Advertisement
ಉಪಚುನಾವಣೆಗೆ ಸಿದ್ಧರಾಗುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಿನೇಶ ಗುಂಡೂರಾವ್ ಪಕ್ಷದ ಜಿಲ್ಲಾ ಹಾಗೂ ಬ್ಲಾಕ್ ಅಧ್ಯಕ್ಷರಿಗೆ ಸೂಚನೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಇಂದು ಸಂಕಷ್ಟದಲ್ಲಿದೆ. ಆದರೆ, ಪಕ್ಷದ ಕಾರ್ಯಕರ್ತರು ಧೃತಿಗೆಡದೆ ಪಕ್ಷ ಸಬಲೀಕರಣ ಕಾರ್ಯದಲ್ಲಿ ಬೆನ್ನುಲುಬಾಗಿ ನಿಂತು ಪಕ್ಷವನ್ನು ಪುನಃ ಅಧಿಕಾರಕ್ಕೆ ತರುವಲ್ಲಿ ಪಕ್ಷದೊಂದಿಗೆ ಕೈಜೋಡಿಸಬೇಕು ಎಂದು ಮನವಿ ಸಹ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಚುನಾವಣೆ ತಯಾರಿಗೆ ಅಣಿಯಾಗುತ್ತಿದ್ದಾರೆ.
Related Articles
Advertisement
ಕ್ಷೇತ್ರದಲ್ಲಿ ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಪ್ರಭಾವಿ ನಾಕರಾಗಿದ್ದಾರೆ. ಎರಡು ಬಾರಿ ಶಾಸಕರಾಗಿರುವ ಅನುಭವ ಇರುವ ಬಿ.ಎಚ್. ಬನ್ನಿಕೋಡ ಅವರಿಗೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೊಡುವ ಸಾಧ್ಯತೆ ಇದೆ. ಬನ್ನಿಕೋಡ ಅವರು 1989ರಲ್ಲಿ ಜನತಾದಳದಿಂದ ಪ್ರಥಮ ಬಾರಿಗೆ ಶಾಸಕರಾದವರು. 1994ರಲ್ಲಿ ಜನತಾದಳ ಸ್ಪರ್ಧಿಸಿ ಸೋತರು. 1999ರಲ್ಲಿ ಪಕ್ಷೇತರಾಗಿ ಸ್ಪರ್ಧಿಸಿ ಎರಡನೇ ಬಾರಿ ಶಾಸಕರಾದರು. 2004ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. 2008ರಲ್ಲಿ ಜೆಡಿಎಸ್‌ನಿಂದ, 2013ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಸೋತರು. ಬಳಿಕ ಕಾಂಗ್ರೆಸ್ ಸೇರ್ಪಡೆಯಾದರು.
ಬಿ.ಎಚ್.ಬನ್ನಿಕೋಡ ಅವರನ್ನು ಬಿಟ್ಟರೆ ಕ್ಷೇತ್ರದಲ್ಲಿ ಮೊದಲ ಪಂಕ್ತಿಯ ಪ್ರಭಾವಿ ನಾಯಕರ ಕೊರತೆ ಎದ್ದು ಕಾಣುತ್ತಿದೆ. ಕಾಂಗ್ರೆಸ್ ಬನ್ನಿಕೋಡ ಅವರಿಗೆ ವಯಸ್ಸಿನ ಕಾರಣ ಮುಂದಿಟ್ಟು ಟಿಕೆಟ್ ನಿರಾಕರಿಸಿದರೆ, ಅದೇ ಪ್ರಭಾವ ಗಿಟ್ಟಿಸಿಕೊಳ್ಳಬಹುದಾದ ಅವರ ಮಗ, ಜಿಪಂ ಸದಸ್ಯ ಪ್ರಕಾಶ ಬನ್ನಿಕೋಡ ಅವರಿಗೆ ಟಿಕೆಟ್ ಕೊಡಬಹುದು ಎಂಬ ಲೆಕ್ಕಾಚಾರ ಪಕ್ಷದ ವಲಯದಲ್ಲಿ ನಡೆದಿದೆ.
ಕ್ಷೇತ್ರದ ಉಪಚುನಾವಣೆಯ ಟಿಕೆಟ್ ಆಕಾಂಕ್ಷಿಗಳಲ್ಲಿ ಜಿಪಂ ಮಾಜಿ ಸದಸ್ಯರಾದ ಬಿ.ಎನ್. ಬಣಕಾರ, ಪಿ.ಡಿ. ಬಸನಗೌಡ್ರ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಬಿ. ತಿಪ್ಪಣ್ಣನವರ, ಜಿಪಂ ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಎಸ್.ಕೆ. ಕರಿಯಣ್ಣನವರ ಹಾಲಿ ಜಿಪಂ ಅಧ್ಯಕ್ಷರಾಗಿದ್ದು, ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ ‘ಸಾದರ ಲಿಂಗಾಯತ ಕ್ಷೇತ್ರ’ ಎನಿಸಿಕೊಳ್ಳುವ ಈ ಕ್ಷೇತ್ರದಲ್ಲಿ ನಡೆಯಬಹುದಾದ ಜಾತಿ ಲೆಕ್ಕಾಚಾರದಲ್ಲಿ ಅವರಿಗೆ ಹಿನ್ನೆಡೆಯಾಗುವ ಸಾಧ್ಯತೆ ಎಂಬ ಚರ್ಚೆ ನಡೆದಿದ್ದು, ಕಾಂಗ್ರೆಸ್ ಯಾರಿಗೆ, ಯಾವ ಲೆಕ್ಕಾಚಾರದ ಮೇಲೆ ಟಿಕೆಟ್ ನೀಡಲಿದೆ ಎಂಬುದು ಕುತೂಹಲ ಕೆರಳಿಸಿದೆ.
