ಕೆಲಸ ಮಾಡಲಾಗುವುದು.ಖಾಸಗಿ ಕಂಪನಿ ಕಾಮಗಾರಿ ಹಾಗೂ 7 ವರ್ಷ ನಿರ್ವಹಣೆ ಮಾಡಲಿದೆ. ಯಾವುದೇ ಕಾರಣಕ್ಕೂ ಜನರಿಗೆ ಹೊರೆಯಾಗುವ ದರನಿಗದಿ ಮಾಡುವುದಿಲ್ಲ. ಎರಡು ವರ್ಷಗಳಲ್ಲಿ ಹೆಚ್ಚಾದ ಮಳೆ, ಒಂದು ವರ್ಷ ಕೋವಿಡ್ -19 ಹಿನ್ನೆಲೆಯಲ್ಲಿ ರಸ್ತೆ ಕಾಮಗಾರಿಗಳನ್ನು ನಿರ್ವಹಿಸಲು ಸಾಧ್ಯವಾಗಿಲ್ಲ. ಎರಡು ಮೂರು ತಿಂಗಳಲ್ಲಿ ಹಲವು ರಸ್ತೆಗಳ ಅಭಿವೃದ್ಧಿ ಕಾಮಗಾರಿ ಆರಂಭವಾಗಲಿದೆ ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಮುಖಂಡರಾದ ಇಸ್ಮಾಯಿಲ್ ತಮಟಗಾರ, ದೀಪಕ ಚಿಂಚೋರೆ, ಅನ್ವರ್ ಮುಧೋಳ, ಬಸವರಾಜ ಕಿತ್ತೂರು, ಇಮ್ರಾನ್ ಎಲಿಗಾರ, ಸ್ವಾತಿ ಮಳಗಿ, ಭಾರತಿ ಬದ್ದಿ, ಅಕ್ಕಮ್ಮ ಕಂಬಳಿ, ಬಸವರಾಜ ಮಲಕಾರಿ, ಶಾರುಖ್ ಮುಲ್ಲಾ, ರಫೀಕ್ ದರ್ಗಾದ ಸೇರಿದಂತೆ ಇನ್ನಿತರರಿದ್ದರು.