ರಾಣಿಬೆನ್ನೂರು ರಾಜಕೀಯ: ರಾಣಿಬೆನ್ನೂರು ಕ್ಷೇತ್ರದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಪಿಜೆಪಿಯಿಂದ ಆರ್. ಶಂಕರ್ ಆಯ್ಕೆಯಾಗಿದ್ದರು. ಅವರ ಅನರ್ಹತೆಯಿಂದ ನಡೆಯುವ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಮಾಜಿ ಶಾಸಕ ಕೆ.ಬಿ. ಕೋಳಿವಾಡ ಇಲ್ಲವೇ ಅವರ ಪುತ್ರ ಪ್ರಕಾಶ ಕೋಳಿವಾಡ ಅವರಿಗೆ ಟಿಕೆಟ್ ಕೊಡುವ ಸಾಧ್ಯತೆಯಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆ.ಬಿ. ಕೋಳಿವಾಡ ಅವರು ಆರ್. ಶಂಕರ್ ವಿರುದ್ಧ 4029 ಮತಗಳ ಅಂತರದಲ್ಲಿ ಸೋಲು ಕಂಡಿದ್ದರು.
ಈಗ ಅವರೇ ಈ ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂಬ ಮಾತುಗಳು ಕೇಳಿ ಬರುತ್ತಿದ್ದು, ಇದನ್ನು ಸ್ವತಃ ಕೆ.ಬಿ. ಕೋಳಿವಾಡ ಅವರು ಕಾರ್ಯಕರ್ತರ ಸಭೆಯಲ್ಲಿ ಖಚಿತಪಡಿಸಿದ್ದಾರೆ. ಕೆ.ಬಿ.ಕೋಳಿವಾಡ ಕಾಂಗ್ರೆಸ್‌ನ ಪ್ರಭಾವಿ ಮುಖಂಡರಾಗಿದ್ದು, ಈ ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಅವರು ತಮ್ಮ ಮಗನಿಗೆ ಟಿಕೆಟ್ ಕೊಡಿ ಇಲ್ಲವೇ ತಮಗೇ ಟಿಕೆಟ್ ಕೊಡಿ ಎಂಬ ಪ್ರಸ್ತಾಪ ಪಕ್ಷದ ಹೈಕಮಾಂಡ್ ಮುಂದಿಟ್ಟಿದ್ದರು. ಕೊನೆಗೆ ಪಕ್ಷ ಕೆ.ಬಿ. ಕೋಳಿವಾಡ ಅವರಿಗೇ ಟಿಕೆಟ್ ನೀಡಿತ್ತು. ಈಗ ನಡೆಯಬಹುದಾದ ಉಪಚುನಾವಣೆಯಲ್ಲಿಯೂ ಕೆ.ಬಿ. ಕೋಳಿವಾಡ ತಮ್ಮ ಹಿಂದಿನ ಪ್ರಸ್ತಾವನೆಯನ್ನೇ ಹೈಕಮಾಂಡ್ ಮುಂದಿಡಬಹುದು. ತಂದೆ ಅಥವಾ ಮಗ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ನೀಡಬಹುದು ಎಂಬ ಲೆಕ್ಕಾಚಾರ ನಡೆದಿದೆ. ಕೇವಲ ಒಂದು ವರ್ಷದ ಹಿಂದಷ್ಟೇ ಸೋತ ಕೆ.ಬಿ. ಕೋಳಿವಾಡ ಈ ಉಪಚುನಾವಣೆಯನ್ನು ಸವಾಲಾಗಿ ತೆಗೆದುಕೊಂಡು ತಾವೇ ಸ್ಪರ್ಧಿಸಲು ಇಚ್ಛಿಸಿದ್ದಾರೆ ಎಂಬ ಮಾತುಗಳು ಕಾರ್ಯಕರ್ತರ ವಲಯದಲ್ಲಿ ಕೇಳಿ ಬರುತ್ತಿದ್ದು, ಪಕ್ಷದ ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತದೆಯೋ ಕಾದು ನೋಡಬೇಕಿದೆ.
•ಎಚ್.ಕೆ. ನಟರಾಜ